ಆರ್ಥಿಕ ಹಿಂಜರಿತ ಬಗ್ಗೆ ವರದಿ ಕೇಳಿದ ಜಗದೀಶ್ ಶೆಟ್ಟರ್‌

By Web DeskFirst Published Sep 4, 2019, 8:49 AM IST
Highlights

ದೇಶದಲ್ಲಿ ಆರ್ಥಿಕ ಹಿಂಜರಿತ ಎದುರಾಗಿದ್ದು ಇದು ರಾಜ್ಯದ ಮೇಲೆ ಹೆಚ್ಚು ಪರಿಣಾಮ ಉಂಟು ಮಾಡಿಲ್ಲ. ಇದೊಂದು ತಾತ್ಕಾಲಿಕ ವಿದ್ಯಮಾನ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕ ಆಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

ಬೆಂಗಳೂರು [ಸೆ.04]:  ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಕೈಗಾರಿಕೆಗಳ ಮೇಲೆ ಆಗಿರುವ ತೊಂದರೆ, ಉದ್ಯೋಗ ಕಡಿತಗಳ ಬಗ್ಗೆ ತಿಂಗಳೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಸ್ತುತ ಆರ್ಥಿಕ ಹಿಂಜರಿತ ದೇಶದ ಮಟ್ಟದಲ್ಲಿದೆ. ರಾಜ್ಯಕ್ಕೆ ಅಂತಹ ಬಿಸಿ ತಟ್ಟಿಲ್ಲ. ಇದೊಂದು ತಾತ್ಕಾಲಿಕ ಸ್ಥಿತಿಯಾಗಿದ್ದು, ಶೀಘ್ರದಲ್ಲಿ ಅಂತ್ಯವಾಗುವ ನಿರೀಕ್ಷೆ ಇದೆ. ಆದರೂ ಮಾಧ್ಯಮಗಳಲ್ಲಿ ರಾಜ್ಯದಲ್ಲಿನ ಕೈಗಾರಿಕೆಗಳು ಸಂಕಷ್ಟದಲ್ಲಿವೆ, ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂಬ ವರದಿಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ತಿಂಗಳೊಳಗೆ ನಿರ್ದಿಷ್ಟವಾದ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಹೇಳಿದರು.

ಆರ್ಥಿಕ ಪುನಶ್ಚೇತನಕ್ಕೆ ಹಲವು ಮದ್ದು: FPI ಹೆಚ್ಚವರಿ ಶುಲ್ಕ ರದ್ದು!

2ನೇ ಹಂತದ ನಗರಗಳಿಗೆ ಒತ್ತು:  ಬೆಂಗಳೂರು, ಮೈಸೂರು ಸೇರಿದಂತೆ ಕೆಲವೇ ನಗರಗಳಲ್ಲಿ ಕೈಗಾರಿಕೆಗಳ ಬೆಳವಣಿಗೆ ಆಗುತ್ತಿದೆ. ಇದರ ಬದಲು ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬೀದರ್‌, ದಾವಣಗೆರೆ, ಬಾಗಲಕೋಟೆ ಮುಂತಾದ ನಗರಗಳಲ್ಲಿ ಕೈಗಾರಿಕೆಗಳು ವಿಸ್ತರಣೆ ಆಗಬೇಕು. ವಿಶೇಷವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಆರಂಭದಿಂದ ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಆಗಬೇಕು ಎಂದು ಇದೇ ವೇಳೆ ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಹೊಸ ಕೈಗಾರಿಕಾ ನೀತಿ ಜಾರಿಗೆ ಕರಡು ಸಿದ್ಧಗೊಂಡಿದ್ದು, ಅಂತಿಮಗೊಳಿಸಬೇಕಾಗಿದೆ. ಇದಕ್ಕೂ ಮುನ್ನ ಕೈಗಾರಿಕೆಗಳನ್ನು ಪ್ರತಿನಿಧಿಸುವ ಸಂಘ-ಸಂಸ್ಥೆಗಳು, ತಜ್ಞರ ಜೊತೆ ಚರ್ಚೆ, ಬೇರೆ ರಾಜ್ಯಗಳ ಕೈಗಾರಿಕಾ ನೀತಿಗಳ ಅಧ್ಯಯನ ಮಾಡಿದ ನಂತರ ಸಮಗ್ರವಾದ ಕೈಗಾರಿಕಾ ನೀತಿ ಜಾರಿಗೆ ತರಲಾಗುವುದು ಎಂದರು.

ಕೈಗಾರಿಕೆಗಳ ಸ್ಥಾಪನೆಗೆ ಬೇಕಾದ ಭೂಮಿ ಇತ್ಯಾದಿ ಸೌಲಭ್ಯ ನೀಡಲು ಏಕ ಗವಾಕ್ಷಿ ವ್ಯವಸ್ಥೆ ಇದ್ದರೂ ಪರಿಣಾಮಕಾರಿಯಾಗಿಲ್ಲ. ನಿಜವಾದ ಅರ್ಥದಲ್ಲಿ ಏಕ ಗವಾಕ್ಷಿ ವ್ಯವಸ್ಥೆ ಜಾರಿ ಆಗಬೇಕಾಗಿದೆ. ಇದಕ್ಕಾಗಿ ಕೈಗಾರಿಕೆ ಇಲಾಖೆಯ ಮೂಲಕವೇ ಕೈಗಾರಿಕಾ ಸ್ನೇಹಿ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಸಚಿವರು ಹೇಳಿದರು.

ಜಾಗತಿಕ ಹೂಡಿಕೆ ಸಮಾವೇಶ:  ರಾಜ್ಯದಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶವನ್ನು ಬರುವ ಜನವರಿಯಲ್ಲಿ ಮಾಡಲು ಉದ್ದೇಶಿಸಿದ್ದರೂ ಬದಲಾದ ಪರಿಸ್ಥಿತಿಯಲ್ಲಿ ಎರಡು-ಮೂರು ತಿಂಗಳು ತಡವಾಗಬಹುದು. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಶೆಟ್ಟರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಂದಾಲ್‌ ಕಂಪನಿಗೆ ಭೂಮಿ ನೀಡಿಕೆ ಸಂಬಂಧ ಹಿಂದಿನ ಸರ್ಕಾರ ರಚಿಸಿದ್ದ ಸಂಪುಟ ಉಪ ಸಮಿತಿ ನೀಡುವ ವರದಿ ಪರಿಶೀಲಿಸಬೇಕು. ತಾವು ಅಧಿಕಾರ ವಹಿಸಿಕೊಂಡು ಒಂದು ವಾರ ಮಾತ್ರ ಆಗಿದೆ. ಜಿಂದಾಲ್‌ ವಿಚಾರದಲ್ಲಿ ಎಲ್ಲವನ್ನೂ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ವಿಷಯದಲ್ಲಿ ಯಾವುದೇ ವಿಳಂಬವಾಗಿಲ್ಲ ಎಂದರು.

click me!