ಇಂದು ಭಾರತ್ ಬಂದ್ ಬಿಸಿ

By vijaysarathy -First Published Sep 2, 2016, 8:08 AM IST
Highlights

ಬೆಂಗಳೂರು(ಸೆ. 02): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದಿಂದಾಗಿ ಜನಜೀವನ ಸ್ವಲ್ಪಮಟ್ಟಿಗೆ ಅಸ್ತವ್ಯಸ್ತವಾಗಿದೆ. ಪೆಟ್ರೋಲ್ ಬಂಕ್, ಅಂಗಡಿ-ಮುಂಗಟ್ಟುಗಳು ಬಹುತೇಕ ಕಡೆ ಎಂದಿನಂತೆ ತೆರೆದಿವೆ. ರಾಜ್ಯದಲ್ಲಿ ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್'ಗಳ ಸಂಚಾರ ಸ್ಥಗಿತಗೊಂಡಿವೆ. ಖಾಸಗಿ ಬಸ್'ಗಳು ರಸ್ತೆಗಿಳಿದಿವೆ.

ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್‌ನಲ್ಲಿ ಸಾರಿಗೆ ನೌಕರರ ಸಂಘಟನೆಯೂ ಪಾಲ್ಗೊಳ್ಳಲಿದೆ.  ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಸಂಘ, ಲಾರಿ ಮಾಲಿಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಆಟೋ ಚಾಲಕರ ಸಂಘ, ಬ್ಯಾಂಕ್‌ ನೌಕರರ ಸಂಘಗಳು, ವರ್ತಕರ ಸಂಘಗಳು, ವಿದ್ಯಾರ್ಥಿ ಸಂಘಟನೆಗಳು ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿವೆ.

ಬಸ್ ಸಂಚಾರ ಇಲ್ಲದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಪ್ರತಿಭಟನೆ:
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದಲ್ಲಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇಡೀ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಆನೇಕಲ್ ಮತ್ತಿತರ ಕಡೆ ಪ್ರತಿಭಟನಾಕಾರರು ಟಯರ್'ಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ. ಇವನ್ನು ಹೊರತುಪಡಿಸಿ ರಾಜ್ಯ ಬಹುತೇಕ ಕಡೆ ಹಿಂಸಾಚಾರ ಘಟನೆಗಳು ಸದ್ಯ ನಡೆದಿಲ್ಲ.

ಅಗತ್ಯ ಸೇವೆಗಳಿಗಿಲ್ಲ ಅಡ್ಡಿ
ಅಗತ್ಯ ಸೇವೆಗಳಿಗೆ ಯಾವುದೇ ಬಾಧೆ ಇಲ್ಲ. ಹಾಲು ತರಕಾರಿ, ಔಷಧ ಅಂಗಡಿ, ಆಸ್ಪತ್ರೆ, ಆ್ಯಂಬುಲೆನ್ಸ್‌ ಸೇವೆಗೆ ಮುಷ್ಕರ ಅಡ್ಡಿಯಾಗಿಲ್ಲ.

ಯಾವುದೆಲ್ಲಾ ಬಂದ್‌?
ಬಸ್‌ ಸಂಚಾರ, ಆಟೋ, ಲಾರಿ, ಟ್ಯಾಕ್ಸಿ, ವ್ಯಾಪಾರ ವಹಿವಾಟು, ಪೆಟ್ರೋಲ್‌ ಬಂಕ್‌, ಬ್ಯಾಂಕ್‌ ಸೇವೆ, ಐಟಿ ಕಂಪೆನಿಗಳು ನಾಳೆ ಸ್ಥಗಿತಗೊಳ್ಳಲಿವೆ. ಭಾರತ್ ಬಂದ್ ಹಿನ್ನೆಲೆಯಲ್ಲಿ ನಾಳೆ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸುವುದು ಆಯಾ ಜಿಲ್ಲಾಧಿಕಾರಿಗಳಿಗೆ ಬಿಟ್ಟಿದ್ದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

click me!