ಚಳಿಗಾಲದಲ್ಲೇ ಕಲಬುರಗಿಯಲ್ಲಿ ನೀರಿನ ಸಮಸ್ಯೆ

Published : Dec 16, 2018, 11:47 AM IST
ಚಳಿಗಾಲದಲ್ಲೇ ಕಲಬುರಗಿಯಲ್ಲಿ ನೀರಿನ ಸಮಸ್ಯೆ

ಸಾರಾಂಶ

ಕಲಬುರಗಿ ಜಿಲ್ಲಾದ್ಯಂತ ಭೀಕರ ಬರಗಾಲದ ಪರಿಸ್ಥಿತಿ ತಲೆದೋರಿದೆ. ಕೃಷಿಯ ವಿಚಾರ ಒತ್ತಟ್ಟಿಗಿರಲಿ, ಜಿಲ್ಲೆಯ 129 ಹಳ್ಳಿಯಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗಿದೆ.

ಕಲಬುರಗಿ :  ಮುಂಗಾರು ಹಾಗೂ ಹಿಂಗಾರು ಹೀಗೆ ಎರಡೂ ಹಂಗಾಮಿನಲ್ಲಿ ಮಳೆಯ ತೀವ್ರ ಕೊರತೆಯಿಂದಾಗಿ ಕಲಬುರಗಿ ಜಿಲ್ಲಾದ್ಯಂತ ಭೀಕರ ಬರಗಾಲದ ಪರಿಸ್ಥಿತಿ ತಲೆದೋರಿದೆ. ಕೃಷಿಯ ವಿಚಾರ ಒತ್ತಟ್ಟಿಗಿರಲಿ, ಜಿಲ್ಲೆಯ 129 ಹಳ್ಳಿಯಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಇದು 350 ದಾಟುವ ಆತಂಕ ಸೃಷ್ಟಿಯಾಗಿದೆ. 1972ರಲ್ಲಿಯೂ ಜಿಲ್ಲೆ ತೀವ್ರ ಅನಾವೃಷ್ಟಿಗೆ ತುತ್ತಾಗಿತ್ತು. ಆದರೆ, 2018ರ ಬರ ಬಹತ್ತರ್‌(72ರ) ಬರಗಾಲಕ್ಕಿಂತಲೂ ಭೀಕರವಾಗಿದೆ ಎಂಬುದು ಇಲ್ಲಿನ ನಾಗರಿಕರ ಅಳಲಾಗಿದೆ.

1972ರ ಬರಗಾಲದಲ್ಲಿ ಮಳೆಯೇ ಬಂದಿರಲಿಲ್ಲ. ಹೀಗಾಗಿ ರೈತರು ಬಿತ್ತನೆಯನ್ನೇ ಮಾಡಿರಲಿಲ್ಲ. ಆದರೆ ಈ ಬಾರಿ ಮಳೆ ಮೊದಲು ಅಲ್ಪ ಪ್ರಮಾಣದಲ್ಲಿ ಸುರಿದು ರೈತರ ಮನದಲ್ಲಿ ಆಸೆ ಹುಟ್ಟಿಸಿತ್ತು. ಬಳಿಕ ಮಾಯವಾಯಿತು. ಮಳೆ ಬರುವುದೆಂಬ ಆಸೆಯಲ್ಲಿಯೇ ರೈತ ಇದ್ದಬದ್ದ ಹಣ, ಬೀಜ, ಗೊಬ್ಬರ ಎಲ್ಲವನ್ನೂ ಭೂಮಿಗೆ ಸುರಿದು ಇದೀಗ ಕಂಗಾಲಾಗಿದ್ದಾನೆ.

ಮುಂಗಾರಿನಲ್ಲಿ ಶೇ.50, ಹಿಂಗಾರಿನಲ್ಲಿ ಶೇ.69 ಮಳೆ ಕೊರತೆ ಜಿಲ್ಲೆಯನ್ನು ಕಾಡಿದೆ. ಮುಂಗಾರಿನಲ್ಲಿ 6.7 ಲಕ್ಷ ಹೆಕ್ಟೇರ್‌ ಬಿತ್ತನೆ ಪ್ರದೇಶದಲ್ಲಿ 6.50 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದ್ದು, ಈ ಪೈಕಿ 4.73 ಲಕ್ಷ ಹೆಕ್ಟೇರ್‌ ತೊಗರಿ ಆವರಿಸಿದೆ. ಅಫಜಲಪುರ, ಜೇವರ್ಗಿ, ಕಲಬುರಗಿ ತಾಲೂಕಿನಲ್ಲಿ ತೇವಾಂಶ ಕೊರತೆ ಕಾಡಿದ್ದರಿಂದ ಇಲ್ಲಿ ತೊಗರಿ ಹಾಳಾಗಿದೆ. ಹಿಂಗಾರಿನಲ್ಲಿನ 3.33 ಲಕ್ಷ ಹೆಕ್ಟೇರ್‌ ಬಿತ್ತನೆ ಪ್ರದೇಶದಲ್ಲಿ ಜೋಳ, ಕಡಲೆ ಶೇ.54ರಷ್ಟುಬಿತ್ತನೆಯಾಗಿದ್ದರೂ ಮಳೆ ಬಾರದೆ ತೇವಾಂಶ ಕೊರತೆ ಎದುರಾಗಿ ಬೆಳೆ ಬೆಳವಣಿಗೆ ಕುಂಠಿತಗೊಂಡು ರೈತರು ಚಿಂತೆಯಲ್ಲಿದ್ದಾರೆ.

247 ಕೋಟಿ ಬೆಳೆಹಾನಿ:

7 ತಾಲೂಕುಗಳ ಪೈಕಿ ಆಳಂದ ಹೊರತುಪಡಿಸಿ ಅಫಜಲ್ಪುರ, ಚಿತ್ತಾಪುರ, ಚಿಂಚೋಳಿ, ಸೇಡಂ, ಕಲಬುರಗಿ ಹಾಗೂ ಜೇವರ್ಗಿ ತಾಲೂಕುಗಳು ಬರಗಾಲ ಪೀಡಿತ ಎಂದು ಘೋಷಿತವಾಗಿವೆ. ಇಲ್ಲೆಲ್ಲಾ ಕೃಷಿ, ಕಂದಾಯ ತೋಟಗಾರಿಕೆ ಇಲಾಖೆಗಳ ಜಂಟಿ ಬೆಳೆಹಾನಿ ಸಮೀಕ್ಷೆ ಮೊದಲ ಹಂತದಲ್ಲಿ ಕೈಗೊಳ್ಳಲಾಗಿದ್ದು ಅದರಂತೆ 3.61 ಲಕ್ಷ ಹೆಕ್ಟೇರ್‌ನಲ್ಲಿ ಅಂದರೆ ಶೇ.40 ರಷ್ಟುಬೆಳೆಹಾನಿಯಾಗಿದೆ. ಮೊದಲ ಹಂತದಲ್ಲೇ 247.72 ಕೋಟಿ ರು. ಬೆಳೆಹಾನಿ ಆಗಿದೆ ಎಂದು ಲೆಕ್ಕ ಹಾಕಲಾಗಿದೆ.

ಕುಡಿವ ನೀರಿಗೆ ಹಾಹಾಕಾರ:

ಆಳಂದ, ಅಫಜಲ್ಪುರದಲ್ಲಿ ತೆರೆದ ಬಾವಿಗಳು ಬತ್ತಿಹೋಗಿದ್ದು ಅಂತರ್ಜಲ ಮಟ್ಟವೇ 1200 ಅಡಿ ಆಳಕ್ಕೆ ಹೋಗಿದೆ. ಹೀಗಾಗಿ ರೈತರು 5ರಿಂದ 6 ಕಿ.ಮೀ. ದೂರದವರೆಗೆ ಹಸಿಮೇವು ಹಾಗೂ ನೀರಿಗಾಗಿ ದನಕರುಗಳೊಂದಿಗೆ ಅಡ್ಡಾಡುವ ನೋಟಗಳು ಜಿಲ್ಲೆಯಲ್ಲಿ ಚಳಿಗಾಲದಲ್ಲೇ ಕಂಡು ಬರುತ್ತಿವೆ. ಸೇಡಂ ವ್ಯಾಪ್ತಿಯ 7 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ಹಾಗೂ 5 ಹಳ್ಳಿಗಳಿಗೆ ಖಾಸಗಿ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಭೀಮಾ, ಅಮರ್ಜಾ, ಬೆಣ್ಣೆತೊರಾ, ಕಾಗಿಣಾ, ಕಮಲಾವತಿ, ಗಂಡೋರಿ, ಮುಲ್ಲಾಮಾರಿ ನದಿಗಳಲ್ಲಿ ನೀರು ಬತ್ತಿ ಹೋಗಿ ಆತಂಕ ಇಮ್ಮಡಿಸಿದೆ.

ಹಸಿ ಮೇವಿನ ಬರ:

ಜಿಲ್ಲೆಯಲ್ಲಿ ಜಾನುವಾರುಗಳಿಗೆ ನೀರಿನೊಂದಿಗೆ ವಿಪರೀತ ಮೇವಿನ ಕೊರತೆ ಕಾಡುತ್ತಿದ್ದು, ಸದ್ಯ ಜನವರಿ ತಿಂಗಳಿಗಾಗುವಷ್ಟುಮಾತ್ರ ದಾಸ್ತಾನು ಇದೆ. ಹೀಗಾಗಿ ರೈತರು ತಮ್ಮ ಎತ್ತು ದನಕರುಗಳನ್ನು ಮಾರಾಟ ಮಾಡುತ್ತಾ, ಸಂತೆಗೆ ಹೊರಟಿದ್ದಾರೆ. ಅತ್ಯಂತ ಅಗ್ಗದ ದರದಲ್ಲಿ ಎತ್ತುಗಳನ್ನು ಮಾರಾಟ ಮಾಡುವಲ್ಲಿ ತೊಡಗಿದ್ದಾರೆ.

27 ರೈತರು ಆತ್ಮಹತ್ಯೆ:

ಮುಂಗಾರು ಆರಂಭದಲ್ಲಿ ಅಲ್ಪಸ್ವಲ್ಪ ಮಳೆ ಬಂದು ರೈತರದಲ್ಲಿ ಹರ್ಷ ತಂದಿತ್ತು. ಆಶಾಭಾವನೆಯಲ್ಲಿಯೇ ಬಿತ್ತನೆ ಮಾಡಿದ್ದ. ಆದರೆ, ನಂತರದ ಹಂತದಲ್ಲಿ ಮಳೆ ಕೈಕೊಟ್ಟಿತು. ಇದರ ಪರಿಣಾಮ ರೈತನ ಶ್ರಮ, ಹಣ ಎರಡೂ ವ್ಯರ್ಥವಾಗಿದೆ. ಮಾಡಿರುವ ಸಾಲ ತೀರಿಸಲಾಗದೇ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಈ ವರ್ಷ ಜಿಲ್ಲೆಯಲ್ಲಿ 27 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುಳೆ ಅನಿವಾರ್ಯ

ಬರಗಾಲದಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಜಿಲ್ಲಾದ್ಯಂತ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಉದ್ಯೋಗ ಖಾತ್ರಿ ಯೋಜನೆಯೂ ಸಹಿತ ಇನ್ನೂ ಪ್ರಾರಂಭವಾಗಿಲ್ಲ. ಇದರಿಂದಾಗಿ ಈ ಜಿಲ್ಲೆಯ ಆಳಂದ, ಅಫಜಲ್ಪುರ ಹಾಗೂ ಕಲಬುರಗಿ ತಾಲೂಕಿನ ಕೃಷಿ ಕಾರ್ಮಿಕರು ಕೆಲಸ ಅರಸಿ ಮುಂಬೈ, ಸೋಲಾಪುರ, ಪೂಣೆ ಮತ್ತು ಬೆಂಗಳೂರು ನಗರಗಳಿಗೆ ಗುಳೆ ಹೊರಟಿದ್ದಾರೆ. ರೈತರ ಕುಟುಂಬಗಳು ಸ್ಥಳೀಯವಾಗಿ ಲಭ್ಯವಿರುವ ಇಟ್ಟಂಗಿ ಭಟ್ಟಿಗಳಲ್ಲಿ ಕೆಲಸಕ್ಕೆ ಹೊರಟಿದ್ದಾರೆ.

ಉದ್ಯೋಗ ಖಾತ್ರಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಜಿಲ್ಲೆಯಿಂದ ಯಾರೊಬ್ಬರೂ ಗುಳೆ ಹೋಗದಂತೆ ತಡೆಯಬೇಕೆಂದು ಸೂಚಿಸಿರುವೆ. ಕೂಡಲೇ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ಬೆಳೆ ಹಾನಿ ಕುರಿತು ಪರಿಷ್ಕೃತ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.

-ವೆಂಕಟೇಶ ಕುಮಾರ್‌, ಕಲಬುರಗಿ ಜಿಲ್ಲಾಧಿಕಾರಿಗಳು

ವರದಿ :  ಶೇಷಮೂರ್ತಿ ಅವಧಾನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ