ವಿಷ ಪ್ರಸಾದ: ಇನ್ನೂ 29 ಮಂದಿ ಸ್ಥಿತಿ ಗಂಭೀರ

By Web DeskFirst Published Dec 16, 2018, 11:37 AM IST
Highlights

 ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ಅಸ್ವಸ್ಥಗೊಂಡಿರುವ 93 ಮಂದಿಯನ್ನು ಮೈಸೂರಿನ ವಿವಿಧ ಆಸ್ಪತೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ 29 ಮಂದಿಯ ಸ್ಥಿತಿ ಗಂಭೀರವಾಗಿದೆ.

ಮೈಸೂರು :  ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ಅಸ್ವಸ್ಥಗೊಂಡಿರುವ 93 ಮಂದಿಯನ್ನು ಮೈಸೂರಿನ ವಿವಿಧ ಆಸ್ಪತೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ 29 ಮಂದಿಯ ಸ್ಥಿತಿ ಗಂಭೀರವಾಗಿದೆ.

ವಿಷ ಪ್ರಸಾದ ಸೇವನೆಯಿಂದ ಅಸ್ವಸ್ಥರಾದವರನ್ನು ರಾಮಾಪುರ, ಹನೂರು, ಕಾಮಗೆರೆ, ಕೊಳ್ಳೇಗಾಲ ಆಸ್ಪತ್ರೆಗಳಿಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆದರೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲಾ 93 ಮಂದಿಯನ್ನು ಮೈಸೂರಿನ 8 ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್‌ ಮೂಲಕ ಕರೆತಂದು ದಾಖಲಿಸಲಾಗಿದೆ.

ಪ್ರಸ್ತುತ ಕೆ.ಆರ್‌.ಆಸ್ಪತ್ರೆಯಲ್ಲಿ 30, ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ 16, ಬಿಜಿಎಸ್‌ ಅಪೋಲೊ ಆಸ್ಪತ್ರೆಯಲ್ಲಿ 13, ಕಾವೇರಿ ಆಸ್ಪತ್ರೆಯಲ್ಲಿ 11, ಗೋಪಾಲಗೌಡ ಆಸ್ಪತ್ರೆಯಲ್ಲಿ 6, ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ 5, ಸುಯೋಗ್‌ ಆಸ್ಪತ್ರೆಯಲ್ಲಿ 11, ಭಾನವಿ ಆಸ್ಪತ್ರೆಯಲ್ಲಿ ಒಬ್ಬರನ್ನು ದಾಖಲಿಸಲಾಗಿದೆ. 93 ಅಸ್ವಸ್ಥರ ಪೈಕಿ 29 ಮಂದಿಯ ಸ್ಥಿತಿ ಗಂಭೀರವಾಗಿದೆ. ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಚಾಮರಾಜನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಪ್ರಸಾದ್‌ ತಿಳಿಸಿದ್ದಾರೆ.

ನರಳಾಟ, ಒದ್ದಾಟ, ಕೂಗಾಟ:  ವಿಷ ಪ್ರಸಾದ ತಿಂದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರು ನೋವಿನಿಂದ ಕೂಗಾಡುತ್ತ, ನರಳಾಡುತ್ತ, ಒದ್ದಾಡುತ್ತಿದ್ದಾರೆ. ಸ್ವತಃ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳ ಪರಿಸ್ಥಿತಿಯನ್ನು ಕಂಡು ಮರಗುತ್ತಿದ್ದಾರೆ. ಕೆ.ಆರ್‌.ಆಸ್ಪತ್ರೆಯಲ್ಲಿ ಕೆಲವರ ನರಳಾಟ, ಒದ್ದಾಟ, ಕೂಗಾಟವನ್ನು ನೋಡಲಾರದ ಸಿಬ್ಬಂದಿ, ಅವರನ್ನು ನಿಯಂತ್ರಿಸಲು ಬ್ಯಾಂಡೇಜ್‌ಗಳಿಂದ ಬೆಡ್‌ಗಳಿಗೆ ಸೇರಿ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಿದ್ದಾರೆ.

ವೈದ್ಯರಿಗೆ ತರಾಟೆ:  ಕೆ.ಆರ್‌.ಆಸ್ಪತ್ರೆಗೆ ತರಲಾಗುತ್ತಿದ್ದ ಅಸ್ವಸ್ಥರಿಗೆ ಮೊದಲು ಚಿಕಿತ್ಸೆ ನೀಡುವ ಬದಲು ಅವರ ಹೆಸರು, ವಿಳಾಸ ಕೇಳುತ್ತಿದ್ದನ್ನು ಗಮನಿಸಿದ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್‌.ನಾಗೇಂದ್ರ ಅವರು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಮೊದಲು ಚಿಕಿತ್ಸೆ ನೀಡಿ ಆಮೇಲೆ ವಿಳಾಸ ತೆಗೆದುಕೊಳ್ಳಬಹುದು ಎಂದು ಸೂಚಿಸದರು.

ಪ್ರಸಾದಕ್ಕೆ ನಾನು ವಿಷ ಹಾಕಿಲ್ಲ: ಅಡುಗೆ ಭಟ್ಟ

ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ಟೋಮೆಟೊ ಬಾತ್‌ ತಯಾರಿಸಿದ ಅಡುಗೆ ಭಟ್ಟಪುಟ್ಟಸ್ವಾಮಿಯನ್ನು ಸಹ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಪುಟ್ಟಸ್ವಾಮಿ ಮಾತನಾಡಿ, ಟೋಮೆಟೊ ಬಾತ್‌ ಸಿದ್ಧಗೊಳಿಸಿದ ಬಳಿಕ ದೇವರ ಪ್ರಸಾದ ಕಳುಹಿಸಿ ನಾನು ಸಹ ಸೇವಿಸಿದೆ. ಆದರೆ, ಏನೋ ಒಂದು ರೀತಿಯ ವ್ಯತ್ಯಾಸ ಇರುವುದು ಕಂಡುಬಂತು. ಬಾತ್‌ಗೆ ಹಾಕಿರುವ ಪದಾರ್ಥಗಳಲ್ಲಿ ಯಾವುದಾದರೂ ಹೆಚ್ಚು ಕಮ್ಮಿ ಆಗಿರಬಹುದು, ಅದಕ್ಕೆ ರುಚಿ ಕಳೆದುಕೊಂಡಿದೆ ಎಂದುಕೊಂಡು ತಿಂದೆ. ಪ್ರಸಾದ ತಿಂದ ಮೇಲೆನೇ ಯಾರೋ ವಿಷ ಹಾಕಿರುವುದು ಗೊತ್ತಾಯಿತು ಎಂದು ತಿಳಿಸಿದರು. ಪ್ರಸಾದಕ್ಕೆ ನಾನೇ ವಿಷ ಹಾಕಿದ್ದರೆ ನಾನು ತಿಂದು ನನ್ನ ಮಗಳಿಗೂ ತಿನ್ನಲು ಕೊಡುತ್ತಿದ್ದೇನೆ? ಪ್ರಸಾದ ತಿಂದ ನನ್ನ ಮಗಳೇ ಸತ್ತಿದ್ದಾಳೆ. ನಾನ್ಯಾಕೆ ವಿಷ ಹಾಕ್ಲಿ ಎಂದು ಕಣ್ಣೀರು ಹಾಕಿದರು.

ಈಗಾಗಲೇ 93 ಅಸ್ವಸ್ಥರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 29 ರೋಗಿಗಳು ಕ್ರಿಟಿಕಲ್‌ನಲ್ಲಿ ಇದ್ದಾರೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಅಗತ್ಯವಿದ್ದರೇ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೂ ಸೇರಿಸಲಾಗುವುದು. ಘಟನೆ ಸಂಬಂಧ ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಡುಗೆ ಮಾಡಿದವರು ಮೂರು ಜನ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಪೂರ್ಣ ಪ್ರಮಾಣದ ತನಿಖೆಯನ್ನ ಪೊಲೀಸರು ಮಾಡುತ್ತಾರೆ.

-ಬಿ.ಬಿ.ಕಾವೇರಿ, ಚಾಮರಾಜನಗರ ಜಿಲ್ಲಾಧಿಕಾರಿ

click me!