
ಬೆಂಗಳೂರು (ಫೆ.06): ರಾಯಣ್ಣ ಬ್ರಿಗೇಡ್ ಮೂಲಕ ಹಿಂದುಳಿದ ವರ್ಗಗಳ ಸಂಘಟನೆಗೆ ಮುಂದಾಗಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸೋಮವಾರದಿಂದ ಅದೇ ಕೆಲಸವನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಮೂಲಕ ಅಧಿಕೃತವಾಗಿ ಆರಂಭಿಸಲಿದ್ದಾರೆ.
ಬ್ರಿಗೇಡ್‌ನ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದು ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ (ಒಬಿಸಿ) ಮೋರ್ಚಾದ ಉಸ್ತುವಾರಿಯಾಗಿ ಅದೇ ಸಂಘಟನೆ ಮುಂದುವರೆಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದರು. ಅವರ ಸೂಚನೆ ಹಿನ್ನೆಲೆಯಲ್ಲಿ ಬ್ರಿಗೇಡ್‌ನ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿಯಲು ತೀರ್ಮಾನಿಸಿರುವ ಅವರು ತಮಗೆ ವಹಿಸಿರುವ ಒಬಿಸಿ ಮೋರ್ಚಾದ ಉಸ್ತುವಾರಿ ಜವಾಬ್ದಾರಿಯನ್ನು ನಿಭಾಯಿಸಲು ಸಜ್ಜಾಗಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ಒಬಿಸಿ ಮೋರ್ಚಾ ಉಸ್ತುವಾರಿಯ ಜವಾಬ್ದಾರಿ ಸಿಕ್ಕಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡು ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಜನರ ಸಂಘಟನೆ ಮಾಡುತ್ತೇನೆ. ಸೋಮವಾರದಿಂದ ಹಿಂದುಳಿದ ವರ್ಗಗಳ ವಿವಿಧ ಮುಖಂಡರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಉಸ್ತುವಾರಿಯ ಕೆಲಸ ಆರಂಭಿಸುತ್ತೇನೆ. ಕೆ.ಎಸ್.ಈಶ್ವರಪ್ಪ ಮಾಜಿ ಡಿಸಿಎಂ ರಾಜ್ಯ ಬಿಜೆಪಿಯಲ್ಲಿ ಸಾಕಷ್ಟುಗೊಂದಲ ಮತ್ತು ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಮುಂದಿನ ಸ್ವರೂಪ ಹೇಗಿರಬೇಕು ಎಂಬುದನ್ನು ನಿರ್ಧರಿಸುವ ಸಂಬಂಧ ಇದೇ ತಿಂಗಳ 11ರಂದು ಸಭೆ ಕರೆಯಲಾಗಿದೆ. ಅಂದು ಶಾಸಕರ ಭವನದಲ್ಲಿ ನಡೆಯುವ ಈ ಸಭೆಯಲ್ಲಿ ಈಶ್ವರಪ್ಪ ಅವರೂ ಪಾಲ್ಗೊಳ್ಳಲಿದ್ದು, ಬ್ರಿಗೇಡ್‌ನ ಇತರ ಮುಖಂಡರ ಜತೆ ಚರ್ಚಿಸಿ ಮುಂದಿನ ಸ್ವರೂಪ ನಿರ್ಧರಿಸಲಿದ್ದಾರೆ. ಸದ್ಯದ ಮಾಹಿತಿ ಅನುಸಾರ ಬ್ರಿಗೇಡ್ ಸಂಘಟನೆಯನ್ನು ನಿಲ್ಲಿಸುವುದಿಲ್ಲ. ಬದಲಾಗಿ, ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ರಾಜಕೀಯ ಚಟುವಟಿಕೆಗಳನ್ನು ಕೈಬಿಡಲಾಗುತ್ತದೆ. ಇನ್ನು ಮುಂದೆ ಸಾಮಾಜಿಕ ಉದ್ದೇಶವುಳ್ಳ ಶೈಕ್ಷಣಿಕ, ಆರೋಗ್ಯ, ಸಾಂಸ್ಕೃತಿಕ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಅದರ ಮೊದಲ ಭಾಗವಾಗಿ ಸೋಮವಾರದಿಂದ ಹಿಂದುಳಿದ ವರ್ಗದ ಮುಖಂಡರೊಂದಿಗೆ ಸಮಾಲೋಚನೆ ಆರಂಭಿಸಲಿದ್ದಾರೆ.
ವಿಧಾನಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಈಶ್ವರಪ್ಪ ಸೋಮವಾರದಿಂದ ಶುಕ್ರವಾರದವರೆಗೆ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ಪ್ರತಿದಿನ ಸಂಜೆ ವೇಳೆ ಪಕ್ಷದ ಕಚೇರಿಯಲ್ಲಿ ಮೋರ್ಚಾದ ಪದಾಧಿಕಾರಿಗಳು, ಶಾಸಕರು ಸೇರಿದಂತೆ ಹಿಂದುಳಿದ ವರ್ಗಗಳ ವಿವಿಧ ಮುಖಂಡರೊಂದಿಗೆ ಸಭೆ, ಸಮಾಲೋಚನೆಗಳನ್ನು ನಡೆಸಲು ಉದ್ದೇಶಿಸಿದ್ದಾರೆ. ಜತೆಗೆ ರಾಜ್ಯಾದ್ಯಂತ ಮೋರ್ಚಾದ ಜಿಲ್ಲಾವಾರು ಸಮಾವೇಶಗಳನ್ನು ಹೇಗೆ ಆಯೋಜಿಸುವುದು? ಮೋರ್ಚಾಗಳ ಸಮಾವೇಶಗಳಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರನ್ನು ಹೇಗೆ ಬಳಸಿಕೊಳ್ಳಬೇಕು? ಹಿಂದುಳಿದ ವರ್ಗಗಳ ಜನರನ್ನು ಬಿಜೆಪಿಯತ್ತ ಕರೆತರುವುದು ಹೇಗೆ? ಸಿದ್ದರಾಮಯ್ಯ ನೇತೃತ್ವದ ಸರ್ಕಾರದಿಂದ ಹಿಂದುಳಿದ ವರ್ಗಗಳಿಗೆ ಆಗಿರುವ ನಷ್ಟವೇನು ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಮೋರ್ಚಾ ಅಧ್ಯಕ್ಷ ಪುಟ್ಟಸ್ವಾಮಿ ಸಹಕರಿಸ್ತಾರಾ?: ಈಶ್ವರಪ್ಪ ಅವರು ಮೋರ್ಚಾ ಉಸ್ತುವಾರಿಯಾಗಿ ಕೆಲಸ ಮಾಡಲು ಆರಂಭಿಸಿದರೂ ಒಬಿಸಿ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರು ಎಷ್ಟರಮಟ್ಟಿಗೆ ಸಹಕಾರ ನೀಡುತ್ತಾರೆ ಎಂಬುದು ಇನ್ನೂ ಅನುಮಾನವಾಗಿದೆ. ಈಶ್ವರಪ್ಪ ಅವರನ್ನು ಮೋರ್ಚಾ ಉಸ್ತುವಾರಿಯಾಗಿ ನೇಮಿಸಿರುವುದು ಪುಟ್ಟಸ್ವಾಮಿ ಅವರಿಗೆ ಸಂಪೂರ್ಣ ಸಹಮತವಿಲ್ಲ. ತಾವು ಅಧ್ಯಕ್ಷರಾಗಿರುವಾಗ ಮತ್ತೊಬ್ಬರನ್ನು ಉಸ್ತುವಾರಿಯನ್ನಾಗಿ ನೇಮಿಸುವ ಅಗತ್ಯವೇನಿತ್ತು ಎಂಬ ಧಾಟಿಯಲ್ಲಿಯೇ ಪುಟ್ಟಸ್ವಾಮಿ ಅವರು ತಮ್ಮ ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಜತೆಗೆ ಈಶ್ವರಪ್ಪ ಅವರಿಗೂ ಪುಟ್ಟಸ್ವಾಮಿ ಅವರೊಂದಿಗೆ ಸೇರಿ ಮೋರ್ಚಾದ ಸಭೆ ಸಮಾರಂಭಗಳನ್ನು ಆಯೋಜಿಸುವುದು ಸುಲಭದ ಮಾತೇನಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಇಡಿಯಾಗಿ ಈಶ್ವರಪ್ಪ ಅವರ ಕೈಯಲ್ಲಿತ್ತು. ಅವರು ಕೈಗೊಳ್ಳುವ ನಿರ್ಧಾರಗಳೇ ಅಂತಿಮವಾಗಿರುತ್ತಿದ್ದವು. ಆದರೆ, ಮೋರ್ಚಾದಲ್ಲಿ ಹಾಗಾಗುವುದಿಲ್ಲ. ಒಟ್ಟಾರೆ, ಈಶ್ವರಪ್ಪ ಅವರು ವಹಿಸಿಕೊಂಡಿರುವ ಒಬಿಸಿ ಮೋರ್ಚಾದ ಉಸ್ತುವಾರಿ ಜವಾಬ್ದಾರಿ ಸವಾಲಿನ ರೂಪದಲ್ಲೇ ಎದುರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.