Thrilling Chapter: ಅಲ್‌ ಖೈದಾದ ಮೈಸೂರಿನ ನಂಟು- ಅಬು ಜುಬೈದಾ

Kannadaprabha News   | Asianet News
Published : Dec 05, 2021, 05:09 PM IST
Thrilling Chapter: ಅಲ್‌ ಖೈದಾದ ಮೈಸೂರಿನ ನಂಟು- ಅಬು ಜುಬೈದಾ

ಸಾರಾಂಶ

ಜಬೈದಾನಿಂದ ಅಮೆರಿಕನ್ನರಿಗೆ ದೊರೆತ ಅತಿ ಮುಖ್ಯ ಮಾಹಿತಿಯೇ ಖಾಲಿದ್ ಶೇಖ್ ಮಹಮ್ಮದ್‌ನ ಚಹರೆಯ ಗುರುತು. ಖಾಲಿದ್‌ನಿಗೆ ಎಲ್ಲರೂ ಮೊಖ್ತರ್ ಎಂದೇ ಸಂಬೋಧಿಸುತ್ತಿದ್ದ ಕಾರಣ ಆರಂಭದಲ್ಲಿ ಅವರಿಗೆ ಖಾಲಿದ್ ಮತ್ತು ಮೊಖ್ತರ್ ಇವೆರಡೂ ಒಬ್ಬನದೇ ಹೆಸರು ಎಂದು ತಿಳಿದಿರಲಿಲ್ಲ.

-ಡಾ. ಡಿ.ವಿ. ಗುರುಪ್ರಸಾದ್‌

2002ರ ಮಾಚ್‌ರ್‍ 28ರಂದು ಪಾಕಿಸ್ತಾನದ ಪೊಲೀಸರು ಅಮೆರಿಕದ ಗುಪ್ತಚರ ದಳಗಳ ಮಾಹಿತಿಯ ಮೇರೆಗೆ ಫೈಸಲಾಬಾದಿನಲ್ಲಿ ಮನೆಯೊಂದರ ಮೇಲೆ ದಾಳಿ ಮಾಡಿ ಅಬು ಜುಬೈದಾ ಎನ್ನುವ ಆತಂಕವಾದಿಯನ್ನು ಬಂಧಿಸಿದರು. ಈತನ ಬಂಧನ ರಕ್ಷಣಾ ಪಡೆಗಳಿಗೆ ದೊರೆತ ಮೊದಲ ದೊಡ್ಡ ಜಯವಾಗಿತ್ತು. 1971ರ ಮಾಚ್‌ರ್‍ 12ರಂದು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಒಂದು ಸಾಧಾರಣ ಕುಟುಂಬದಲ್ಲಿ ಜನಿಸಿದ ಜುಬೈದಾನಿಗೆ ಎಂಟು ಜನ ಸೋದರ ಸೋದರಿಯರಿದ್ದರು. ಆತ ಸುಮಾರು 13- 14 ವರ್ಷ ವಯಸ್ಸಿನವನಾಗಿದ್ದಾಗ ಇಸ್ರೇಲಿಯರ ಮೇಲೆ ಯುದ್ಧ ಸಾರಿದ್ದ. ಪಾಲೆಸ್ಟೈನ್‌ ಲಿಬರೇಷನ್‌ ಮೂವ್‌ಮೆಂಟ್‌ ಎಂಬ ದಳವನ್ನು ಸೇರಲು ಇಸ್ರೇಲಿನ ಪಶ್ಚಿಮ ದಂಡೆಯ ಪ್ರದೇಶಕ್ಕೆ ವಲಸೆ ಬಂದ. ಅಲ್ಲಿ ಪಾಲೆಸ್ಟೈನ್‌ ಹೋರಾಟಗಾರರ ಜೊತೆ ಸೇರಿ ಅವರು ಇಸ್ರೇಲ್‌ ವಿರುದ್ಧ ನಡೆಸಿದ ಕೆಲವು ದಾಳಿಗಳಲ್ಲಿ ಭಾಗವಹಿಸಿದ. ಆದರೆ ಒಂದು ವರ್ಷವಾಗುವಷ್ಟರಲ್ಲಿ ಅವನಿಗೆ ಬೇಸರವಾಗಿ ತನ್ನ ಮುಂದಿನ ವಿದ್ಯಾಭ್ಯಾಸಕ್ಕೆಂದು ಭಾರತಕ್ಕೆ ಬಂದ. 1989ರ ಜೂನ್‌ ತಿಂಗಳಲ್ಲಿ ಆತ ಮೈಸೂರಿಗೆ ಆಗಮಿಸಿ ಶಾರದಾ ವಿಲಾಸ್‌ ಕಾಲೇಜಿನಲ್ಲಿ ಕಂಪ್ಯೂಟರ್‌ ಪದವಿಯ ಕೋರ್ಸಿಗೆ ದಾಖಲಾದ.

ಮೈಸೂರಿನಲ್ಲಿ ವಾಸಿಸಲು ಜುಬೈದಾ ಉದಯಗಿರಿ ಬಡಾವಣೆಯಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಪಡೆದ. ಕೋಣೆಯನ್ನು ಸ್ವಚ್ಛ ಮಾಡಲು ಮತ್ತು ತನಗೆ ಅಡುಗೆ ಮಾಡಲು 33 ವರ್ಷ ವಯಸ್ಸಿನ ಕ್ರಿಶ್ಚಿಯನ್‌ ವಿಧವೆಯೊಬ್ಬಳನ್ನು ತನ್ನ ಸೇವಕಿಯನ್ನಾಗಿ ನೇಮಿಸಿಕೊಂಡ. ಕೆಲದಿನಗಳ ನಂತರ ಅವರಿಬ್ಬರ ನಡುವೆ ದೈಹಿಕ ಸಂಪರ್ಕವೇರ್ಪಟ್ಟಿತು. ಆದರೆ ಆತ ಸಂಭೋಗ ಮಾಡಲು ಹೆದರುತ್ತಿದ್ದ ಕಾರಣ ಆರು ತಿಂಗಳು ಅವನ ಜೊತೆ ಕಳೆದ ಆ ಸೇವಕಿ, ಅಬು ಜುಬೈದಾನ ಮೇಲೆ ಸಂಶಯಗೊಂಡಳು. ಆತ ಬೇರೊಬ್ಬಳ ಜೊತೆ ಸಂಪರ್ಕವಿಟ್ಟಿರುವುದಾಗಿ ಭಾವಿಸಿದಳು. ಅವನ ಆಪ್ತರ ವಲಯದಲ್ಲಿ ಜುಬೈದಾ ತನ್ನ ಸ್ನೇಹಿತನೊಬ್ಬನ ಹೆಂಡತಿಯ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾನೆ ಎಂಬ ಸುಳ್ಳು ಆರೋಪವನ್ನು ಆಕೆ ಮಾಡಿದಳು.

ಕೆಲ ತಿಂಗಳ ನಂತರ ಜುಬೈದಾ ಬೇರೊಂದು ಮನೆಯನ್ನು ಬಾಡಿಗೆಗೆ ಪಡೆದು ಅಲ್ಲಿ ವಾಸಿಸತೊಡಗಿದ. ಮೂರು ಮಕ್ಕಳ ತಾಯಿಯಾಗಿದ್ದ ಆ ವಿಧವೆಯೂ ಅವನ ಹೊಸ ಮನೆಯಲ್ಲಿ ಅವನ ಸೇವಕಿಯಾಗಿಯೇ ಮುಂದುವರೆದಳು. ಏತನ್ಮಧ್ಯೆ ಜುಬೈದಾ ತನ್ನ ಮೊದಲ ವರ್ಷದ ಪರೀಕ್ಷೆಯಲ್ಲಿ ಎರಡೇ ವಿಷಯಗಳಲ್ಲಿ್ಲ ಉತ್ತೀರ್ಣನಾಗಿ ಉಳಿದ ಮೂರರಲ್ಲಿ ಫೇಲ್‌ ಆದ. ಆತನಿಗೆ ವಿದ್ಯಾಭ್ಯಾಸಕ್ಕಿಂತ ಬೇರೆ ಇತರ ವಿಷಯಗಳಲ್ಲಿಯೇ ಆಸಕ್ತಿಯಿದ್ದ ಕಾರಣ ಆತ 1991ರ ಜನವರಿಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಅಲ್ಲಿಗೇ ಮೊಟಕುಗೊಳಿಸಿ ಭಾರತದಿಂದ ನಿರ್ಗಮಿಸಲು ತೀರ್ಮಾನಿಸಿದ. ಆ ಸಮಯದಲ್ಲಿ ಆಪ್ಘಾನಿಸ್ತಾನದಲ್ಲಿ ರಷ್ಯನ್ನರ ವಿರುದ್ಧ ಮುಜಾಹಿದ್ದೀನರು ಯುದ್ಧ ಮಾಡುತ್ತಿದ್ದ ಬಗ್ಗೆ ತಿಳಿದಿದ್ದ ಅಬು ತಾನೂ ಜೀಹಾದಿಯಾಗಲು ಆಷ್ಘಾನಿಸ್ತಾನಕ್ಕೆ ಹೋದ. (ಜುಬೈದಾನ ಮೈಸೂರು ಸಂಪರ್ಕದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಾನು ಮೈಸೂರು ಪೊಲೀಸರ ಜೊತೆ ವಿಚಾರ ಮಾಡಿದೆ. ಆ ವ್ಯಕ್ತಿ ಯಾವುದೇ ಕ್ರಿಮಿನಲ್‌ ಪ್ರಕರಣದಲ್ಲಿ ಭಾಗಿಯಾಗದಿದ್ದ ಕಾರಣ ಆತನ ಬಗ್ಗೆ ಅವರಲ್ಲಿ ಯಾವ ಸ್ಪಷ್ಟಮಾಹಿತಿಯೂ ಸಿಗಲಿಲ್ಲ).

ಆಷ್ಘಾನಿಸ್ತಾನ-ಪಾಕಿಸ್ತಾನದ ಗಡಿಯಲ್ಲಿ ಆತಂಕವಾದಿಗಳ ತರಬೇತಿಗೆಂದು ಸ್ಥಾಪಿಸಲಾಗಿದ್ದ ಖಾಲ್ದೆನ್‌ ತರಬೇತಿ ಶಿಬಿರಕ್ಕೆ ಆತ ಸೇರಿದ. ಅಲ್ಲಿ ಆತ ವಿಶ್ವದ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ಯುವಕರ ಸಂಪರ್ಕಕ್ಕೆ ಬಂದು ಬಂದೂಕುಗಳ ಚಾಲನೆ, ಬಾಂಬ್‌ ತಯಾರಿಕಾ ವಿಧಾನ ಮುಂತಾದ ವಿಷಯಗಳನ್ನು ಕಲಿತ. ಈ ತರಬೇತಿಯಲ್ಲಿ ಉತ್ತೀರ್ಣರಾದವರನ್ನು ರಷ್ಯನ್ನರ ವಿರುದ್ಧ ಯುದ್ಧ ಮಾಡಲು ಆಷ್ಘಾನಿಸ್ತಾನಕ್ಕೆ ನುಸುಳಿಸಲಾಗುತಿತ್ತು. ಈತ ತಾನೂ ಅಲ್ಲಿಗೆ ಹೋಗಬೇಕೆಂದು ಇಚ್ಚಿಸಿದಾಗ ತರಬೇತಿ ಶಿಬಿರದ ಪ್ರಾಂಶುಪಾಲರು, ‘ನೀನು ಇನ್ನೂ ಪೂರ್ತಿಯಾಗಿ ತಯಾರಾಗಿಲ್ಲ, ಸದ್ಯಕ್ಕೆ ನಮ್ಮನ್ನು ಅನುಕರಿಸು’ ಎಂದರು.

ಮುಂದೆ ಖಾಲ್ದೆನ್‌ ಶಿಬಿರದ ಕಮಾಂಡರ್‌ ಆಷ್ಘಾನಿಸ್ತಾನಕ್ಕೆ ಯುದ್ಧಕ್ಕೆ ಹೊರಟಾಗ ಅಬು ಜುಬೈದಾನನ್ನು ವೀಕ್ಷಕನೆಂದು ತಮ್ಮೊಡನೆ ಕರೆದೊಯ್ದರು. ಆಷ್ಘಾನಿಸ್ತಾನದ ಗಡಿ ಭಾಗಕ್ಕೆ ಅವರು ಹೋದಾಗ ವೈರಿ ಸೈನ್ಯದ ಏಳು ಟ್ಯಾಂಕುಗಳು ಅವರ ಮೇಲೆ ಗುಂಡಿನ ಮಳೆಗರೆದವು. ಈತನ ಶಿಬಿರದ ಪ್ರಾಂಶುಪಾಲರಲ್ಲದೇ ಹಲವಾರು ಇತರ ಜಿಹಾದಿಗಳು ಸ್ಥಳದಲ್ಲಿಯೇ ಮೃತಪಟ್ಟರು.

ಇದರಿಂದ ಗಾಬರಿಗೊಂಡ ಜುಬೈದಾ, ಪೆಷಾವರ್‌ನಲ್ಲಿ ಅಲ್‌ ಖೈದಾ ನಡೆಸುತ್ತಿದ್ದ ಇನ್ನೊಂದು ತರಬೇತಿ ಶಿಬಿರಕ್ಕೆ ಸೇರಿದ. ತಾನು ಆದಷ್ಟುಬೇಗ ಆಷ್ಘಾನಿಸ್ತಾನಕ್ಕೆ ಹೋಗಿ ಮುಜಾಹಿದ್ದೀನ್‌ ಆಗಬಯಸುತ್ತೇನೆ ಎಂದು ಆತ ಸಂಬಂಧಿಸಿದವರಿಗೆ ತಿಳಿಸಿದ. ಅದೇ ದಿನವೇ ತನ್ನೂರಿನಲ್ಲಿದ್ದ ತನ್ನ ತಂದೆಗೆ ಪತ್ರ ಬರೆದು, ತಾನು ಮುಜಾಹಿದ್ದೀನ್‌ ಆಗಿ ಆಷ್ಘಾನಿಸ್ತಾನಕ್ಕೆ ಹೋಗುತ್ತಿರುವುದಾಗ ತಿಳಿಸಿದ. ಆ ಪತ್ರಕ್ಕೆ ಪ್ರತ್ಯುತ್ತರವಾಗಿ ಆತನ ಪತ್ನಿ, ‘ನೀನು ಮುಜಾಹಿದೀನ್‌ ಆಗಿ ಯುದ್ಧಕ್ಕೆ ಹೋಗುವುದು ಬೇಡ. ನಿನ್ನ ತಾಯಿ ಬಹಳ ಅಸ್ವಸ್ಥರಾಗಿದ್ದಾರೆ, ಹಿಂತಿರುಗಿ ಬಾ,’ ಎಂದು ಬರೆದಳು.

ಆದರೂ ಆತ ಆಕೆಯ ಮಾತು ಕೇಳದೆ ಆಷ್ಘಾನಿಸ್ತಾನಕ್ಕೆ ಹೋದ. 1992ರಲ್ಲಿ ನಡೆದ ಒಂದು ಕದನದಲ್ಲಿ ಎದುರಾಳಿಯಿಂದ ಬಂದ ಗುಂಡೊಂದು ಆತನ ತಲೆಗೆ ತಗುಲಿ ಆತನ ಮಿದುಳು ನಿಷ್ಕಿ್ರಯವಾಯಿತು. ಸುಮಾರು ಒಂದು ವರ್ಷ ಚಿಕಿತ್ಸೆ ಮಾಡಿಸಿಕೊಂಡ. ಆದರೆ ಆತನ ಒಂದು ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಹೀಗಾಗಿ ಆತ ಕಣ್ಣಿಗೆ ಪಟ್ಟಿಯೊಂದನ್ನು ಕಟ್ಟಕೊಳ್ಳುತ್ತಿದ್ದ. 1994ರಲ್ಲಿ ಆತ ಅಲ್‌ ಖೈದಾದ ಸಕ್ರಿಯ ಸದಸ್ಯನಾದ. ತನ್ನ ಬುದ್ಧಿಶಕ್ತಿಯ ಫಲವಾಗಿ ಅಬು ಜುಬೈದಾ ಆ ಸಂಘಟನೆಯಲ್ಲಿ ಹಂತ ಹಂತವಾಗಿ ಮೇಲೇರುತ್ತಾ ಬಂದ. ಒಸಾಮ ಅವನ ಬುದ್ಧಿಮತ್ತೆಯನ್ನು ಮೆಚ್ಚಿ, ‘ನೀನು ಪೆಷಾವರದಿಂದಲೇ ನಾವು ಬೇರೆ ದೇಶಗಳಲ್ಲಿ ಮಾಡುವ ದಾಳಿಗಳಿಗೆ ಸಮನ್ವಯ ಮಾಡು,’ ಎಂದು ಆದೇಶಿಸಿದ.

ಅದೇ ಸಮಯದಲ್ಲಿ ಆತನಿಗೆ ಖಾಲಿದ್‌ ಶೇಖ್‌ ಮಹಮ್ಮದ್‌ ಮತ್ತು ಅಲ್‌ ಖೈದಾದ ಇತರ ನಾಯಕರ ಪರಿಚಯವಾಯಿತು. 1999ರ ಡಿಸೆಂಬರ್‌ನಲ್ಲಿ ಅಬು ಜುಬೈದಾ ಜೋರ್ಡಾನ್‌ನಲ್ಲಿರುವ ಒಂದು ಹೊಟೇಲ್‌ಗೆ ಬಾಂಬ್‌ ಹಾಕುವ ಯತ್ನದಲ್ಲಿ ಆರೋಪಿಯಾಗಿದ್ದೇ ಅಲ್ಲದೇ ಜೋರ್ಡಾನ್‌ನಲ್ಲಿರುವ ಹಲವಾರು ಪ್ರವಾಸಿ ತಾಣಗಳಿಗೆ ಬಾಂಬ್‌ ಮಾಡುವ ಸಂಚಿನಲ್ಲಿ ಭಾಗಿಯಾಗಿದ್ದ.

ಆನಂತರ ಆತ ಒಸಾಮ ಬಿನ್‌ ಲಾದೆನ್‌ನ ಸೂಚನೆಯ ಮೇರೆಗೆ ಪಾಕಿಸ್ತಾನದ ಒಂದು ಅಡಗು ತಾಣಕ್ಕೆ ಬಂದ. ಅಲ್ಲಿ ಆತ ಅಲ್‌ ಖೈದಾ ಸಂಘಟನೆಯ ಹಣಕಾಸು ವಿಭಾಗದಲ್ಲಿ ಕಾರ್ಯನಿರ್ವಹಿಸತೊಡಗಿದ. 9/11 ನಡೆದ ದಾಳಿಯ ಸಂಬಂಧ ಅಲ್‌ ಖೈದಾದಿಂದ ಅಮೆರಿಕದಲ್ಲಿದ್ದ ಆತಂಕವಾದಿಗಳಿಗೆ ಹಣವನ್ನು ರವಾನಿಸುವ ಕರ್ತವ್ಯ ಅವನದಾಗಿತ್ತು. ತೋರಾ ಬೋರಾ ದಾಳಿಯಾದ ನಂತರ 2001ರ ಡಿಸೆಂಬರ್‌ನಲ್ಲಿ ಅಲ್‌ ಖೈದಾ ನಾಯಕರು ಚದುರಿಹೋದಾಗ ಅಬು ಜುಬೈದಾಗೆ ಮುಂದೇನು ಮಾಡಬೇಕು ಎಂದು ತಿಳಿಯದೇ ಕೆಲಕಾಲ ಸುಮ್ಮನಿದ್ದ. ಆನಂತರ ಎಲ್ಲರಂತೆ ಆತ ಪಾಕಿಸ್ತಾನಕ್ಕೆ ಓಡಿಹೋದ. ಆನಂತರ ಲಷ್ಕರ್‌ ಎ ತೊಯ್ಬಾದ ಸಹಾಯ ಪಡೆದು ಆತ ಲಾಹೋರ್‌ ಬಳಿಯ ಫೈಸಲಾಬಾದಿನಲ್ಲಿ ಅಡಗಿದ್ದ. ಅವನಿಗೆ ಆಗ ಅಲ್‌ ಖೈದಾದ ಹಿರಿಯ ನಾಯಕರ ಸಂಪರ್ಕವಿರಲಿಲ್ಲ. ಅವನಿಗೆ ಒಸಾಮನ ಕುಟುಂಬವು ಕರಾಚಿಯಲ್ಲಿದ್ದದ್ದೂ ತಿಳಿದಿರಲಿಲ್ಲ. ಇದಲ್ಲದೆ ಒಸಾಮ ಸಹಾ ಹಲವಾರು ಬಾರಿ ಕರಾಚಿಗೆ ಬಂದು ಹೋದದ್ದು ಅವನ ಗಮನಕ್ಕೆ ಬಂದಿರಲಿಲ್ಲ.

ಅಲ್‌ ಜುಬೈದಾನನ್ನು ಬಂಧಿಸುವಾಗ ಆತ ಗಾಯಗೊಂಡಿದ್ದ. ಹೀಗಾಗಿ ಆತನಿಗೆ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೊತೆ ಜೊತೆಗೇ ಅವನನ್ನು ತೀವ್ರ ರೀತಿಯ ವಿಚಾರಣೆಗೆ ಒಳಪಡಿಸಲಾಗಿತ್ತು. ಆತ ಸ್ವಲ್ಪ ಚೇತರಿಸಿಕೊಂಡ ನಂತರ ಅವನನ್ನು ಬೇರೆ ದೇಶವೊಂದಕ್ಕೆ ಕರೆದೊಯ್ದು ಅಲ್ಲಿ ಅವನಿಗೆ ದೈಹಿಕ ಹಿಂಸೆಯನ್ನು ನೀಡಿ ವಿಚಾರಣೆ ಮಾಡಲಾಯಿತು. ಅಷ್ಟರಲ್ಲಿ ಆತ ಪ್ರತಿದಿನವೂ ಬರೆಯುತ್ತಿದ್ದ ದಿನಚರಿ ಅಮೆರಿಕನ್ನರಿಗೆ ದೊರಕಿತು. ಇದರಲ್ಲಿ ಆತ ಇಸ್ರೇಲಿನಿಂದ ಭಾರತಕ್ಕೆ ಬಂದಾಗಿನಿಂದ ತೋರಾ ಬೋರಾ ದಾಳಿಯ ನಂತರದವರೆಗೂ ನಡೆದ ಘಟನೆಗಳನ್ನು ವಿವರವಾಗಿ ದಾಖಲಿಸಿದ್ದ. ಹೀಗಾಗಿಯೇ ಆತನನ್ನು ಹೆಚ್ಚು ಹಿಂಸಿಸದೇ ಅಲ್‌ ಖೈದಾ ಚಟುವಟಿಕೆಗಳ ಬಗ್ಗೆ ಅತಿ ಹೆಚ್ಚು ಮಾಹಿತಿಯನ್ನು ಅಮೆರಿಕನ್‌ ಅಧಿಕಾರಿಗಳು ಪಡೆಯುವಂತಾಯಿತು.

ಜುಬೈದಾನಿಂದ ಅಮೆರಿಕನ್ನರಿಗೆ ದೊರೆತ ಅತಿ ಮುಖ್ಯ ಮಾಹಿತಿಯೇ ಖಾಲಿದ್‌ ಶೇಖ್‌ ಮಹಮ್ಮದ್‌ನ ಚಹರೆಯ ಗುರುತು. ಖಾಲಿದ್‌ನಿಗೆ ಎಲ್ಲರೂ ಮೊಖ್ತರ್‌ ಎಂದೇ ಸಂಬೋಧಿಸುತ್ತಿದ್ದ ಕಾರಣ ಆರಂಭದಲ್ಲಿ ಅವರಿಗೆ ಖಾಲಿದ್‌ ಮತ್ತು ಮೊಖ್ತರ್‌ ಇವೆರಡೂ ಒಬ್ಬನದೇ ಹೆಸರು ಎಂದು ತಿಳಿದಿರಲಿಲ್ಲ. ಜುಬೈದಾನ ಹೇಳಿಕೆಯ ಮೇರೆಗೆ ಅವರು ಖಾಲಿದ್‌ನ ಬಗ್ಗೆ ಹೆಚ್ಚು ತಿಳಿಯುವಂತಾಯಿತು. ಆದರೆ ಜುಬೈದಾನಿಗೂ ಖಾಲಿದ್‌ ಆ ಸಮಯದಲ್ಲಿ ಎಲ್ಲಿದ್ದಾನೆ ಎಂದು ತಿಳಿದಿರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ