
ಶಿವಮೊಗ್ಗ: ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ತೃಪ್ತಿಪಡಿಸಲು ರಮ್ಯ ಗಿಳಿಪಾಠ ಒಪ್ಪಿಸಿದ್ದಾರೆ. ಅವರಿನ್ನೂ ರಾಜಕಾರಣದಲ್ಲಿ ಎಳಸು. ರಾಜಕಾರಣ ಅರಿಯದ ರಮ್ಯ ಅವರಿಗೆ ರಾಷ್ಟ್ರಭಕ್ತ ಸಂಘಟನೆಯಾದ ಆರೆಸ್ಸೆಸ್ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಳಸು ವ್ಯಕ್ತಿತ್ವದ ರಮ್ಯ ತಮ್ಮ ಹೇಳಿಕೆಗಳನ್ನು ತಿದ್ದಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ನೇತೃತ್ವದಲ್ಲಿ ಹಿಂದುಳಿದ ವರ್ಗ ಸಮಾವೇಶವನ್ನು ಏರ್ಪಡಿಸಲು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಂದಾಗಿರುವ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಅವರು, ಸಮಾವೇಶ ನಡೆಸುವುದರಿಂದ ಪಕ್ಷದ ಸಂಘಟನೆಯನ್ನು ಇನ್ನಷ್ಟುಬಲಪಡಿಸಲು ಸಾಧ್ಯವಾಗುತ್ತದೆ. ಜೊತೆಗೆ ಎಸ್ಸಿ, ಎಸ್ಟಿವರ್ಗದವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಯಾವುದೇ ವ್ಯಕ್ತಿಗಾಗಲೀ, ಪಕ್ಷಕ್ಕಾಗಲೀ ಪರ್ಯಾಯವಾಗಿ ಸ್ಥಾಪನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಹಿಂದ ವರ್ಗದವರು ಯಾವುದೇ ಪಕ್ಷಕ್ಕೂ ಗುತ್ತಿಗೆ ಆಗಿಲ್ಲ. ಇಷ್ಟುವರ್ಷಗಳ ಕಾಲ ಕಾಂಗ್ರೆಸ್‌ನವರು ಹಿಂದ ವರ್ಗ ತಮ್ಮ ಪಕ್ಷಕ್ಕೆ ಗುತ್ತಿಗೆ ಎಂದು ಭಾವಿಸಿದ್ದರು. ಇದೀಗ ಬ್ರಿಗೇಡ್ ಹುಟ್ಟಿಕೊಳ್ಳುತ್ತಿದ್ದಂತೆ ಕಾಂಗ್ರೆಸ್‌ನವರಿಗೆ ನಡುಕ ಹುಟ್ಟಿಕೊಂಡಿದೆ. ಹೀಗಾಗಿ ಬ್ರಿಗೇಡ್ ಕುರಿತು ಸ್ವತಃ ಸಿದ್ದರಾಮಯ್ಯ ವೀರಪ್ಪ ಮೊಯ್ಲಿ, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಮುಖಂಡರು ಹೇಳಿಕೆ ನೀಡತೊಡಗಿದ್ದಾರೆ ಎಂದರು.
ಬ್ರಿಗೇಡ್ ಸ್ಥಾಪನೆಯಾಗಿರುವುದು ಕೇವಲ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ತರುವುದು ಮಾತ್ರವಲ್ಲ, ಹಿಂದ ವರ್ಗಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶ ಹೊಂದಿದೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರುವರೆ ವರ್ಷಗಳಲ್ಲಿ ಹಿಂದ ವರ್ಗಗಳಿಗೆ ಏನು ಕೆಲಸ ಮಾಡಿದ್ದಾರೆ ಎಂಬುದರ ಪಟ್ಟಿಕೊಡಲಿ. ಬಿಜೆಪಿ ಅಧಿಕಾರದಲ್ಲಿದ್ದಾಗ ಈ ವರ್ಗಗಳಿಗೆ ಸಾಕಷ್ಟುಅನುಕೂಲ ಕಲ್ಪಿಸಲಾಗಿತ್ತು ಎಂದರು.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.