ತಾಕತ್ತಿದ್ದರೆ ವೋಟಿಂಗ್ ಮೆಷೀನ್ ಹ್ಯಾಕ್ ಮಾಡಿ: ಚುನಾವಣಾ ಆಯೋಗದಿಂದ ಓಪನ್ ಚಾಲೆಂಜ್

By Suvarna Web DeskFirst Published Apr 12, 2017, 3:08 PM IST
Highlights

ಚುನಾವಣಾ ಆಯೋಗ 2009ರಲ್ಲೂ ಕೂಡ ಇಂಥದ್ದೇ ರೀತಿಯಲ್ಲಿ ಇವಿಎಂ ಮೆಷೀನ್ ಹ್ಯಾಕ್ ಮಾಡಲು ಓಪನ್ ಚಾಲೆಂಜ್ ಹಾಕಿತ್ತು. ಆಗ ಯಾರಿಗೂ ಕೂಡ ಅದನ್ನು ಹ್ಯಾಕ್ ಮಾಡಲು ಆಗಿರಲಿಲ್ಲವಂತೆ.

ನವದೆಹಲಿ(ಏ. 12): ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಪಾಳಯಕ್ಕೆ ಹೆಚ್ಚು ಗೆಲುವು ಪ್ರಾಪ್ತವಾಗಲು ವೋಟಿಂಗ್ ಮೆಷೀನ್ ದುರುಪಯೋಗವೇ ಕಾರಣ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳನ್ನು ಚುನಾವಣಾ ಆಯೋಗ ಇಂದು ಬುಧವಾರ ತರಾಟೆಗೆ ತೆಗೆದುಕೊಂಡಿದೆ. ತಾಕತ್ತಿದ್ದರೆ ಇವಿಎಂ ಮೆಷೀನ್'ಗಳನ್ನು ಹ್ಯಾಕ್ ಮಾಡಿ ನೋಡಿ ಎಂದು ಬಹಿರಂಗ ಸವಾಲು ಹಾಕಿದೆ. "ಮೇ ತಿಂಗಳ ಮೊದಲ ವಾರದಲ್ಲಿ ಯಾವುದೇ ತಂತ್ರಜ್ಞರು, ವಿಜ್ಞಾನಿಗಳು ಬಂದು ಇವಿಎಂ ಮೆಷೀನ್ ಹ್ಯಾಕ್ ಮಾಡಲು ಯತ್ನಿಸಲಿ. ಇಡೀ ಒಂದು ವಾರ ಸಮಯ ತೆಗೆದುಕೊಳ್ಳಲಿ. ಬೇಕಾದರೆ 10 ದಿನ ಸಮಯವನ್ನೂ ನೀಡುತ್ತೇವೆ. ತಾಕತ್ತಿದ್ದರೆ ಹ್ಯಾಕ್ ಮಾಡಿ ತೋರಿಸಲಿ" ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ, ಅದರಲ್ಲೂ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಪಡೆದಿತ್ತು. ವೋಟಿಂಗ್ ಮೆಷೀನ್'ಗಳನ್ನು ಅಗಾಧ ಪ್ರಮಾಣದಲ್ಲಿ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್, ಆಮ್ ಆದ್ಮಿ ಸೇರಿದಂತೆ ಹಲವು ವಿರೋಧ ಪಕ್ಷಗಳು ಗಂಭೀರವಾಗಿ ಆರೋಪಿಸಿವೆ. ಲೋಕಲಭೆಯಲ್ಲಿ ಈ ವಿಷಯವು ಹಲವು ಕಲಾಪಗಳನ್ನೇ ನುಂಗಿಹಾಕಿತು.

ಚುನಾವಣಾ ಆಯೋಗವು ಇವಿಎಂ ಮೆಷೀನ್'ನ್ನು ಹ್ಯಾಕ್ ಮಾಡಲು, ದುರುಪಯೋಗಿಸಲು ಸಾಧ್ಯವಿಲ್ಲ ಎಂದು ಹಲವು ಬಾರಿ ಹೇಳುತ್ತಲೇ ಬಂದಿದೆ. ಇವಿಎಂ ಮೆಷೀನ್ ತಯಾರಿಸಿದ ಸಂಸ್ಥೆಗೇ ಅದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದೂ ಆಯೋಗವು ಹೇಳಿದೆ.

ಚುನಾವಣಾ ಆಯೋಗ 2009ರಲ್ಲೂ ಕೂಡ ಇಂಥದ್ದೇ ರೀತಿಯಲ್ಲಿ ಇವಿಎಂ ಮೆಷೀನ್ ಹ್ಯಾಕ್ ಮಾಡಲು ಓಪನ್ ಚಾಲೆಂಜ್ ಹಾಕಿತ್ತು. ಆಗ ಯಾರಿಗೂ ಕೂಡ ಅದನ್ನು ಹ್ಯಾಕ್ ಮಾಡಲು ಆಗಿರಲಿಲ್ಲವಂತೆ.

click me!