ಸುಹಾನಾ ಆಯ್ತು; ಇದೀಗ ರಹೀಮ್ ಉಚ್ಚಿಲ್ ವಿರುದ್ಧ ಧರ್ಮಾಂಧರ ಕೆಂಗಣ್ಣು

By Suvarna Web DeskFirst Published Mar 23, 2017, 12:29 PM IST
Highlights

ಮಂಗಳೂರು ಮುಸ್ಲಿಂ ಪೇಜ್ ಮಾತ್ರವಲ್ಲದೆ ಹಲವು ವಾಟ್ಸಾಪ್ ಗ್ರೂಪ್'ಗಳಲ್ಲಿ ಈ ಚಿತ್ರವನ್ನು ಹಾಕಿ ರಹೀಂ ಉಚ್ಚಿಲ್ ಹಿಂದು ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಪ್ರಸಾರ ಮಾಡಲಾಗುತ್ತಿದೆ.

ಮಂಗಳೂರು(ಮಾ. 23): ಮುಸ್ಲಿಂ ಯುವತಿ ಸುಹಾನಾ ಹಿಂದೂ ಧರ್ಮದ ಹಾಡು ಹಾಡಿದ್ದಕ್ಕೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿದ್ದು ಇನ್ನೂ ಹಸಿಯಾಗಿರುವಾಗಲೇ, ಇದೀಗ ಮಂಗಳೂರು ಮುಸ್ಲಿಂ ಫೇಸ್'ಬುಕ್ ಪೇಜ್'ನಲ್ಲಿ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್'ರನ್ನು ನಿಂದಿಸಲಾಗಿದೆ.

ರಹೀಂ ಉಚ್ಚಿಲ್ ಎರಡು ದಿನಗಳ ಹಿಂದೆ ಉಡುಪಿಯಲ್ಲಿ ನಡೆದ ಅಲ್ಪಸಂಖ್ಯಾತ ಮೋರ್ಚದ ಸಭೆಯಲ್ಲಿ ಭಾಗವಹಿಸಿದ್ರು. ಈ ವೇಳೆ ಶ್ರೀಕೃಷ್ಣ ಮಠಕ್ಕೆ ತೆರಳಿ ಪೇಜಾವರ ಸ್ವಾಮೀಜಿಗಳನ್ನು ಭೇಟಿಯಾಗಿದ್ದರು. ಆಗ ಪೇಜಾವರ ಶ್ರೀಗಳು ರಹೀಮ್ ಉಚ್ಚಿಲ್ ಅವರಿಗೆ ಶಾಲು ಹಾಕಿ ಆಶೀರ್ವಚನ ಮಾಡಿದ್ದರು. ಇದನ್ನು ರಹೀಂ ಉಚ್ಚಿಲ್ ಫೇಸ್'ಬುಕ್'ನಲ್ಲಿ ಹಂಚಿಕೊಂಡಿದ್ದರು. ಆದರೆ ಮಂಗಳೂರು ಮುಸ್ಲಿಂ ಪೇಜ್'​​​​​​​​ನಲ್ಲಿ ರಹೀಂ ಉಚ್ಚಿಲ್ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿದೆ.

"ಈ ನಾಮದಾರಿ ಮುಸ್ಲಿಂ ಅಧಿಕಾರಕ್ಕಾಗಿ, ಎಂಜಲು ಕಾಸಿಗಾಗಿ, ಬಾಬರಿ ಮಸೀದಿ ಹೊಡೆದದ್ದು ಸರಿ. ಹೊಡೆದದ್ದು ನಾವೇ ಅಂತ ಹೇಳುವ ವಿಶ್ವ ಹಿಂದು ಪರಿಷತ್ ಗೂಂಡಾಗಳ ಸಂಘಟನೆ ಕೋಮುವಾದಿ ಬಿಜೆಪಿಯ ಸನ್ಯಾಸಿ ಸ್ವಾಮಿಯ ಕಾಲಿಗೆ ಬಿದ್ದಿದ್ದಾನೆ," ಎಂದು ಬರೆಯಲಾಗಿದೆ. ಮಂಗಳೂರು ಮುಸ್ಲಿಂ ಪೇಜ್ ಮಾತ್ರವಲ್ಲದೆ ಹಲವು ವಾಟ್ಸಾಪ್ ಗ್ರೂಪ್'ಗಳಲ್ಲಿ ಈ ಚಿತ್ರವನ್ನು ಹಾಕಿ ರಹೀಂ ಉಚ್ಚಿಲ್ ಹಿಂದು ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದು ಪ್ರಸಾರ ಮಾಡಲಾಗುತ್ತಿದೆ. ಇದರಿಂದ ನೊಂದಿರುವ ರಹೀಂ ಉಚ್ಚಿಲ್ ಮಂಗಳೂರು ಪೊಲೀಸ್ ಕಮೀಷನರ್ ಗೆ ದೂರು ಸಲ್ಲಿಸಿದ್ದಾರೆ.

click me!