ಇನ್ನು 6 ತಿಂಗಳು ಈ ಊರಲ್ಲಿ ಗಂಡಸರಿಗೆ ವಿವಾಹ ನಿಷಿದ್ಧ!

Published : May 13, 2019, 08:24 AM IST
ಇನ್ನು 6 ತಿಂಗಳು ಈ ಊರಲ್ಲಿ ಗಂಡಸರಿಗೆ ವಿವಾಹ ನಿಷಿದ್ಧ!

ಸಾರಾಂಶ

ಇನ್ನಾರು ತಿಂಗಳು ಈ ಊರಲ್ಲಿ ಗಂಡಸರಿಗೆ ವಿವಾಹ ನಿಷಿದ್ಧ!| ಮನೆಗೆ ಬಣ್ಣ ಮಾಡಿಸುವಂತಿಲ್ಲ, ಪೊರಕೆ ತರುವಂತಿಲ್ಲ| ಬಾಗಲಕೋಟೆಯ ತುಳಸಿಗೇರಿಯಲ್ಲಿ ಓಕಳಿ ಹಬ್ಬ| ಕಟ್ಟುನಿಟ್ಟಿನ ಸಂಪ್ರದಾಯ

ಈಶ್ವರ ಶೆಟ್ಟರ, ಕನ್ನಡಪ್ರಭ

ಬಾಗಲಕೋಟೆ[ಮೇ.13]: ಸೋಮವಾರ (ಮೇ 13)ದಿಂದ ಆರು ತಿಂಗಳು ಈ ಊರಿನಲ್ಲಿ ಗಂಡು ಮಕ್ಕಳಿಗೆ ಮದುವೆ ಮಾಡುವಂತಿಲ್ಲ. ಮನೆಗಳಿಗೆ ಸುಣ್ಣ- ಬಣ್ಣ ಬಳಿಯುವಂತಿಲ್ಲ. ಕಾರಹುಣ್ಣಿಮೆ ಆಚರಣೆ ಮಾಡುವಂತಿಲ್ಲ. ಜಾನುವಾರುಗಳನ್ನು ಶೃಂಗರಿಸುವಂತೆಯೂ ಇಲ್ಲ, ಮನೆಗೆ ಪೊರಕೆ ತರುವಂತೆಯೂ ಇಲ್ಲ..

ಇಂತಹ ಪದ್ಧತಿಯನ್ನು ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮಸ್ಥರು ಈಗ ಪಾಲಿಸಬೇಕಾಗಿದೆ. ಇದಕ್ಕೆಲ್ಲ ಕಾರಣ ಮಾರುತೇಶ್ವರ ಓಕಳಿ ಆಚರಣೆ!

ಹೌದು, ತುಳಿಸಿಗೇರಿ ಗ್ರಾಮಸ್ಥರು ಮೊದಲು ಐದು ವರ್ಷಗಳಿಗೊಮ್ಮೆ ಆಚರಿಸುತ್ತಿದ್ದ ಮಾರುತೇಶ್ವರ ಓಕಳಿ ಆಚರಣೆಯನ್ನು ನಂತರದ ದಿನಗಳಲ್ಲಿ ಮೂರು ವರ್ಷಕ್ಕೊಮ್ಮೆ ಮತ್ತು ಕಳೆದ 10 ವರ್ಷದಿಂದ ವರ್ಷಕ್ಕೊಮ್ಮೆ ಆಚರಿಸುತ್ತಿದ್ದಾರೆ. ಓಕಳಿ ಆಚರಿಸಿದ ವರ್ಷ ಈ ನಿಯಮಗಳನ್ನು ಗ್ರಾಮಸ್ಥರು ಪಾಲಿಸಲೇಬೇಕು. ಹಬ್ಬ, ಸಂಪ್ರದಾಯವನ್ನು ಸುಮಾರು 400 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಇಂದು ಓಕಳಿ ಆಚರಣೆ:

ಮೇ 13ರಂದು ಗ್ರಾಮದ ಮಾರುತೇಶ್ವರ ಓಕಳಿ ನಡೆಯಲಿದೆ. ನಂತರ ಈ ಗ್ರಾಮದಲ್ಲಿ ತುಳಸಿ ಲಗ್ನದವರೆಗೆ ಸಂಭ್ರಮದ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ. ಗ್ರಾಮದ ಮಾರುತೇಶ್ವರ ದೇವಾಲಯ ಉತ್ತರ ಕರ್ನಾಟಕದ ಪ್ರಮುಖ ಜಾಗೃತ ಸ್ಥಳ. ವರ್ಷವಿಡೀ ಭಕ್ತರಿಂದ ತುಂಬಿ ತುಳುಕುವ ತುಳಸಿಗೇರಿ ಗ್ರಾಮದ ಮಾರುತೇಶನ ಓಕಳಿ ಸಂಪ್ರದಾಯ ಮಾತ್ರ ಅತ್ಯಂತ ವಿಶಿಷ್ಟಮತ್ತು ಅಚ್ಚರಿ ಮೂಡಿಸುತ್ತದೆ. ಓಕಳಿಗಾಗಿ ವಾರವಿಡೀ ಸಿದ್ಧಗೊಳ್ಳುವ ಗ್ರಾಮವು ಜಾತಿ, ಮತ, ಪಂಥ ಮೀರಿ ಎಲ್ಲರನ್ನೊಳಗೊಂಡು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತದೆ.

ಸೋಮವಾರ ನಡೆಯುವ ಓಕಳಿಯ ನಂತರ ತುಳಸಿ ಲಗ್ನದವರೆಗೆ ಅಂದರೆ ಕಾರ್ತಿಕ ಮಾಸದ ಸಂದರ್ಭದವರೆಗೆ ಗ್ರಾಮದಲ್ಲಿರುವ ಯಾವ ಗಂಡು ಮಕ್ಕಳನ್ನು ಮದುವೆ ಮಾಡುವುದಿಲ್ಲ. ಈ ಆಚರಣೆ ಹೆಣ್ಣು ಮಕ್ಕಳ ಮದುವೆಗೆ ಅನ್ವಯಿಸುವುದಿಲ್ಲ. ಗ್ರಾಮದಲ್ಲಿರುವ ಮನೆಗಳಿಗೆ ಸುಣ್ಣ- ಬಣ್ಣಗಳನ್ನು ಹಚ್ಚುವುದಿಲ್ಲ. ಮನೆಗಳಿಗೆ ಪೊರಕೆಗಳನ್ನು ತರುವುದಿಲ್ಲ. ಕಾರಹುಣ್ಣಿಮೆ ಆಚರಣೆ ಮಾಡುವುದಿಲ್ಲ. ಜಾನುವಾರುಗಳನ್ನು ಶೃಂಗರಿಸುವುದಿಲ್ಲ.

3333 ಕೊಡ ಸಾಮರ್ಥ್ಯದ ಓಕಳಿ ಹೊಂಡ:

ಗ್ರಾಮದ ಮಾರುತೇಶ್ವರ ಓಕಳಿ ಸಂಭ್ರಮ ಐದು ವಾರಗಳ ಹಿಂದೆ ಆರಂಭಗೊಂಡಿದ್ದು, ಮೇ 13ರ ಸಾಯಂಕಾಲ ಕೊನೆಗೊಳ್ಳುತ್ತದೆ. 3333 ಕೊಡಗಳ ಸಾಮರ್ಥ್ಯದ ಓಕಳಿ ಹೊಂಡಕ್ಕೆ ಗ್ರಾಮದ ಪ್ರತಿಯೊಬ್ಬರು ಕೊಡಗಳ ಮೂಲಕ ನೀರನ್ನು ಶನಿವಾರವೇ ತಂದು ತುಂಬಿಸಿದ್ದಾರೆ. ಸೋಮವಾರ ದೇವಸ್ಥಾನಕ್ಕೆ ವಿಶೇಷ ನೈವೇದ್ಯ ಮಾಡಿದ ನಂತರ ಗ್ರಾಮದ ಜನತೆ ತುಂಬಿದ ಹೊಂಡದಲ್ಲಿ ಜಿಗಿದು ಓಕಳಿ ಆಡಲಿದ್ದಾರೆ.

1 ಕುಟುಂಬದ ಖರ್ಚಲ್ಲಿ ಹಬ್ಬ

ಇಂತಹ ವಿಶಿಷ್ಟ ಆಚರಣೆ ತುಳಸಿಗೇರಿ ಗ್ರಾಮದಲ್ಲಿ ಸುಮಾರು 400 ವರ್ಷಗಳಿಂದ ನಡೆದುಕೊಂಡು ಬಂದಿದೆ. ವಿಶೇಷವೆಂದರೆ ಇಡೀ ಓಕಳಿ ಹಬ್ಬ, ಪ್ರಸಾದ ಸೇರಿದಂತೆ ಎಲ್ಲ ಖರ್ಚುಗಳನ್ನು ಒಂದೇ ಕುಟುಂಬ ನೋಡಿಕೊಳ್ಳುತ್ತದೆ. ಮುಂದಿನ ಬಾರಿ ಓಕಳಿಗೆ ಒಪ್ಪಿಕೊಂಡ ಮತ್ತೊಂದು ಕುಟುಂಬ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಮಾತ್ರವಲ್ಲ ಮೆಕ್ಸಿಕೋದಲ್ಲೂ ಅದೇ ಕತೆ, ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು; ಬೆಳಗಾವಿ ಸರ್ಕ್ಯೂಟ್ ಹೌಸ್‌ಗೆ ಗಣ್ಯರ ದಂಡು!