8 ಕಾಂಗ್ರೆಸ್‌ ಶಾಸಕರು ಬಿಜೆಪಿಯತ್ತ..?

Published : Dec 04, 2018, 07:04 AM IST
8 ಕಾಂಗ್ರೆಸ್‌ ಶಾಸಕರು ಬಿಜೆಪಿಯತ್ತ..?

ಸಾರಾಂಶ

ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. 8 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಬಹುದು. ಕೆಲವರಲ್ಲಿ ಅಸಮಾಧಾನ ಇರುವುದು ನಿಜವೆಂದಿದ್ದಾರೆ. 

ಬೆಳಗಾವಿ :  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ‘ಆಪರೇಷನ್‌ ಕಮಲ’ ನಡೆಸುತ್ತಿದೆ ಎಂಬ ಆರೋಪಗಳ ನಡುವೆಯೇ, ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಸತೀಶ ಜಾರಕಿಹೊಳಿ ಅವರು ಒಂದಷ್ಟುಮಂದಿ ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಲು ಮುಂದಾಗಿರುವುದು ನಿಜ ಎಂದು ಹೊಸ ಬಾಂಬ್‌ ಹಾಕಿದ್ದಾರೆ. ‘ಕಾಂಗ್ರೆಸ್‌ನಲ್ಲಿ ಅತೃಪ್ತ ಶಾಸಕರಿದ್ದು, ಏಳೆಂಟು ಮಂದಿ ಬಿಜೆಪಿ ಸೇರಬಹುದೇ ಹೊರತು 25 ಮಂದಿಯಲ್ಲ’ ಎಂದು ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್‌ ಕಮಲದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಕಾಂಗ್ರೆಸ್‌ನ ಕೆಲ ಶಾಸಕರಲ್ಲಿ ಅಸಮಾಧಾನ ಇರುವುದು ನಿಜ. ಅತೃಪ್ತ 25 ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ಹೋಗುವುದಾದರೆ 7-8 ಶಾಸಕರಷ್ಟೇ ಹೋಗಬಹುದು. ಇದರಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸರ್ಕಾರ ಸುಭದ್ರವಾಗಿರುತ್ತದೆ ಎಂದರು.

ಬಿಜೆಪಿ ನಾಯಕರು ಆರು ತಿಂಗಳಿಂದ ಅತೃಪ್ತ ಕಾಂಗ್ರೆಸ್‌ ಶಾಸಕರಿಗೆ ವಿವಿಧ ಆಮಿಷ ಒಡ್ಡುತ್ತಲೇ ಬಂದಿದ್ದಾರೆ. ಆದರೆ, ಅದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ನಾನಂತೂ ಎಲ್ಲೂ ಹೋಗುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಅತೃಪ್ತರು ನನ್ನ ಸಂಪರ್ಕದಲ್ಲಿಲ್ಲ:

ಅತೃಪ್ತ ಶಾಸಕರ ಜೊತೆ ನಾನು ಸಂಪರ್ಕದಲ್ಲಿಲ್ಲ. ಆದರೆ, ಅತೃಪ್ತರ ಬೇಡಿಕೆಗಳನ್ನು ಹೈಕಮಾಂಡ್‌ಗೆ ತಿಳಿಸಲಾಗಿದೆ. ಶೀಘ್ರ ಸಂಪುಟ ವಿಸ್ತರಣೆ ಮಾಡಿದರೆ ಒಳಿತು. ಈ ಕುರಿತು ವರಿಷ್ಠರಿಂದಲೂ ಭರವಸೆ ಸಿಕ್ಕಿದೆ. ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಒಂದೇ ಮನೆಯಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ನಾನು ಶಾಸಕನಾಗಿದ್ದುಕೊಂಡೇ ಸಾಕಷ್ಟುಪವರ್‌ಫುಲ್‌ ಆಗಿದ್ದೇನೆ. ಸಚಿವರಿಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿದ್ದೇನೆ ಎಂದು ಹೇಳಿದರು. ಜತೆಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪಕ್ಷದ ಕೆಲ ಮುಖಂಡರು ಹೈಕಮಾಂಡ್‌ಗೆ ದೂರು ನೀಡಿರುವ ವಿಚಾರ ನನಗೆ ಗೊತ್ತಿಲ್ಲ ಎಂದರು.

ರೆಸಾರ್ಟ್‌ಗೆ ಹೋಗಿ ಬಂದಿದ್ದೇನೆ!

ಮಾಜಿ ಶಾಸಕ ಎಸ್‌.ಬಿ. ಘಾಟಗೆ ಅವರ ಪುತ್ರನ ವಿವಾಹ ಸಮಾರಂಭಕ್ಕೆ ಹೋಗಿದ್ದ ವೇಳೆ ನಾನು ಕಣಕುಂಬಿ ಬಳಿಯ ಸಾತೇರಿ ರೆಸಾರ್ಟ್‌ಗೆ ಭೇಟಿ ನೀಡಿರುವುದು ನಿಜ. ಮುಂದೆ ಈ ರೆಸಾರ್ಟ್‌ ಉಪಯೋಗಕ್ಕೆ ಬರಬಹುದು ಎಂದು ನೋಡಿಕೊಂಡು ಬಂದಿದ್ದೇನೆ. ಅಲ್ಲಿಗೆ ಪಕ್ಷಾಂತರ ಮಾಡಲು ಶಾಸಕರನ್ನು ಕರೆದುಕೊಂಡು ಹೋಗುವ ಉದ್ದೇಶ ಇಲ್ಲ, ಪ್ರವಾಸಕ್ಕೆಂದು ಕರೆದುಕೊಂಡು ಹೋಗಲಾಗುವುದು ಎಂದು ಇದೇ ವೇಳೆ ಸತೀಶ್‌ ಜಾರಕಿಹೊಳಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ