SI ಮೇಲೆ ಹಲ್ಲೆ ಯತ್ನ : ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ ಅರೆಸ್ಟ್

By Web DeskFirst Published May 13, 2019, 8:49 AM IST
Highlights

ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಎಸ್ ಐ ಮೇಲೆ ಹಲ್ಲೆಗೆ ಯತ್ನಿಸಿದ್ದು, ಸದ್ಯ ಆತನನ್ನು ಬಂಧಿಸಲಾಗಿದೆ. 

ಬೆಂಗಳೂರು :  ಕರ್ತವ್ಯ ನಿರತ ಸಬ್‌ಇನ್ಸ್‌ಪೆಕ್ಟರ್‌ಗಳ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಿವೃತ್ತ ಪೊಲೀಸ್‌ ಅಧಿಕಾರಿಯ ಪುತ್ರನೊಬ್ಬನನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಗೋಪಾಲನಗರ ನಿವಾಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ಪಾಂಡುರಂಗ ಬಂಧಿತ. ಆರೋಪಿ ರಾಜಗೋಪಾಲನಗರ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಶಿವರಾಜ್‌ ಪಾಟೀಲ್‌ ಮತ್ತು ಬಸವರಾಜು ಅವರ ಮೇಲೆ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಹಲ್ಲೆಗೆ ಯತ್ನಿಸಿದ್ದ. ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಿಂತು ಜೋರಾಗಿ ಮಾತನಾಡುತ್ತಿದ್ದರು. ಮನೆಗೆ ಹೋಗಿ ಎಂದು ಹೇಳಿದ್ದ ವಿಚಾರಕ್ಕೆ ಆರೋಪಿ ಹಲ್ಲೆಗೆ ಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.

ಪಾಂಡುರಂಗ ನಗರದ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯ ಉದ್ಯೋಗಿಯಾಗಿದ್ದಾನೆ. ಶನಿವಾರ ರಾತ್ರಿ ರಾಜಗೋಪಾಲನಗರ ಮುಖ್ಯರಸ್ತೆಯ ಸನ್‌ರೈಸ್‌ಬಾರ್‌ ಬಳಿ ಸಿಗರೇಟ್‌ ಸೇದುತ್ತಾ ಸ್ನೇಹಿತರ ಜತೆ ಹರಟೆ ಹೊಡೆÜಯುತ್ತಾ ನಿಂತಿದ್ದ. ಎಲ್ಲರೂ ಮದ್ಯ ಸೇವಿಸಿದ್ದರಿಂದ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಸ್ಥಳೀಯರು ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಸ್ಥಳಕ್ಕೆ ಬಂದ ರಾಜಗೋಪಾಲನಗರ ಠಾಣೆ ಪೊಲೀಸರು ಸ್ಥಳದಿಂದ ಹೊರಡುವಂತೆ ಗುಂಪು ಸೇರಿದ್ದ ಪಾಂಡುರಂಗ ಹಾಗೂ ಆತನ ಸ್ನೇಹಿತರಿಗೆ ಸೂಚಿಸಿದ್ದರು. ಈ ವೇಳೆ ಪೊಲೀಸರ ಜತೆ ನಾವೇಕೆ ಹೊರಡಬೇಕು ಎಂದು ಪೊಲೀಸರ ಜತೆ ವಾಗ್ವಾದಕ್ಕಿಳಿದಿದ್ದ. ಇನ್ನೂ 10 ಗಂಟೆಗೇ ರಸ್ತೆ ಖಾಲಿ ಮಾಡಿಸುತ್ತಿದ್ದೀರಿ. ನಾನೂ ಪೊಲೀಸ್‌ ಅಧಿಕಾರಿಯ ಮಗನೇ. ನನಗೂ ಕಾನೂನು ಗೊತ್ತು. ನಿಮ್ಮ ಯೋಗ್ಯತೆ ಎಂಥಾದ್ದು ಅಂತಲೂ ಗೊತ್ತು. ನಾನು ಇಲ್ಲಿಂದ ಹೋಗಲ್ಲ. ಏನು ಮಾಡ್ತೀರೋ ಮಾಡಿ ಎಂದು ಕಾಲು ಗಂಟೆವರೆಗೂ ಸಬ್‌ ಇನ್ಸ್‌ಪೆಕ್ಟರ್‌ಗಳ ಜತೆ ಮಾತಿನ ಚಕಮಕಿ ನಡೆಸಿದ್ದಲ್ಲದೆ ಆರೋಪಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ.

ಉಳಿದ ಸ್ನೇಹಿತರು ಪಾಂಡುವನ್ನು ಸಮಾಧಾನ ಪಡಿಸಲು ಯತ್ನಿಸಿದರಾದರೂ ಆತ ಸಮಾಧಾನಗೊಳ್ಳದೆ ಸ್ನೇಹಿತರ ಮೇಲೆ ತಿರುಗಿ ಬಿದ್ದಿದ್ದ. ಹಿರಿಯ ಅಧಿಕಾರಿಗಳಿಗೆ ಆರೋಪಿ ವರ್ತನೆ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಬಳಿಕ ಆತನನ್ನು ಬಂಧಿಸಿ, ಠಾಣೆಗೆ ಕರೆ ತಂದಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಾಗೂ ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ತಂದ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

click me!