
ಮುಂಬೈ(ಸೆ. 30): ಮುಂಬೈನ ಎಲ್ಫಿನ್'ಸ್ಟೋನ್ ರೋಡ್ ರೈಲ್ವೆ ಸ್ಟೇಷನ್'ನಲ್ಲಿ ನಿನ್ನೆ ಸಂಭವಿಸಿದ ಕಾಲ್ತುಳಿತ ದುರಂತದ ವಿಚಾರ ದೇಶಾದ್ಯಂತ ಜೋರು ಸದ್ದು ಮಾಡುತ್ತಿದೆ. ಲೋಕಲ್ ಟ್ರೈನ್'ಗಳ ಸಮಸ್ಯೆ ನಿವಾರಿಸುವವರೆಗೂ ಮುಂಬೈನಲ್ಲಿ ಬುಲೆಟ್ ರೈಲು ಓಡಲು ಬಿಡುವುದಿಲ್ಲ ಎಂದು ಶಿವಸೇನೆ ಪಟ್ಟುಹಿಡಿದೆ. ಎಲ್ಫಿನ್'ಸ್ಟೋನ್ ಸ್ಟೇಷನ್'ನ ಮೇಲ್ಸೇತುವೆ ಸರಿಪಡಿಸದಿದ್ದರೆ ದುರಂತ ಸಂಭವಿಸಬಹುದೆಂದು ಸಿಎಜಿ ವರದಿ ಮಾಡಿತ್ತು. ಮಾಜಿ ಕ್ರಿಕೆಟಿಗ ಹಾಗೂ ರಾಜ್ಯಸಭಾ ಸಂಸದ ಸಚಿನ್ ತೆಂಡೂಲ್ಕರ್, ಶಿವಸೇನೆ ಸಂಸದ ಅರವಿಂದ್ ಸಾವಂತ್ ಸೇರಿದಂತೆ ಸಾಕಷ್ಟು ಜನರು ಈ ಮೇಲ್ಸೇತುವೆಯಿಂದಾಗಬಹುದಾದ ಅನಾಹುತದ ಬಗ್ಗೆ ಹಲವು ಬಾರಿ ಎಚ್ಚರಿಸಿದ್ದುಂಟು. ಆದರೂ ದುರಂತವನ್ನು ತಡೆಯಲು ಸಾಧ್ಯವಾಗಲಿಲ್ಲ.
ಸುರೇಶ್ ಪ್ರಭು ರೈಲ್ವೆ ಸಚಿವರಾಗಿದ್ದಾಗ ಮೇಲ್ಸೇತುವೆ ಸಮಸ್ಯೆ ಸರಿಪಡಿಸಲು 12 ಕೋಟಿ ರೂ ನೀಡಿದ್ದರು. ಆದರೆ, ರೈಲ್ವೆ ಅಧಿಕಾರಿಗಳು ಬಿಡುಗಡೆ ಮಾಡಿದ್ದು ಕೇವಲ 1 ಸಾವಿರ ರೂಪಾಯಿ ಮಾತ್ರ ಎಂದು ನ್ಯೂಸ್18 ಸುದ್ದಿ ವಾಹಿನಿ ವರದಿ ಮಾಡಿದೆ.
1 ಸಾವಿರ ಕೇವಲ ಸಾಂಕೇತಿಕ?
ಆದರೆ, ಒಂದು ಸಾವಿರ ರೂಪಾಯಿ ಬಿಡುಗಡೆ ಕ್ರಮವು ಕೇವಲ ಸಾಂಕೇತಿಕವಾಗಿದ್ದು, ಮೇಲ್ಸೇತುವೆ ಕಾಮಗಾರಿಯ ಅಂದಾಜು ವೆಚ್ಚದ ಪಟ್ಟಿ ಸಿಕ್ಕಾಗ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುವುದು ವಾಡಿಕೆ. ನವೆಂಬರ್ 9ರಂದು ಕಾಮಗಾರಿ ಹಂಚಿಕೆಗಾಗಿ ಟೆಂಡರ್ ಕರೆಯಲಾಗಿತ್ತು. ಆ ಬಳಿಕವಷ್ಟೇ ಕಾಮಗಾರಿಯ ಅಂದಾಜು ವೆಚ್ಚದ ಪಟ್ಟಿ ಸಿಗಲಿದೆ. ಕಾಮಗಾರಿ ಶುರುವಾದ ಬಳಿಕ ಹಂತಹಂತವಾಗಿ ಅಧಿಕಾರಿಗಳು ಅಗತ್ಯದ ಹಣ ಬಿಡುಗಡೆ ಮಾಡುತ್ತಾರೆ, ಎಂದು ರೈಲ್ವೆ ಇಲಾಖೆಯ ಕೆಲ ಮೂಲಗಳು ಹೇಳಿರುವುದನ್ನು ಉಲ್ಲೇಖಿಸಿ ನ್ಯೂಸ್18 ಸ್ಪಷ್ಟನೆಯನ್ನೂ ನೀಡಿದೆ.
ಕೋಳಿ-ಮೊಟ್ಟೆ ಕಥೆ:
ಕಾಮಗಾರಿ ಶುರುವಾದ ಬಳಿಕ ಹಣ ಬಿಡುಗಡೆ ಮಾಡಲಾಗುವುದು ಎಂಬ ರೈಲ್ವೆ ಅಧಿಕಾರಿಗಳ ವಾದದಲ್ಲಿ ಯಾವುದೇ ಹುರುಳಿಲ್ಲ. ಇದೊಂದು ರೀತಿಯಲ್ಲಿ ಕೋಳಿ ಮೊದಲೋ, ಮೊಟ್ಟೆ ಮೊದಲೋ ಎಂಬಂತಾಗಿದೆ ಎಂದು ರೈಲ್ವೆ ತಜ್ಞರು ಹೇಳಿದ್ದಾರೆ.
"ಅಗತ್ಯ ಹಣ ಬಿಡುಗಡೆಯಾಗುವವರೆಗೂ ಯಾವುದೇ ಕಾಮಗಾರಿ ಶುರುವಾಗೋದಿಲ್ಲ. ಟೆಂಡರ್ ಕರೆಯುವ ಮುಂಚಿನ ಕಾರ್ಯಗಳಿಗೂ ಇದು ಅನ್ವಯಿಸುತ್ತದೆ. ಯೋಜನೆ, ನಕ್ಷೆ ಅನುಮೋದನೆ, ಅಂದಾಜು ವೆಚ್ಚದ ಅನುಮೋದನೆ, ಟೆಂಡರ್ ಡಾಕ್ಯುಮೆಂಟ್, ಟೆಂಡರ್ ಆಹ್ವಾನ, ಕಾಮಗಾರಿ ಹಂಚಿಕೆ ಇತ್ಯಾದಿ ಕಾರ್ಯಗಳಿಗೂ ಹಣದ ಬಿಡುಗಡೆ ಆಗಲೇಬೇಕು. ಇಲ್ಲದಿದ್ದರೆ ಆ ಎಲ್ಲಾ ಪ್ರಕ್ರಿಯೆಗಳು ಶುರುವಾಗೋದೇ ಇಲ್ಲ ಎಂದು ಸಂಜೀವ್ ಶಿವೇಶ್ ಎಂಬ ಮಾಜಿ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
ನಿನ್ನೆ, ಎಲ್'ಫಿನ್'ಸ್ಟೋನ್ ರೋಡ್ ರೈಲ್ವೆ ಸ್ಟೇಷನ್ ಮತ್ತು ಪಾವೆಲ್ ರೈಲ್ವೆ ಸ್ಟೇಷನ್'ಗೆ ಕೊಂಡಿಯಾಗಿರುವ ಹಳೆಯ ಮೇಲ್ಸೇತುವೆಯಲ್ಲಿ ಕಾಲ್ತುಳಿತದಿಂದ 22 ಜನರು ಮೃತಪಟ್ಟು 40 ಮಂದಿ ಗಾಯಗೊಂಡಿದ್ದರು. ಮಳೆಯಿಂದಾಗಿ ಅಲ್ಲಿ ನೂಕುನುಗ್ಗಲುಂಟಾಗಿ ಕಾಲ್ತುಳಿತ ದುರಂತ ಸಂಭವಿಸಿತ್ತು. ಮೇಲ್ಸೇತುವೆ ತೀರಾ ಕಿರಿದಾಗಿದ್ದು ದುರಂತಕ್ಕೆ ಪ್ರಮುಖ ಕಾರಣವೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.