Hassan Politics: ಎ.ಮಂಜು ಮತ್ತೆ ಕಾಂಗ್ರೆಸ್‌ನತ್ತ? ಬಿಜೆಪಿಗೆ ಸಿಕ್ತು ಹಳೆ ಕುದುರೆ!

Published : Dec 05, 2021, 04:44 PM ISTUpdated : Dec 05, 2021, 04:53 PM IST
Hassan Politics: ಎ.ಮಂಜು ಮತ್ತೆ ಕಾಂಗ್ರೆಸ್‌ನತ್ತ? ಬಿಜೆಪಿಗೆ ಸಿಕ್ತು ಹಳೆ ಕುದುರೆ!

ಸಾರಾಂಶ

* ಹಾಸನ ಜಿಲ್ಲೆಯಲ್ಲಿ ಅದಲು ಬದಲು ರಾಜಕೀಯ * ಎ. ಮಂಜು ಕಾಂಗ್ರೆಸ್ ಸೇರ್ಪಡೆಗೆ ಕಸರತ್ತು * ಇತ್ತ ಕಾಂಗ್ರೆಸ್‌ ಸೇರಿದ್ದ ನಾಯಕ ವಾಪಸ್ ಬಿಜೆಪಿಗೆ

ಬೆಂಗಳೂರು, (ಡಿ.05): ಬಿಜೆಪಿ (BJP) ಕಾರ್ಯಚಟುವಟಿಕೆಗಳಿಂದ ದೂರು ಉಳಿದುಕೊಂಡಿರುವ ಅರಕಲಗೋಡು ಮಾಜಿ ಶಾಸಕ ಎ.ಮಂಜು (A Manju) ಮತ್ತೆ ವಾಪಸ್ ಕಾಂಗ್ರೆಸ್‌ (Congress) ಸೇರಲು ತೀರ್ಮಾನಿಸಿದ್ದಾರೆ.

ಇದರಿಂದ ಇತ್ತ ಕಾಂಗ್ರೆಸ್ ಸೇರಿದ್ದ ಎ ಮಂಜು ಎದುರಾಳಿ ಯೋಗ ರಮೇಶ್ ಅವರನ್ನು ಬಿಜೆಪಿ ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಎ ಮಂಜು ಬಿಜೆಪಿ ಸೇರಿದ್ದಾಗ, ಅಸಮಧಾನಗೊಂಡು ಯೋಗ ರಮೇಶ್ (Yoga Ramesh) ಕಾಂಗ್ರೆಸ್ ಸೇರಿದ್ದರು.ಇದೀಗ ಎ.ಮಂಜು ಕಾಂಗ್ರೆಸ್‌ನತ್ತ ಮುಖ ಮಾಡಿದ್ರೆ, ಯೋಗ ರಮೇಶ್ ಬಿಜೆಪಿಯತ್ತ ಮುಖ ಮಾಡಿದ್ದಾರೆ.

Karnataka Politics: ಮಗನಿಗೆ ಕಾಂಗ್ರೆಸ್ ಟಿಕೆಟ್, ಅಪ್ಪನಿಗೆ ಪಕ್ಷದ ಜವಾಬ್ದಾರಿಯಿಂದ ಬಿಜೆಪಿ ಕೊಕ್

ಇದರೊಂದಿಗೆ 2023 ವಿಧಾನಸಭೆ ಚುನಾವಣೆಯಲ್ಲಿ ಮಂಜು ಹಾಗೂ ಯೋಗ ರಮೇಶ್ ಎದುರಾಳಿಗಳಾಗುವ ಸಾಧ್ಯತೆಗಳಿವೆ. ಒಂದು ವೇಳೆ ಇಬ್ಬರೂ ಒಂದೇ ಪಕ್ಷದಲ್ಲಿ ಇದ್ದರೇ ಅರಕಲಗೋಡು ವಿಧಾನಸಭೆ ಟಿಕೆಟ್‌ಗಾಗಿ ಸ್ಪರ್ಧೆ ಏರ್ಪಡುತ್ತಿತ್ತು. ಇದರಿಂದ ಉಭಯ ನಾಯಕರು ಅದಲು ಬದಲು ಆಗಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎ.ಮಂಜು, ಬಿಜೆಪಿಯಿಂದ ಯೋಗ ರಮೇಶ್ ಕಣದಲ್ಲಿದ್ದರು. ಆದ್ರೆ, ಜೆಡಿಎಸ್‌ ಅಭ್ಯರ್ಥಿ ಎ.ಟಿ ರಾಮಸ್ವಾಮಿ ಗೆಲುವು ಸಾಧಿಸಿದ್ದರು.
 
ಕಾಂಗ್ರೆಸ್ ಗೆ ಸೇರಿ ತಪ್ಪು ಮಾಡಿದೆ
ಇನ್ನು ವಾಪಸ್ ಬಿಜೆಪಿ ಸೇರ್ಪಡೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯೋಗ ರಮೇಶ್, ಹಾಸನದಲ್ಲಿ ಜೆಡಿಎಸ್ ಸಂಘಟನೆ ಮೀರಿ ಪಕ್ಷ ಬೆಳೆಸುವ ಕೆಲಸ ಮಾಡಿದ್ದೆವು. ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಸ್ಪರ್ಧೆಗೆ ಪಕ್ಷ ನನಗೆ ಅವಕಾಶ ಮಾಡಿಕೊಟ್ಟಿತ್ತು. ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಜೊತೆ ಸಮಬಲ ಹೋರಾಟ ಮಾಡಿದ್ದೆವು. ಎಂಪಿ ಚುನಾವಣೆ ವೇಳೆ ಎ ಮಂಜು ಬಿಜೆಪಿ ಗೆ ಬಂದರು, ಅವಾಗ ನಾನು ಕಾಂಗ್ರೆಸ್ ಗೆ ಸೇರಿ ತಪ್ಪು ಮಾಡಿದೆ ಅನ್ನಿಸಿತ್ತು ಎಂದು ಹೇಳಿದರು.

ಅವತ್ತು ನಾನು ಪಕ್ಷದಲ್ಲಿ ಉಳಿದಿದ್ದರೆ , ನೂರಕ್ಕೆ ನೂರು ಎಂಪಿ ಸ್ಥಾನ ಗೆಲ್ಲಬಹುದಿತ್ತು, ಇಷ್ಟು ದಿನ ಯಾವುದೇ ರಾಜೀ ಮಾಡಿಕೊಳ್ಳದೇ, ಕಾಂಗ್ರೆಸ್, ಜೆಡಿಎಸ್ ಎದುರಿಸಿದ್ದೇವೆ. ಕಾಂಗ್ರೆಸ್ ಸೇರಿದ್ದು ನನ್ನ ಜೀವನದ ಕಹಿ ಘಟನೆ,ನಂತರ ನನಗೆ ಅರಿವು ಆಗಿ ಮತ್ತೆ ಬಿಜೆಪಿ ಸೇರುವ ನಿರ್ಧಾರ ಮಾಡಿದೆ ಎಂದು ಸ್ಪಷ್ಟಪಡಿಸಿದರು.

ಎಲ್ಲರ ಸಹಕಾರದಿಂದ ಪಕ್ಷ ಸೇರಿದ್ದೇನೆ, ಮುಂದೆ ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ.ಮುಂದೆ ಎಂಎಲ್ಸಿ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗು ವಿಧಾನಸಭೆ ಚುನಾವಣೆ ಬರುತ್ತದೆ, ಹೀಗಾಗಿ ಅಧ್ಯಕ್ಷರು ಸೇರಿದಂತೆ ಎಲ್ಲರ ಮಾರ್ಗದರ್ಶನದಲ್ಲಿ ಪಕ್ಷದಲ್ಲಿ ಕೆಲಸ ಮಾಡುತ್ತೇನೆ, ಪಕ್ಷ ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ, ಅಭ್ಯರ್ಥಿ ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದರು.

ಮಂಜುಗೆ ಬಿಜೆಪಿ ಗೇಟ್ ಪಾಸ್
ಪುತ್ರ ಕೊಡಗು ಕ್ಷೇತ್ರದಲ್ಲಿ ಮಂಥನಗೌಡಗೆ ಕಾಂಗ್ರೆಸ್ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಇತ್ತ ಎ ಮಂಜು‌ ಮೇಲೆ ಸಂಶಯ ವ್ಯಕ್ತಪಡಿಸಿರುವ ಬಿಜೆಪಿ, ವಹಿಸಲಾಗಿದ್ದ ಎಲ್ಲಾ ಜವಾಬ್ದಾರಿಗಳಿಂದ ಬಿಡುಗಡೆಗೊಳಿಸಿದೆ.

ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಈ ಬಗ್ಗೆ ಆದೇಶ ಹೊಡಿಸಿದ್ದು, ಮಂಡ್ಯ ಉಸ್ತುವಾರಿ ಸೇರಿದಂತೆ ಪಕ್ಷದ ಜವಾಬ್ದಾರಿಯನ್ನು ಮುಕ್ತಗೊಳಿಸಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸೇರುವ ವಿಚಾರವನ್ನು ನಿರಾಕರಿಸಿದ್ದ ಮಂಜು
ಸ್ವಾಭಾವಿಕವಾಗಿ ಕಾಂಗ್ರೆಸ್ ಸೇರುವ ವಿಚಾರವನ್ನು ಎ.ಮಂಜು ನಿರಾಕರಿಸಿದ್ದರು. 1999ರಲ್ಲಿ ಬಿಜೆಪಿಯಿಂದ ನಾನು ಶಾಸಕನಾಗಿ ಗೆದ್ದಿದ್ದೇನೆ. ಜಿಲ್ಲೆಯಲ್ಲಿ ಅಂದು ನಾಲ್ಕು ಮಂದಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು. ಆ ಸಂದರ್ಭದಲ್ಲಿ ಮೋದಿ, ಅಮಿತ್‌ ಶಾ ಇರಲಿಲ್ಲ. ಇಂದು ಅವರೆಲ್ಲರೂ ಇದ್ದಾರೆ. ಇಂತಹವರ ಸಹಕಾರ ಹಾಗೂ ಕ್ಷೇತ್ರದ ಎಲ್ಲರ ನೆರವಿನೊಂದಿಗೆ ಮುಂದೆ ಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ವೇಳೆ ಕ್ಷೇತ್ರದಲ್ಲಿಇದ್ದು, ಹೆಚ್ಚು ಮಂದಿ ಗೆಲ್ಲಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಭರವಸೆಯನ್ನು ಹೊಂದಿದ್ದೇನೆ ಎಂದು ಹೇಳಿದ್ದರು.

ನಾನು ಕಾಂಗ್ರೆಸ್‌ ಪಕ್ಷ ಸೇರುವ ವದಂತಿಯನ್ನು ನನ್ನ ವಿರೋಧಿಗಳು ಮಾಧ್ಯಮಗಳಿಗೆ ಹರಿಬಿಡುತ್ತಿದ್ದಾರೆ. ನಾನು ಕ್ಷೇತ್ರದ ಜನರ ವಿಶ್ವಾಸ ಪಡೆದು ಹಂತಹಂತವಾಗಿ ರಾಜಕೀಯವಾಗಿ ಮೇಲೆ ಬಂದಿದ್ದೇನೆ. ಜಿಲ್ಲೆಯ ರಾಜಕಾರಣದಲ್ಲಿಅರಕಲಗೂಡು ಕ್ಷೇತ್ರ ತುಂಬಾ ವಿಭಿನ್ನವಾಗಿದೆ. ಇಲ್ಲಿನ ಮತದಾರರ ನಿರ್ಧಾರವನ್ನು ಯಾರೂ ಅರಿಯಲು ಸಾಧ್ಯವಿಲ್ಲ. ಇದನ್ನು ಬಲವಾಗಿ ನಂಬಿರುವ ನನಗೆ ಕ್ಷೇತ್ರದ ಎಲ್ಲಾ ಮತದಾರರು ಮುಂದಿನ ಚುನಾವಣೆಯಲ್ಲಿ ಸಹಕಾರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಕೈ ಹಿಡಿಯುತ್ತಾರಾ ಹಾಸನದ ಜೆಡಿಎಸ್ ಶಾಸಕ?
ಯೆಸ್‌... ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಜೆಡಿಎಸ್ ತೊರೆಯಲಿದ್ದಾರೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬಂದಿದ್ದವು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ನಾಯಕ ಎ.ಮಂಜು ಮತ್ತು ಜೆಡಿಎಸ್‌ ಪಕ್ಷದ ಶಾಸಕ ಎ.ಟಿ.ರಾಮಸ್ವಾಮಿ ರಾಜಕೀಯವಾಗಿ ಸಾಂಪ್ರದಾಯಿಕ ಎದುರಾಳಿಗಳಾಗಿದ್ದಾರೆ. 

ಎ.ಮಂಜು ಕಾಂಗ್ರೆಸ್‌ ತೊರೆದು ಬಿಜೆಪಿಯಲ್ಲಿದ್ದು, ಇತ್ತ ರಾಮಸ್ವಾಮಿ ಜೆಡಿಎಸ್‌ ಪಕ್ಷದ ಪ್ರಾಭಲ್ಯತೆ ದಿನದಿಂದ ದಿನಕ್ಕೆ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯ ಸ್ಥಿತಿ ಎದುರಾದರೆ, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ ಸೇರುವ ಲೆಕ್ಕಾಚಾರದಲ್ಲಿ ಇದ್ದು, ಕೈ ಮುಖಂಡರೊಂದಿಗಿನ ಸಖ್ಯ ಬಯಸುತ್ತಿದ್ದಾರೆ ಎನ್ನಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ