
ನವದೆಹಲಿ (ಸೆ. 04): ದೇಶಾದ್ಯಂತ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇಂಥ ಹಲ್ಲೆ ಪ್ರಕರಣದ ದೋಷಿಗಳಿಗೆ ಕಠಿಣ ಶಿಕ್ಷೆ ನೀಡುವ ಅಂಶಗಳನ್ನು ಒಳಗೊಂಡ ಕರಡು ಮಸೂದೆಯೊಂದನ್ನು ರೂಪಿಸಿದೆ.
ಇದೇ ವೇಳೆ ಈ ಕರಡು ಮಸೂದೆಯಲ್ಲಿನ ಅಂಶಗಳ ಕುರಿತಂತೆ ಮತ್ತು ಅದನ್ನು ಇನ್ನಷ್ಟುಸಶಕ್ತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು, ಸಾರ್ವಜನಿಕರಿಂದ ಸಲಹೆ, ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಹೀಗಾಗಿ ಮುಂದಿನ 30 ದಿನಗಳ ಅವಧಿಯಲ್ಲಿ ಸಾರ್ವಜನಿಕರು ಈ ಕುರಿತು ತಮ್ಮ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ.
ಸದ್ಯ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಕರಡು ಮಸೂದೆ ಅನ್ವಯ, ವೈದ್ಯರ ಮೇಲಿನ ಹಲ್ಲೆ ಪ್ರಕರಣದ ದೋಷಿಗಳಿಗೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಮತ್ತು ಗರಿಷ್ಠ 10 ಲಕ್ಷ ರು. ದಂಡ ವಿಧಿಸುವ ಅವಕಾಶವನ್ನು ಕಲ್ಪಿಸಲಾಗಿದೆ.
ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ಖಂಡಿಸಿ ಕೆಲ ದಿನಗಳ ಹಿಂದಷ್ಟೇ ವೈದ್ಯ ಸಮುದಾಯದ ದೇಶವ್ಯಾಪಿ ಪ್ರತಿಭಟನೆ ನಡೆಸಿತ್ತು. ಅಲ್ಲದೆ ಇಂಥ ಪ್ರಕರಣಗಳನ್ನು ತಡೆಯಲು ಕಠಿಣ ಕಾಯ್ದೆ ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು. ಈ ವೇಳೆ ವೈದ್ಯರ ಬೇಡಿಕೆ ಈಡೇರಿಸುವ ಭರವಸೆಯನ್ನು ಕೇಂದ್ರ ಸರ್ಕಾರ ನೀಡಿತ್ತು.
- ವೈದ್ಯರು, ವೈದ್ಯಕೀಯ ಸೇವೆ ನೀಡುವ ಯಾವುದೇ ವ್ಯಕ್ತಿಯ ಮೇಲಿನ ದಾಳಿ ಜಾಮೀನು ರಹಿತ ಅಪರಾಧ
- ಇಂಥ ಪ್ರಕರಣಗಳನ್ನು ಡಿಎಸ್‌ಪಿ ಹುದ್ದೆ ಮತ್ತು ಅದಕ್ಕೆ ಮೇಲ್ಪಟ್ಟಅಧಿಕಾರಿ ಮಾತ್ರವೇ ತನಿಖೆ ನಡೆಸಬೇಕು
- ದಾಳಿ ಪ್ರಕರಣದಲ್ಲಿ ಆದ ಆರ್ಥಿಕ, ದಾಖಲಾತಿ ಹಾನಿಯನ್ನು ದೋಷಿಯೇ ಪೂರ್ಣವಾಗಿ ಭರಿಸಿಕೊಡಬೇಕು
- ವೈದ್ಯರು, ನರ್ಸ್, ಡಯಾಗ್ನಸ್ಟಿಕ್ ಸೆಂಟರ್ ಸಿಬ್ಬಂದಿ, ಅ್ಯಂಬುಲೆನ್ಸ್ ಚಾಲಕ ಮತ್ತು ಸಿಬ್ಬಂದಿ, ಪ್ಯಾರಾ ಮೆಡಿಕಲ್ ಸಿಬ್ಬಂದಿಗೂ ಕಾನೂನು ಅನ್ವಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.