
ಶ್ರೀನಗರ(ಮೇ 27): ಪಾಕ್ ಗಡಿಭಾಗದ ಪ್ರದೇಶಗಳಲ್ಲಿ ಅಡಗಿಕೊಂಡಿದ್ದ ಉಗ್ರರ ವಿರುದ್ಧ ನಡೆದ ಸೇನಾ ಕಾರ್ಯಾಚರಣೆ ಶನಿವಾರವೂ ಮುಂದುವರಿದಿದೆ. ಎರಡು ಪ್ರತ್ಯೇಕ ಎನ್'ಕೌಂಟರ್'ಗಳಲ್ಲಿ 8 ಉಗ್ರರು ಹತರಾಗಿದ್ದಾರೆ. ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮುಖ್ಯಸ್ಥನೆನ್ನಲಾದ ಸಬ್ಜಾರ್ ಭಟ್ ಎಂಬಾತನನ್ನು ಭದ್ರತಾ ಪಡೆಗಳು ಎನ್'ಕೌಂಟರ್'ನಲ್ಲಿ ಹತ್ಯೆಗೈದಿದ್ದಾರೆ. ಪುಲ್ವಾಮಾ ಜಿಲ್ಲೆಯ ತ್ರಾಲ್'ನಲ್ಲಿ ಅಡಗಿಕೊಂಡಿದ್ದ ಸಬ್ಜಾರ್ ಭಟ್ ಹಾಗೂ ಮತ್ತೋರ್ವ ಪಾಕ್ ಮೂಲದ ಉಗ್ರಗಾಮಿಯನ್ನು ರಾಷ್ಟ್ರೀಯ ರೈಫಲ್ಸ್'ನ ಸೈನಿಕರು ಕೊಂದುಹಾಕಿದ್ದಾರೆ. ತ್ರಾಲ್'ನ ಸೈಮುಹ್ ಎಂಬಲ್ಲಿ ಉಗ್ರರು ಅಡಗಿಕೊಂಡಿರುವ ಬಗ್ಗೆ ಮಿಲಿಟರಿ ಗುಪ್ತಚರರು ಮಾಹಿತಿ ನೀಡಿ ಎಚ್ಚರಿಸಿದ್ದರು. ಈ ಪ್ರದೇಶದಲ್ಲಿ ಇನ್ನೂ ಕೆಲ ಉಗ್ರರು ಇರುವ ಮಾಹಿತಿ ಇದ್ದು, ಅವರ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ರಾಮಪುರ ಸೆಕ್ಟರ್'ನಲ್ಲಿ ನಡೆದ ಮತ್ತೊಂದು ಎನ್'ಕೌಂಟರ್'ನಲ್ಲಿ ಭದ್ರತಾ ಪಡೆಗಳು 6 ಉಗ್ರರನ್ನು ಹತ್ಯೆಗೈದಿದ್ದಾರೆ. ಇವರೆಲ್ಲರೂ ಪಾಕಿಸ್ತಾನದಿಂದ ಒಳನುಸುಳಿ ಬಂದ ಉಗ್ರರೆಂಬ ಶಂಕೆ ಇದೆ. ಗಡಿನಿಯಂತ್ರಣ ರೇಖೆಯಲ್ಲಿ ಇಂದು ಬೆಳಗಿನ ಜಾವ ಶಂಕಿತ ಉಗ್ರರು ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿರುವ ವೇಳೆ ಭದ್ರತಾ ಪಡೆಗಳು ಎದುರುಗೊಂಡಿವೆ. ಆಗ ಶಂಕಿತ ಉಗ್ರರು ಗುಂಡಿನ ದಾಳಿಗೆ ಮುಂದಾದಾಗ ಸೇನಾ ಯೋಧರು ಪ್ರತಿದಾಳಿ ನಡೆಸಿ 6 ಮಂದಿಯನ್ನು ಕೊಂದಿದ್ದಾರೆ.
ಸಬ್ಜಾರ್ ಭಟ್ ಸಾಮಾನ್ಯನಲ್ಲ:
ತ್ರಾಲ್ ಸೆಕ್ಟರ್'ನಲ್ಲಿ ರಾಷ್ಟ್ರೀಯ ರೈಫಲ್ಸ್ ಯೋಧರಿಂದ ಹತನಾದ ಸಬ್ಜಾರ್ ಅಹ್ಮದ್ ಭಟ್ ಹಿಜ್ಬುಲ್ ಮುಜಾಹಿದೀನ್'ನ ಟಾಪ್ ಕಮಾಂಡರ್ ಎನ್ನಲಾಗಿದೆ. ಎರಡು ವರ್ಷಗಳ ಹಿಂದೆ ಸೇನಾ ಕಾರ್ಯಾಚರಣೆಯಲ್ಲಿ ಹತ್ಯೆಯಾದ ಬುರ್ಹನ್ ವಾನಿಯ ನಂತರ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ನಾಯಕತ್ವವನ್ನು ಈತನೇ ವಹಿಸಿಕೊಂಡಿದ್ದಾನೆನ್ನಲಾಗಿದೆ. ಕಾಶ್ಮೀರೀ ಪ್ರತ್ಯೇಕತಾವಾದಿಗಳ ಮುಖಂಡನೆನಿಸಿದ್ದ ಬುರ್ಹನ್ ವಾನಿ ಹತ್ಯೆಯಾದಾಗಿನಿಂದ ಕಾಶ್ಮೀರದಲ್ಲಿ ಪ್ರಕ್ಷುಬ್ದ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಕಡೆ ಕಾಶ್ಮೀರೀ ಜನರು ದಂಗೆ ಏಳುತ್ತಿದ್ದಾರೆ. ಸೈನಿಕರ ವಿರುದ್ಧ ದಿನವೂ ಕಲ್ಲುತೂರಾಟದಲ್ಲಿ ತೊಡಗಿದ್ದಾರೆ. ಇದೀಗ, ಹಿಜ್ಬುಲ್ ಮುಜಾಹಿದೀನ್ ಮತ್ತೊಬ್ಬ ಟಾಪ್ ಕಮಾಂಡರ್ ಎನಿಸಿದ್ದ ಸಬ್ಜಾರ್ ಭಟ್ ಕೂಡ ಹತ್ಯೆಯಾಗಿರುವುದು ಕಾಶ್ಮೀರಿ ಪ್ರತ್ಯೇಕತಾವಾದಿ ಹೋರಾಟಕ್ಕೆ ಹಿನ್ನಡೆಯಾದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.