
ಹಾಸನ[ಜೂ.22]: ಖಾಸಗಿ ವೈದ್ಯರ ಯಡವಟ್ಟಿನಿಂದಾಗಿ ವ್ಯಕ್ತಿಯೊಬ್ಬರು ತಮ್ಮ ತಲೆ ಚಿಪ್ಪನ್ನೇ ಕಳೆದುಕೊಂಡ ಘಟನೆ ಹಾಸನದಲ್ಲಿ ನಡೆದಿದೆ.
ನಿವೃತ್ತ ಕೆಪಿಟಿಸಿಎಲ್ ಉದ್ಯೋಗಿ ಹೊಳೆನರಸೀಪುರ ಪಟ್ಟಣದ ರಾಜು ಎಂಬುವರು ತಲೆ ಚಿಪ್ಪು ಕಳೆದುಕೊಂಡವರು. ರಾಜು ಅವರಿಗೆ ಹೈಪರ್ ಟೆನ್ಷನ್ ಕಾರಣದಿಂದ ಬ್ರೈನ್ ಹ್ಯಾಮರೇಜ್ ಆಗಿ ಹಾಸನದ ಬಿ.ಎಂ. ರಸ್ತೆಯಲ್ಲಿರುವ ಎನ್.ಡಿ.ಆರ್.ಕೆ. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ತಲೆ ಬುರುಡೆ ಸ್ಕ್ಯಾನ್ ಮಾಡಿದ ಆಸ್ಪತ್ರೆಯ ನರರೋಗ ತಜ್ಞ ಹಾಗೂ ಶಸ್ತ್ರಚಿಕಿತ್ಸಕ ಡಾ.ಶ್ರೀಚೈತನ್ಯ, ರಾಜು ಅವರ ಮೆದುಳಿನಲ್ಲಿ ರಕ್ತ ಸೋರಿಕೆಯಾಗಿದೆ. ಜೀವ ಉಳಿಯಬೇಕಾದರೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕು ಎಂದಿದ್ದಾರೆ.
ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಲೆಯ ಎಡಭಾಗದ ಚಿಪ್ಪು ತೆಗೆದು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ಮಿದುಳಿನ ರಕ್ತಸ್ರಾವ ತಡೆಗಟ್ಟಿರುವುದಾಗಿ ಹೇಳಿದ್ದಾರೆ. ಮೂರ್ನಾಲ್ಕು ದಿನಗಳ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಿದ ತಲೆಯ ಚಿಪ್ಪು ಅಳವಡಿಸುವುದಾಗಿ ರಾಜು ಅವರಿಗೆ ತಿಳಿಸಿದ್ದಾರೆ. ಆದರೆ 1 ವಾರ ಕಳೆದರೂ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡದ ವೈದ್ಯರು, ಬುರುಡೆಯ ಚಿಪ್ಪಿಗೆ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಹೇಳಿ ತಲೆಯ ಚಿಪ್ಪನ್ನೇ ಯಾರಿಗೂ ತಿಳಿಸದೆ ಎಸೆದಿದ್ದಾರೆ.
ತಲೆಯಲ್ಲಿ ಚಿಪ್ಪಿಲ್ಲದ ಕಾರಣ ರಾಜು ಅವರ ತಲೆಯ ಎಡಭಾಗವನ್ನು ಯಾರೂ ಮುಟ್ಟುವಂತಿಲ್ಲ. ವೈದ್ಯರ ತಪ್ಪಿನಿಂದ ರಾಜು ಅವರ ಪ್ರಾಣಕ್ಕೆ ಅಪಾಯ ಎದುರಾಗಿದೆ. ಈಗಾಗಲೇ ಶಸ್ತ್ರಚಿಕಿತ್ಸೆಗಾಗಿ 3 ಲಕ್ಷ ರೂ. ಖರ್ಚಾಗಿದೆ. ಹೀಗಾಗಿ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕು. ಜೊತೆಗೆ ತಪ್ಪು ಮಾಡಿರುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.