ಕಾವೇರಿ ಡ್ಯಾಂ : ಕರ್ನಾಟಕಕ್ಕೆ ಗುಡ್ ನ್ಯೂಸ್

By Web DeskFirst Published Dec 4, 2018, 7:18 AM IST
Highlights

ಕರ್ನಾಟಕಕ್ಕೆ ಗುಡ್ ನ್ಯೂಸ್ ಇದಾಗಿದೆ. ಶೀಘ್ರದಲ್ಲೇ ಕರುನಾಡಿನ ಜೀವನದಿ ಕಾವೇರಿಗೆ ಮತ್ತೊಂದು ಅಣೆಕಟ್ಟು ನಿರ್ಮಾಣದ ಕನಸಿಗೆ ರೆಕ್ಕೆ ಬಂದಿದೆ. ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಕರ್ನಾಟಕ ಸಲ್ಲಿಸುವ ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌ ಅನ್ನು) ಪರಿಶೀಲಿಸುವುದಾಗಿ ಹೇಳಿದೆ.

ನವದೆಹಲಿ :  ಕರ್ನಾಟಕವು ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಅಣೆಕಟ್ಟೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ, ಸೋಮವಾರ ನಡೆದ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಕೂಡ ಆಕ್ಷೇಪಣೆ ತೆಗೆದಿದೆ. 

ಆದರೆ ಈ ಆಕ್ಷೇಪಕ್ಕೆ ಅಷ್ಟಾಗಿ ಸೊಪ್ಪು ಹಾಕದ ನಿರ್ವಹಣಾ ಪ್ರಾಧಿಕಾರ, ಕರ್ನಾಟಕ ಸಲ್ಲಿಸುವ ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌ ಅನ್ನು) ಪರಿಶೀಲಿಸುವುದಾಗಿ ಹೇಳಿದೆ. ಇದರಿಂದ ಕರ್ನಾಟಕಕ್ಕೆ ಈ ಹಂತದಲ್ಲಿದ್ದ ಅಡೆತಡೆ ನಿವಾರಣೆಯಾದಂತಾಗಿದ್ದು, ರಾಜ್ಯದ ವಾದಕ್ಕೆ ಬಲ ಬಂದಂತಾಗಿದೆ.

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನಲ್ಲಿ ಮೇಕೆದಾಟು ಯೋಜನೆಯ ಕಾರ್ಯಸಾಧು ವರದಿಗೆ ಜಲ ಕೇಂದ್ರೀಯ ಜಲ ಆಯೋಗ ಅಸ್ತು ಎಂದಿದ್ದನ್ನು ಹಾಗೂ ಡಿಪಿಆರ್‌ ಸಲ್ಲಿಸುವಂತೆ ಸೂಚಿಸಿದ್ದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರವು ಅರ್ಜಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಸೋಮವಾರ ಜಲ ನಿರ್ವಹಣಾ ಪ್ರಾಧಿಕಾರ ಎದುರು ಪ್ರಾಸ್ತಾವಿಕವಾಗಿ ಮಾತನಾಡುವ ಸಂದರ್ಭದಲ್ಲಿ ಕೂಡ ಆಕ್ಷೇಪ ಸಲ್ಲಿಸಿತು.

ಇದಕ್ಕೆ ಉತ್ತರಿಸಿದ ಪ್ರಾಧಿಕಾರ ಅಧ್ಯಕ್ಷ ಮಸೂದ್‌ ಹುಸೇನ್‌, ‘ಕೇಂದ್ರೀಯ ಜಲ ಆಯೋಗವು ಕೇವಲ ಕಾರ್ಯಸಾಧು ವರದಿಗೆ ಒಪ್ಪಿಗೆ ನೀಡಿದೆಯೇ ವಿನಾ, ಅಣೆಕಟ್ಟು ಕಟ್ಟಲು ಅಲ್ಲ. ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಲು ಆಯೋಗ ಸೂಚಿಸಿದೆ. ಡಿಪಿಆರ್‌ ಕೇಳಿರುವುದು ವಿವಾದ ಆಗುವಂತಹ ವಿಷಯವೇನಲ್ಲ. ಡಿಪಿಆರ್‌ ಸಲ್ಲಿಕೆಯಾದ ಬಳಿಕ ಅದನ್ನು ಜಲ ನಿರ್ವಹಣಾ ಪ್ರಾಧಿಕಾರ ಅವಲೋಕಿಸಲಿದೆ. ಎಲ್ಲ ರಾಜ್ಯಗಳ ಅಭಿಪ್ರಾಯ ಆಲಿಸಲಿದೆ. ನಿರ್ವಹಣಾ ಪ್ರಾಧಿಕಾರ ಒಪ್ಪಿಗೆಯ ಬಳಿಕ ಅದನ್ನು ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ಕಳಿಸಿಕೊಡಲಾಗುವುದು. ಸರ್ಕಾರ ಒಪ್ಪಿದರೆ ಮಾತ್ರ ಯೋಜನೆ ಜಾರಿಯಾಗಲಿದೆ’ ಎಂದು ಹೇಳಿದರು.

‘ಆದರೆ ಮೇಕೆದಾಟು ಯೋಜನೆಯ ಬಗ್ಗೆ ಇಂದಿನ ಸಭೆಯಲ್ಲಿ ಸವಿಸ್ತಾರವಾಗಿ ಚರ್ಚೆ ಆಗಲಿಲ್ಲ. ಆದಾಗ್ಯೂ ತಮಿಳುನಾಡಿನ ಆಕ್ಷೇಪಗಳನ್ನು ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಸಭೆಯ ಬಳಿಕ ಹುಸೇನ್‌ ಸುದ್ದಿಗಾರರಿಗೆ ತಿಳಿಸಿದರು.

‘ಕರ್ನಾಟಕದಲ್ಲಿ ಉತ್ತಮ ಮಳೆಯಾದ ಕಾರಣ ತಮಿಳುನಾಡಿಗೆ ಚೆನ್ನಾಗಿ ನೀರು ಹರಿದುಬಂದಿದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ. ಮುಂದಿನ ಸಭೆ ಜನವರಿಯಲ್ಲಿ ನಡೆಯಲಿದೆ’ ಎಂದೂ ಅವರು ತಿಳಿಸಿದರು.

ಡಿ.7ಕ್ಕೆ ಮೇಕೆದಾಟಿಗೆ ಭೇಟಿ: ಸಚಿವ ಡಿಕೆಶಿ

ಬಹು ನಿರೀಕ್ಷಿತ ಮೇಕೆದಾಟು ಅಣೆಕಟ್ಟು ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಡಿ.7ರಂದು ಮೇಕೆದಾಟಿಗೆ ತಜ್ಞರ ತಂಡದೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

click me!