ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಗೆ ಭಾವಪೂರ್ಣ ವಿದಾಯ

By Web DeskFirst Published Aug 17, 2018, 5:16 PM IST
Highlights

ದತ್ತು ಪುತ್ರಿ ನಮಿತಾ  ಭಟ್ಟಾಚಾರ್ಯ ಅವರು ಧಾರ್ಮಿಕ ವಿಧಿವಿಧಾನ ಪೂರೈಸಿ ಗಂಧದ ಕಟ್ಟಿಗೆಗಳ ಮೂಲಕ ನಿರ್ಮಿಸಲಾಗಿದ್ದ ಚಿತೆಗೆ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ನೆರವೇರಿಸಿದರು.

ನವದೆಹಲಿ[ಆ.17]: ವಿಶ್ವ ಕಂಡ ಶ್ರೇಷ್ಠ ರಾಜಕಾರಣಿ, ಕವಿ, ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನವದೆಹಲಿಯ ರಾಜ್ ಘಾಟ್ ಹಾಗೂ ವಿಜಯ್ ಘಾಟ್ ಮಧ್ಯೆ ಇರುವ ಯಮುನಾ ನದಿ ತೀರದ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಂಜೆ 4.50 ರ ಸುಮಾರಿಗೆ ವಾಜಪೇಯಿ ಅಮರ್ ರಹೆ ಎಂದು ಸಾವಿರಾರು ಅಭಿಮಾನಿಗಳು ಘೋಷಣೆ ಕೂಗುವ ಮೂಲಕ ಅಂತಿಮ ವಿದಾಯ ಹೇಳಲಾಯಿತು. ವಿವಾದಾತೀತ ಪುರುಷ ಪಂಚಭೂತಗಳಲ್ಲಿ ಲೀನರಾದರು.

ಭಾರತೀಯ ಸೇನೆಯ ಮೂರು ಪಡೆ, ಪೊಲೀಸ್ ತುಕಡಿಗಳಿಂದ ವಿಶೇಷ ಗೌರವ ಸಲ್ಲಿಸಿಲಾಯಿತು. ನಂತರ ದತ್ತುಪುತ್ರಿ ನಮಿತಾ  ಭಟ್ಟಾಚಾರ್ಯ ಅವರು ಧಾರ್ಮಿಕ ವಿಧಿವಿಧಾನ ಪೂರೈಸಿ ಗಂಧದ ಕಟ್ಟಿಗೆಗಳ ಮೂಲಕ ನಿರ್ಮಿಸಲಾಗಿದ್ದ ವಾಜಪೇಯಿ ಅವರ ಪಾರ್ಥಿವ ಶರೀರದ ಚಿತೆಗೆ ಅಗ್ನಿಸ್ಪರ್ಶ ನೆರವೇರಿಸಿದರು. ಸಾರ್ಥಕ  ಜೀವನ ಸಲ್ಲಿಸಿದ ಮೇರು ನಾಯಕನಿಗೆ ದೇಶ, ವಿದೇಶಗಳ ನೂರಾರು ಗಣ್ಯಾತಿಗಣ್ಯರು ಹಾಗೂ ಲಕ್ಷಾಂತರ ಕಾರ್ಯಕರ್ತರು ಅಂತಿಮ ನಮನ ಸಲ್ಲಿಸಿದರು. 

ಕೋಟ್ಯಂತರ ಮಂದಿಯಿಂದ ಮಹಾಪುರುಷನಿಗೆ ಕಂಬನಿ
ಜೀವನದುದ್ದುಕ್ಕು ವಿಶ್ರಾಂತಿಯೇ ಪಡೆಯದ ಯುಗಪುರುಷನಿಗೆ ಕೋಟ್ಯಂತರ ಮಂದಿ ಕಂಬನಿ ಮಿಡಿದರು. ನವದೆಹಲಿಯ ರಾಜ್ಯ ಬಿಜೆಪಿ ಕಚೇರಿಯಿಂದ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೂ ಸುಮಾರು 9 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಾಗಿದ ಮೆರವಣಿಗೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜ್'ನಾಥ್ ಸಿಂಗ್ ಸೇರಿದಂತೆ ಕೇಂದ್ರ ಸಂಪುಟದ ಸಚಿವರು, ವಿವಿಧ ಪಕ್ಷದ ನೂರಾರು ಹಿರಿಯ ನಾಯಕರು ಭಾಗಿಯಾದರು.

ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ , ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನ್'ಮೋಹನ್ ಸಿಂಗ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ, ಪಾಕಿಸ್ತಾನ, ಅಫ್ಘಾನಿಸ್ತಾನ, ಭೂತಾನ್ ಸೇರಿದಂತೆ 7 ದೇಶಗಳ ಗಣ್ಯರು, ಕೇಂದ್ರ ಸಂಪುಟ ಸಚಿವರು, 22 ರಾಜ್ಯಗಳ ಮುಖ್ಯಮಂತ್ರಿಗಳು, 30 ರಾಜ್ಯಗಳ ರಾಜ್ಯಪಾಲರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ಸ್ಮಾರಕಕ್ಕೆ ಒಂದುವರೆ ಎಕರೆ ಪ್ರದೇಶ ಮೀಸಲು
ಯಮುನಾ ನದಿ ತೀರದ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲು ಒಂದೂವರೆ ಎಕರೆ ಸ್ಥಳ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರ ಈ ಸ್ಥಳದಲ್ಲಿ ಭವ್ಯ ಸ್ಮಾರಕವನ್ನು ನಿರ್ಮಿಸಿ ರಾಷ್ಟ್ರೀಯ ಪ್ರವಾಸ ಸ್ಥಳವನ್ನಾಗಿ ಮಾರ್ಪಡಿಸಲಿದೆ.

ಈ ಸುದ್ದಿಯನ್ನು ಓದಿ: ವಾಜಪೇಯಿಗೆ ಅಕ್ಷರ ನಮನ ಸಲ್ಲಿಸಿದ ಕನ್ನಡ ಪತ್ರಿಕೆಗಳು

click me!