
ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಪ್ರಖ್ಯಾತ ವೈದ್ಯರೊಬ್ಬರು, ತಮ್ಮ ಅಪಾರ್ಟ್‌ಮೆಂಟ್‌ನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊಸೂರು ರಸ್ತೆಯ ಸೋಮಸಂದ್ರಪಾಳ್ಯದಲ್ಲಿ ಸೋಮವಾರ ನಡೆದಿದೆ.
‘ಶೋಭಾ ಡಾಪ್ಪೋಲ್ಡಿಸ್' ಅಪಾರ್ಟ್‌ಮೆಂಟ್ ನಿವಾಸಿ ಡಾ.ಅಶೋಕ್ ರಾಜ್ ಕೌಲ್ (54) ಮೃತ ದುರ್ದೈವಿ. ಆಸ್ಪತ್ರೆಯಿಂದ ಮಧ್ಯಾಹ್ನ 12.30 ಗಂಟೆಗೆ ಫ್ಲಾಟ್‌ಗೆ ಮರಳಿದ ನಂತರ ಅಶೋಕ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಮೃತ ಡಾ.ಅಶೋಕ್ ರಾಜ್ ಕೌಲ್ ಮೂಲತಃ ಜಮ್ಮು ಕಾಶ್ಮೀರ ರಾಜ್ಯದವರಾಗಿದ್ದು, ‘ಶೋಭಾ ಡಾಪೋಲ್ಡಿಸ್' ಅಪಾರ್ಟ್‌ಮೆಂಟ್‌ನ 6ನೇ ಹಂತದ ಫ್ಲ್ಯಾಟ್‌ನಲ್ಲಿ ಪತ್ನಿ ಡಾ.ಆಶಾ ಕಿರಣ್ ಹಾಗೂ ಕಿರಿಯ ಪುತ್ರಿ ಜತೆ ವಾಸವಾಗಿದ್ದರು. ಅವರ ಹಿರಿಯ ಪುತ್ರಿ ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಿರಿಯ ಮಗಳು 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅಶೋಕ್ ಅವರು ಹೊಸೂರು ರಸ್ತೆಯ ಸ್ಪರ್ಶ ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅವರ ಪತ್ನಿ ಆಶಾ ಸಹ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ದೇಶದ ಪ್ರಮುಖ ಪ್ಲಾಸ್ಟಿಕ್ ಸರ್ಜನ್'ಗಳ ಪೈಕಿ ಅಶೋಕ ಸಹ ಒಬ್ಬರಾಗಿದ್ದರು. ವೈದ್ಯಕೀಯ ವಲಯದಲ್ಲಿ ಅವರು ಖ್ಯಾತನಾಮರಾಗಿದ್ದರು ಎಂದು ಕುಟುಂಬದವರು ಹೇಳಿದ್ದಾರೆ.
ಆಸ್ಪತ್ರೆಯಿಂದ ಮಧ್ಯಾಹ್ನ 12.30 ಗಂಟೆಗೆ ಅಪಾರ್ಟ್'ಮೆಂಟ್'ಗೆ ಆಗಮಿಸಿದ ಅಶೋಕ್ ಅವರು, ತಮ್ಮ ಫ್ಲ್ಯಾಟ್'ಗೆ ತೆರಳದೆ ಮಹಡಿಯಿಂದ ಕೆಳಕ್ಕೆ ಹಾರಿದ್ದಾರೆ. ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆಗ ಸೆಕ್ಯುರಿಟಿ ಗಾರ್ಡ್'ಗಳು ಗಮನಿಸಿ ಕುಟುಂಬದವರಿಗೆ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.