ಅಂಗನವಾಡಿ ಕಾರ್ಯಕರ್ತೆಯರ ಧರಣಿ ವಾಪಸ್; ಸಿಎಂ ಸಿದ್ದರಾಮಯ್ಯ ಸಂಧಾನ ಸಭೆ ಯಶಸ್ವಿ

By Suvarna Web DeskFirst Published Mar 23, 2017, 1:24 PM IST
Highlights

ಅನ್ನ, ನೀರು, ಶೌಚಕ್ಕೆ ತಾಪತ್ರಯವಿದ್ದರೂ ಲೆಕ್ಕಿಸದೆ ಸಾವಿರಾರು ಕಾರ್ಯಕರ್ತೆಯರು ಮುಷ್ಕರ ನಿರತರಾಗಿದ್ದು ಗಮನಾರ್ಹ.

ಬೆಂಗಳೂರು(ಮಾ. 23): ನಾಲ್ಕು ದಿನಗಳ ನಂತರ ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ನಿಂತಿದೆ. ಸಿಎಂ ನೇತೃತ್ವದಲ್ಲಿ ನಡೆದ ಮತ್ತೊಂದು ಸಂಧಾನ ಸಭೆ ಯಶಸ್ವಿಯಾಗಿದೆ. ಸಂಧಾನಸಭೆ ತಮಗೆ ತೃಪ್ತಿ ತಂದಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಇಂದು ಸಂಜೆ ತಿಳಿಸಿದ್ದಾರೆ. ಮುಷ್ಕರವನ್ನು ಕೈಬಿಡಲಾಗಿದೆ ಎಂದು ಘೋಷಿಸಿದ್ದಾರೆ.

ನಿನ್ನೆ ಕೂಡ ಸಿಎಂ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿತ್ತು. ಆದರೆ, ಅಂಗನವಾಡಿ ಕಾರ್ಯಕರ್ತೆಯರು ಮುಷ್ಕರ ಮುಂದುವರಿಸಲು ನಿರ್ಧರಿಸಿದ್ದರು. ಇಂದು ಮತ್ತೊಂದು ಸುತ್ತಿನ ಸಭೆ ಎರಡು ಗಂಟೆ ಕಾಲ ನಡೆಯಿತು. ಏಪ್ರಿಲ್ 10ರಂದು ಸಚಿವೆ ಉಮಾಶ್ರೀ ಅವರು ಮತ್ತೊಂದು ಸಂಧಾನ ಸಭೆ ನಡೆಸಲಿದ್ದಾರೆ. ಆ ಸಭೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಎಲ್ಲಾ ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ. ಒಂದು ವೇಳೆ, ಆ ಸಭೆಯಲ್ಲಿ ತಮಗೆ ತೃಪ್ತಿಕರವಾದ ಫಲಿತಾಂಶ ಬರಲಿಲ್ಲವೆಂದರೆ ಸಿಎಂ ನಿವಾಸಕ್ಕೆ ಲಗ್ಗೆ ಹಾಕುವುದಾಗಿ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಾರ್ಯಾಧ್ಯಕ್ಷೆ ವರಲಕ್ಷ್ಮೀ ಎಚ್ಚರಿಕೆ ನೀಡಿದ್ದಾರೆ.

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯಾದ್ಯಂತ 10 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ನಾಲ್ಕು ದಿನಗಳಿಂದ ಫ್ರೀಡಂ ಪಾರ್ಕ್'ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅನ್ನ, ನೀರು, ಶೌಚಕ್ಕೆ ತಾಪತ್ರಯವಿದ್ದರೂ ಲೆಕ್ಕಿಸದೆ ಸಾವಿರಾರು ಕಾರ್ಯಕರ್ತೆಯರು ಮುಷ್ಕರ ನಿರತರಾಗಿದ್ದು ಗಮನಾರ್ಹ.

click me!