
ಬೆಂಗಳೂರು (ಏ.30): ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೂ, ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿದರೂ ಪಕ್ಷದ ವೇದಿಕೆ ಮೂಲಕ ನಡೆಯಬೇಕು. ಅದಕ್ಕೆ ಪರ್ಯಾಯವಾಗಿ ಬ್ರಿಗೇಡ್ ಅಥವಾ ಇತರೆ ಸಂಘಟನೆಗಳನ್ನು ನಡೆಸುವಂತಿಲ್ಲ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಈ ಬೆಳವಣಿಗೆಯಿಂದ ಬ್ರಿಗೇಡ್ ಸಂಘಟನೆ ಹುಟ್ಟು ಹಾಕಿ ನಂತರ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾಯಕತ್ವದ ವಿರುದ್ಧ ಬಂಡಾಯ ಸಾರಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಅತೃಪ್ತ ಮುಖಂಡರ ನಡೆಗೆ ಹಿನ್ನಡೆ ಉಂಟಾದಂತಾಗಿದೆ. ಈಶ್ವರಪ್ಪ ಅವರು ಇನ್ನು ಮುಂದೆ ಹೇಗೆ ನಡೆದುಕೊಳ್ಳುತ್ತಾರೆ ಮತ್ತು ಅದನ್ನು ಪಕ್ಷದ ಹೈಕಮಾಂಡ್ ಹೇಗೆ ಸ್ವೀಕರಿಸಲಿದೆ ಎಂಬುದು ಕುತೂಹಲಕರವಾಗಿದೆ.
ಮುರಳೀಧರರಾವ್ ಅವರು ಈಶ್ವರಪ್ಪ ನೇತೃತ್ವದಲ್ಲಿ ನಡೆದ ಅತೃಪ್ತ ಮುಖಂಡರ ಸಭೆಯ ಬಗ್ಗೆ ಯಡಿಯೂರಪ್ಪ ದೂರಿನ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದರು. ಎರಡು ದಿನಗಳ ಕಾಲ ಪಕ್ಷದ ವಿವಿಧ ಮುಖಂಡರಿಂದ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಅವರು ಅಭಿಪ್ರಾಯ ಸಂಗ್ರಹಿಸಿದರು. ಅಭಿಪ್ರಾಯ ಸಂಗ್ರಹಣೆ ಪ್ರಕ್ರಿಯೆ ಮುಗಿಸಿ ಭಾನುವಾರ ಸಂಜೆ ದೆಹಲಿಗೆ ತೆರಳುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾವುದೇ ಸಂಘಟನೆಯಲ್ಲಿ ಭಾಗಿಯಾಗುವಂತಿಲ್ಲ’ ಎಂದು ಹೇಳಿದ್ದು ಗಮನಾರ್ಹವಾಗಿತ್ತು.
ಇದುವರೆಗೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಮುರಳೀಧರ ರಾವ್ ಅವರ ಹೇಳಿಕೆಗಳನ್ನು ಉಲ್ಲೇಖಿಸುತ್ತಿದ್ದರು. ಈ ಬಗ್ಗೆ ಅತೃಪ್ತ ಮುಖಂಡರ ಸಭೆಗೂ ಮುನ್ನ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದರು. ಆದರೆ, ಮುರಳೀಧರರಾವ್ ಹಾಗೆ ಹೇಳಿಲ್ಲ ಎಂದೇ ಅತೃಪ್ತ ಮುಖಂಡರು ಪ್ರತಿಪಾದಿಸುತ್ತಿದ್ದರು. ಇದೀಗ ಸ್ವತಃ ಮುರಳೀಧರರಾವ್ ಅವರೇ ಬಹಿರಂಗವಾಗಿ ಹೇಳಿರುವುದು ಅತೃಪ್ತ ಮುಖಂಡರ ಪ್ರತಿಪಾದನೆಗೆ ಪೆಟ್ಟು ಬಿದ್ದಂತಾಗಿದೆ. ಇದು ಸಹಜವಾಗಿಯೇ ಯಡಿಯೂರಪ್ಪ ಅವರಿಗೆ ಬಲ ತಂದಂತಾಗಿದೆ. ಮುರಳೀಧರರಾವ್ ಅವರ ಹೇಳಿಕೆ ಗಮನಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮುಖಂಡರ ವಿರುದ್ಧ ಶಿಸ್ತು ಕ್ರಮ ಜರುಗುವ ಸಂಭವ ಅಲ್ಲಗಳೆಯುವಂತಿಲ್ಲ.
‘ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಬೇಕು. ಬೀದಿಯಲ್ಲಿ, ಮಾಧ್ಯಮದಲ್ಲಿ ಮಾತನಾಡಬಾರದು. ಪಕ್ಷದ ಹೊರತಾದ ಸಂಘಟನೆಗಳಲ್ಲಿ ಯಾರೂ ಪಾಲ್ಗೊಳ್ಳುವಂತಿಲ್ಲ. ಇದು ಪಕ್ಷದ ಸಂಘಟನೆಗೆ ಒಳ್ಳೆಯದಲ್ಲ’ ಎಂದು ಮುರಳೀಧರರಾವ್ ಸ್ಪಷ್ಟಪಡಿಸಿದರು.
ಪಕ್ಷದ ರಾಷ್ಟ್ರೀಯ ವರಿಷ್ಠರು ರಾಜ್ಯದಲ್ಲಿನ ಪ್ರತಿಯೊಂದು ಬೆಳವಣಿಗೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪಕ್ಷವು ಶಿಸ್ತಿನಿಂದ ಕೂಡಿರಬೇಕಾದರೆ ಯಾರೇ ಆಗಲಿ ಪಕ್ಷದ ಚೌಕಟ್ಟು ಮೀರುವಂತಿಲ್ಲ. ಒಂದು ವೇಳೆ ಮೀರಿದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯ ಉಸ್ತುವಾರಿಯಾಗಿರುವ ನಾನಾದರೂ ಸರಿಯೇ, ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದರೆ ನನ್ನ ವಿರುದ್ಧವೂ ಪಕ್ಷದ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಪಕ್ಷದಲ್ಲಿ ಅಶಿಸ್ತು ತೋರಿದ ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪಕ್ಷ ಹೊರತುಪಡಿಸಿ ಇನ್ನಾವುದೇ ಸಂಘಟನೆಗಳಲ್ಲಿ ಭಾಗವಹಿಸಬಾರದು ಎಂಬ ತೀರ್ಮಾನ ಹೊಸದೇನಲ್ಲ. ಈ ಹಿಂದಿನಿಂದಲೂ ಈ ನಿಯಮ ಇದ್ದು, ಇದನ್ನು ಯಾರೂ ಉಲ್ಲಂಘನೆ ಮಾಡುವಂತಿಲ್ಲ ಎಂದು ಖಡಕ್ಕಾಗಿ ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್‌ನ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರ ವಿರುದ್ಧ ಸಂಘಟಿತರಾಗಿ ಹೋರಾಟ ನಡೆಸಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯವನ್ನು ಕಾಂಗ್ರೆಸ್ ಮುಕ್ತವನ್ನಾಗಿಸುವತ್ತ ಗಮನ ಹರಿಸಿದ್ದು, ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ರಾಜ್ಯದ ಬಿಜೆಪಿ ನಾಯಕರು ಬೇರೆ ಯಾವುದೇ ವಿಷಯದತ್ತ ಗಮನಹರಿಸದೆ, ರಾಜ್ಯದಲ್ಲಿ ಪಕ್ಷ ಬಲಗೊಳಿಸುವ ಕಡೆಗೆ ಒತ್ತು ನೀಡಬೇಕು ಎಂದು ಸೂಚಿಸಿದರು.
ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಭಿನ್ನಮತ ಸಹಜ. ಎಲ್ಲಾ ಪಕ್ಷಗಳಲ್ಲೂ ಭಿನ್ನಾಭಿಪ್ರಾಯ ಸಹಜವಾಗಿರುತ್ತದೆ. ನಮ್ಮಲ್ಲಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಪಕ್ಷದ ಕಾರ್ಯಕರ್ತರು, ನಾಯಕರು ನಿರತರಾಗಬೇಕು ಮತ್ತು ಕಾಂಗ್ರೆಸ್ ಸರ್ಕಾರದ ವೈಫಲ್ಯ, ದುರಾಡಳಿತದ ಕುರಿತು ಜನತೆಗೆ ಮನದಟ್ಟು ಮಾಡಿ ಬಿಜೆಪಿಯ ಸಾಧನೆಗಳನ್ನು ತಿಳಿಸಬೇಕು. ಅದನ್ನು ಹೊರತುಪಡಿಸಿ ಇತರೆ ವಿಷಯಗಳತ್ತ ಹೆಚ್ಚಿನ ಗಮನ ಹರಿಸಬಾರದು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.