ಉತ್ತರದಲ್ಲಿ ಬಿಜೆಪಿ ದಿಗ್ವಿಜಯ? ಮತಗಟ್ಟೆ ಸಮೀಕ್ಷೆಗಳಲ್ಲಿ ಕೇಸರಿಪಾಳಯದ್ದೇ ಮೇಲುಗೈ

Published : Mar 10, 2017, 06:23 AM ISTUpdated : Apr 11, 2018, 01:06 PM IST
ಉತ್ತರದಲ್ಲಿ ಬಿಜೆಪಿ ದಿಗ್ವಿಜಯ? ಮತಗಟ್ಟೆ ಸಮೀಕ್ಷೆಗಳಲ್ಲಿ ಕೇಸರಿಪಾಳಯದ್ದೇ ಮೇಲುಗೈ

ಸಾರಾಂಶ

ನಾಳೆ, ಶನಿವಾರ ಹೊರಬೀಳುತ್ತೆ ಫಲಿತಾಂಶ 4 ರಾಜ್ಯದಲ್ಲಿ ಬಿಜೆಪಿ ಮುಂದೆ, ಪಂಜಾಬಲ್ಲಿ ಆಪ್‌-ಕಾಂಗ್ರೆಸ್‌ ಬಿಗ್‌ಫೈಟ್‌ ಉ.ಪ್ರ.ದಲ್ಲಿ ಅಖಿಲೇಶ್‌-ರಾಹುಲ್‌ ಮೈತ್ರಿಗೆ 2ನೇ ಸ್ಥಾನ | ಮಾಯಾ ಬೆಂಬಲವೇ ನಿರ್ಣಾಯಕ | ಮಣಿಪುರದಲ್ಲಿ ಮಾತ್ರ ಬಿಜೆಪಿಯೋ, ಕಾಂಗ್ರೆಸ್ಸೋ ಎಂಬ ಗೊಂದಲ ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೆ ಒಂದೆರಡು ಸ್ಥಾನ ಕೊರತೆ ಉತ್ತರಾಖಂಡದಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ: ಹೆಚ್ಚಿನ ಸಮೀಕ್ಷೆ

ನವದೆಹಲಿ(ಮಾ. 10): ನರೇಂದ್ರ ಮೋದಿ ಸರ್ಕಾರದ ಸಾಧನೆಯ ಜನಮತಗಣನೆ ಎಂದೇ ಪರಿಗಣಿತವಾಗಿರುವ 5 ರಾಜ್ಯಗಳ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಗುರುವಾರ ಸಂಜೆ ಪ್ರಕಟವಾಗಿವೆ. ಇದರಲ್ಲಿ ಬಿಜೆಪಿ ಉತ್ತರಪ್ರದೇಶ, ಉತ್ತರಾಖಂಡ, ಗೋವಾದಲ್ಲಿ ಮುನ್ನಡೆ ಗಳಿಸಲಿದೆ ಎಂಬ ಅಂಶ ಬಹುತೇಕ ಸಮೀಕ್ಷೆಗಳಲ್ಲಿ ವ್ಯಕ್ತವಾಗಿದೆ. ಇನ್ನು ಪಂಜಾಬ್‌'ನಲ್ಲಿ ಅಕಾಲಿ ದಳ-ಬಿಜೆಪಿ ಮೈತ್ರಿಕೂಟದ ಸೋಲು ನಿಶ್ಚಿತ ಎಂದು ಬಹುತೇಕ ಸಮೀಕ್ಷೆಗಳು ನುಡಿದಿದ್ದು, ಕಾಂಗ್ರೆಸ್‌ ಮತ್ತು ಆಪ್‌ ನಡುವೆ ಸಮಬಲದ ಸ್ಪರ್ಧೆಯನ್ನು ಅಂದಾಜಿಸಿವೆ. ಮಣಿಪುರದಲ್ಲಿ ಒಂದೊಂದು ಸಮೀಕ್ಷೆಗಳು ಒಂದೊಂದು ರೀತಿ ವಿಶ್ಲೇಷಿಸಿ ಬಿಜೆಪಿ ಗೆಲ್ಲುವುದೋ, ಕಾಂಗ್ರೆಸ್‌ ಪುನಃ ಅಧಿಕಾರಕ್ಕೆ ಬರುವುದೋ ಎಂಬುದರ ಕುತೂಹಲವನ್ನುಹಾಗೇ ಉಳಿಸಿವೆ.

ಈ ಎಲ್ಲ ಕುತೂಹಲಗಳಿಗೆ ಶನಿವಾರ ನಡೆಯುವ ಮತ ಎಣಿಕೆಯಲ್ಲಿ ತೆರೆ ಬೀಳಲಿದೆ. ಆದರೂ ಅಲ್ಲಿವರೆಗೆ ಕಾಯಲು ಸಿದ್ಧವಿರದ ರಾಜಕೀಯ ಪಕ್ಷಗಳು ಸಮೀಕ್ಷೆಗಳನ್ನೇ ಆಧರಿಸಿ ತಮ್ಮ ಮುಂದಿನ ರಾಜಕೀಯ ಲೆಕ್ಕಾಚಾರದಲ್ಲಿ ನಿರತವಾಗಿವೆ.

ಉತ್ತರಪ್ರದೇಶದಲ್ಲಿ ಕೇಸರಿ ಪಕ್ಷ ಗೆದ್ದರೆ 15 ವರ್ಷ ನಂತರ ಅಧಿಕಾರಕ್ಕೆ ಬಂದಂತಾಗುತ್ತದೆ. ಮಣಿಪುರದಲ್ಲಿ ಬಿಜೆಪಿ ಗೆದ್ದರೆ 15 ವರ್ಷದ ಕಾಂಗ್ರೆಸ್‌ ಆಳ್ವಿಕೆ ಅಂತ್ಯಗೊಳ್ಳಲಿದ್ದು, ಬಿಜೆಪಿಗೆ ಮೊದಲ ಜಯ ದಕ್ಕಲಿದೆ. ಉತ್ತರಾಖಂಡದಲ್ಲಿ 5 ವರ್ಷದ ನಂತರ ಬಿಜೆಪಿಗೆ ಅಧಿಕಾರ ನಿಶ್ಚಿತವೆನ್ನಲಾಗಿದೆ. ಗೋವಾದಲ್ಲಿ ಬಿಜೆಪಿಗಗೆ ಸತತ 2ನೇ ಅವಧಿಗೆ ಗೆಲ್ಲುವ ಆಶಾಭಾವನೆ ಇದೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ವರ್ಷ ನಂತರ ಅಧಿಕಾರಕ್ಕೆ ಬಂದಂತಾಗಲಿದೆ. ಆಪ್‌ ಗೆದ್ದರೆ ಚೊಚ್ಚಲ ಜಯವಾಗಲಿದೆ. 

ಉತ್ತರಪ್ರದೇಶದಲ್ಲಿ ಬಿಜೆಪಿ ಮುಂದೆ: ದೇಶದ ದೊಡ್ಡ ರಾಜ್ಯಉತ್ತರಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಕಟಗೊಂಡ 6 ಸಮೀಕ್ಷೆಗಳಲ್ಲಿ 3 ಸಮೀಕ್ಷೆಗಳು ಬಿಜೆಪಿಗೆ ಬಹುಮತ ಬರಲಿದೆ ಎಂದು ಅಂದಾಜಿಸಿದ್ದರೆ, ಇನ್ನು 3 ಸಮೀಕ್ಷೆಗಳು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಹಾಗೂ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಮುನ್ಸೂಚನೆ ನೀಡಿವೆ. ಅತಂತ್ರ ಸ್ಥಿತಿ ಸೃಷ್ಟಿಯಾದರೆ ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಜೊತೆಗೂಡಿ ಸರ್ಕಾರ ರಚಿಸಲು ತಾವು ಮುಕ್ತರಾಗಿರುವುದಾಗಿ ಎಸ್‌ಪಿ ನೇತಾರ, ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಎಸ್‌ಪಿಯ ಮಾಯಾವತಿ ಕೂಡ ಕಿಂಗ್‌ಮೇಕರ್‌ ಆಗುವ ಕನಸು ಕಾಣುತ್ತಿದ್ದಾರೆ. ಆದರೆ ಟುಡೇಸ್‌ ಚಾಣಕ್ಯ, ಇಂಡಿಯಾ ಟುಡೇ ವಾಹಿನಿಗಳು ಬಿಜೆಪಿಗೆ ಭಾರಿ ಬಹುಮತ ಹಾಗೂ ಟೈಮ್ಸ್‌ ನೌ ಸರಳ ಬಹುಮತ ಬರಬಹುದು ಎಂದು ಅಂದಾಜಿಸಿದ್ದು, ಬಿಜೆಪಿ ಇದೇ ನಿರೀಕ್ಷೆಯಲ್ಲಿದೆ.

ಉತ್ತರಾಖಂಡದ ಬಹುತೇಕ ಸಮೀಕ್ಷೆಗಳು ಬಿಜೆಪಿ ಉತ್ತಮ ಬಹುಮತ ಗಳಿಸಲಿದೆ ಎಂದು ಹೇಳಿವೆ. ಗೋವಾದಲ್ಲಿ 2 ಸಮೀಕ್ಷೆಗಳು ಬಿಜೆಪಿಗೆ ಸರಳ ಬಹುಮತ ಅಂದಾಜಿಸಿವೆ. ಆದರೆ 1 ಸಮೀಕ್ಷೆ ಅತಂತ್ರ ಸ್ಥಿತಿ ಅಂದಾಜಿಸಿದೆ. ಪಂಜಾಬ್‌ನಲ್ಲಿ 2 ಸಮೀಕ್ಷೆಗಳು ಕಾಂಗ್ರೆಸ್‌ ಹಾಗೂ 1 ಸಮೀಕ್ಷೆ ಇದೇ ಮೊದಲ ಬಾರಿ ಸ್ಪರ್ಧೆಗಿಳಿದಿರುವ ಅರವಿಂದ ಕೇಜ್ರಿವಾಲ್‌'ರ ಆಪ್‌ ಗೆಲ್ಲಲಿವೆ ಎಂದು ಹೇಳಿವೆ. 2 ಸಮೀಕ್ಷೆಗಳು ಸಮಬಲದ ಮುನ್ಸೂಚನೆ ನೀಡಿವೆ.

(epaper.kannadaprabha.in)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ದಲಿತರ ಸರ್ವನಾಶ: ಮಾಜಿ ಸಂಸದ ಪ್ರತಾಪ್ ಸಿಂಹ
Karnataka News Live:4 ವರ್ಷಗಳ ಬಳಿಕ ಕೊನೆಗೂ ಜಿಪಂ, ತಾಪಂಗಳಿಗೆ ಏಪ್ರಿಲಲ್ಲಿ ಎಲೆಕ್ಷನ್