ಭಾಸ್ಕರ್ ರಾವ್'ಗೆ ಮಧ್ಯಂತರ ಜಾಮೀನು; ಶೂರಿಟಿ ನೀಡಿದ ಮನೆಗೆಲಸದಾಕೆ

By Suvarna Web DeskFirst Published Nov 28, 2016, 11:01 AM IST
Highlights

ಭಾಸ್ಕರ್ ರಾವ್ ಅವರ ಮನೆಯ ಕೆಲಸದಾಕೆ ಹೆಲೆನ್ ಎಂಬುವವರು ಕೋರ್ಟ್ ಸೂಚನೆ ಮೇರೆಗೆ ಒಂದು ಲಕ್ಷ ರೂಪಾಯಿ ಬಾಂಡ್ ಶೂರಿಟಿ ನೀಡಿ ಜಾಮೀನು ಕೊಟ್ಟಿದ್ದಾರೆ.

ಬೆಂಗಳೂರು(ನ. 28): ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಸಿಲುಕಿರುವ ಮಾಜಿ ಲೋಕಾಯುಕ್ತ ಹಾಗೂ ನಿವೃತ್ತ ನ್ಯಾಯಮೂರ್ತಿ ವೈ. ಭಾಸ್ಕರ್ ರಾವ್ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ನ. 30ರಂದು ಭಾಸ್ಕರ್ ರಾವ್ ಅವರ ತಾಯಿಯ ಪುಣ್ಯ ತಿಥಿ ಇರುವ ಹಿನ್ನೆಲೆಯಲ್ಲಿ ಅವರಿಗೆ ಲೋಕಾಯುಕ್ತ ಕೋರ್ಟ್'ನಲ್ಲಿ ಜಾಮೀನು ಮಂಜೂರಾಗಿದೆ. ಭಾಸ್ಕರ್ ರಾವ್ ಅವರ ಮನೆಯ ಕೆಲಸದಾಕೆ ಹೆಲೆನ್ ಎಂಬುವವರು ಕೋರ್ಟ್ ಸೂಚನೆ ಮೇರೆಗೆ ಒಂದು ಲಕ್ಷ ರೂಪಾಯಿ ಬಾಂಡ್ ಶೂರಿಟಿ ನೀಡಿ ಜಾಮೀನು ಕೊಟ್ಟಿದ್ದಾರೆ.

ಲೋಕಾಯುಕ್ತ ಕಚೇರಿಯಲ್ಲಿ ಡೀಲ್'ಗಳು ನಡೆಯುತ್ತಿದ್ದ ಆರೋಪದೊಂದಿಗೆ ನ್ಯಾ| ಭಾಸ್ಕರ ರಾವ್ ವಿರುದ್ಧ ಲೋಕಾಯುಕ್ತ ಕೋರ್ಟ್'ನಲ್ಲಿ ಪ್ರಕರಣ ದಾಖಲಾಗಿದೆ. ವಿಶೇಷ ತನಿಖಾ ತಂಡ(ಎಸ್'ಐಟಿ) ಈ ಪ್ರಕರಣದಲ್ಲಿ ಚಾರ್ಜ್'ಶೀಟ್ ಕೂಡ ಸಲ್ಲಿಸಿದೆ. ಆದರೆ, ತನ್ನ ವಿರುದ್ಧ ಸಲ್ಲಿಸಿರುವ ಚಾರ್ಜ್'ಶೀಟನ್ನು ರದ್ದು ಮಾಡಿ ತನ್ನನ್ನು ಆರೋಪಿ ಸ್ಥಾನದಿಂದ ತೆಗೆಯಬೇಕೆಂದು ಭಾಸ್ಕರ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಭಾಸ್ಕರ್ ರಾವ್ ತಮ್ಮ ಜೀವಿತಾವಧಿಯಲ್ಲಿ ಮೊದಲ ಬಾರಿಗೆ ಇಂದು ಕೋರ್ಟ್ ಕಟಕಟೆ ಏರಬೇಕಾಯಿತು.

ಭ್ರಷ್ಟರ ಬೇಟೆಯಾಡುವ ಲೋಕಾಯುಕ್ತ ಸಂಸ್ಥೆಯ ಮುಖ್ಯಸ್ಥರಾಗಿದ್ದ ನ್ಯಾ| ಭಾಸ್ಕರ್ ರಾವ್ ಅವರೇ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಕೊಂಡಿರುವುದು ವಿಪರ್ಯಾಸವೇ ಸರಿ ಎನ್ನುವಂತಾಗಿದೆ.

click me!