ಶೀಘ್ರ ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ಲಿಂಕ್: ಕೇಂದ್ರ ಸರ್ಕಾರ

By Suvarna Web DeskFirst Published Sep 16, 2017, 8:13 AM IST
Highlights

ವಾಹನ ಚಾಲಕರ ಡ್ರೈವಿಂಗ್ ಲೈಸೆನ್ಸ್ (ಚಾಲನಾ ಪರವಾನಗಿ)ಗೆ ಆಧಾರ್ ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಇತ್ತೀಚೆಗೆ ಹೇಳಿತ್ತು. ಇದರ ಬೆನ್ನಲ್ಲೇ ಚಾಲನಾ ಪರವಾನಗಿಯನ್ನು ಆಧಾರ್ ಸಂಖ್ಯೆ ಜೊತೆ ಶೀಘ್ರವೇ ಸಂಯೋಜಿಸುವ ಮಾಹಿತಿ ಈಗ ಹೊರಬಿದ್ದಿದೆ.

ನವದೆಹಲಿ(ಸೆ.16): ವಾಹನ ಚಾಲಕರ ಡ್ರೈವಿಂಗ್ ಲೈಸೆನ್ಸ್ (ಚಾಲನಾ ಪರವಾನಗಿ)ಗೆ ಆಧಾರ್ ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಇತ್ತೀಚೆಗೆ ಹೇಳಿತ್ತು. ಇದರ ಬೆನ್ನಲ್ಲೇ ಚಾಲನಾ ಪರವಾನಗಿಯನ್ನು ಆಧಾರ್ ಸಂಖ್ಯೆ ಜೊತೆ ಶೀಘ್ರವೇ ಸಂಯೋಜಿಸುವ ಮಾಹಿತಿ ಈಗ ಹೊರಬಿದ್ದಿದೆ.

ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ವಿದ್ಯುನ್ಮಾನ ಸಚಿವ ರವಿಶಂಕರ್ ಪ್ರಸಾದ್ ಖುದ್ದು ಶುಕ್ರವಾರ ಈ ವಿಷಯ ತಿಳಿಸಿದ್ದಾರೆ. ಆಧಾರ್ ನಿಂದ ವ್ಯಕ್ತಿಯ ಖಾಸಗಿತನದ ಹಕ್ಕಿನ ಉಲ್ಲಂಘನೆ ಆಗಲಿದೆಯೇ ಎಂದು ಸುಪ್ರೀಂಕೋರ್ಟ್ ಇನ್ನೂ ತನ್ನ ತೀರ್ಪು ನೀಡಬೇಕಿದ್ದು, ನವೆಂಬರ್‌ನಲ್ಲಿ ತೀರ್ಪು ಬರುವ ನಿರೀಕ್ಷೆ ಇದೆ. ಇದರ ಬೆನ್ನಲ್ಲೇ ಸಚಿವರ ಹೇಳಿಕೆ ಹೊರಬಿದ್ದಿದೆ.

‘ನಾವು ಚಾಲನಾ ಪರವಾನಗಿಯನ್ನು ಆಧಾರ್ ಜೊತೆ ಸಂಯೋಜಿಸಲು ಯೋಜಿಸಿದ್ದೇವೆ. ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಬಳಿ ಮಾತುಕತೆ ನಡೆಸಲಾಗಿದೆ. ಇದು ಶೀಘ್ರ ಕೈಗೂಡುವ ನಿರೀಕ್ಷೆ ಇದೆ’ ಎಂದು ರವಿಶಂಕರ್ ಪ್ರಸಾದ್ ಅವರು ಡಿಜಿಟಲ್ ಹರ್ಯಾಣ ಶೃಂಗ- 2017ರ ಸಂದರ್ಭದಲ್ಲಿ ಹೇಳಿದರು.

ಡ್ರೈವಿಂಗ್ ಲೈಸೆನ್ಸ್ ಜೊತೆ ಆಧಾರ್ ಸಂಯೋಜನೆ ಸರ್ಕಾರದ ಕಾರ್ಯಸೂಚಿಯಲ್ಲಿದ್ದರೂ, ಅದನ್ನಿನ್ನೂ ಜಾರಿಗೊಳಿಸಲು ಈವರೆಗೆ ಮುಂದಾಗಿರಲಿಲ್ಲ. ಆದರೆ ಎರಡೆರಡು ಡ್ರೈವಿಂಗ್ ಲೈಸೆನ್ಸನ್ನು ಮಾಡಿಸಿಕೊಂಡು ಕಾನೂನಿನ ಕಣ್ಣಿಗೆ ಮಣ್ಣೆರಚುವ ಕೃತ್ಯ ನಡೆಯುತ್ತಲೇ ಇವೆ. ಇದೇ ವೇಳೆ ಅಪಘಾತ ನಡೆಸಿ ಅಥವಾ ರಸ್ತೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಚಾಲನಾ ಪರವಾನಗಿ ಜಪ್ತಾಗಿದ್ದರೂ ಇನ್ನೊಂದು ಡಿ.ಎಲ್. ಮಾಡಿಸಿಕೊಂಡು ಆ ಕೃತ್ಯಗಳಿಂದ ಪಾರಾಗುವ ಯತ್ನಗಳೂ ನಡೆದ ಉದಾಹರಣೆಗಳಿವೆ. ಹೀಗಾಗಿ ಈ ಪ್ರವೃತ್ತಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

57 ಸಾವಿರ ಕೋಟಿ ಉಳಿತಾಯ:

ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಕಡ್ಡಾಯವಾಗಿದ್ದರಿಂದ ಸೋರಿಕೆ ನಿಯಂತ್ರಣಕ್ಕೆ ಬಂದಿದ್ದು, ಕಳೆದ ವಿತ್ತೀಯ ವರ್ಷದಲ್ಲಿ 57 ಸಾವಿರ ಕೋಟಿ ರು. ಉಳಿತಾಯವಾಗಿದೆ ಎಂದು ರವಿಶಂಕರಪ್ರಸಾದ್ ಇದೇ ವೇಳೆ ಹೇಳಿದರು. ಅಲ್ಲದೆ, ಆಧಾರ್ ದತ್ತಾಂಶ ದುರ್ಬಳಕೆ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.

 

 

 

 

 

 

 

 

 

 

click me!