
ಚಿಕ್ಕಬಳ್ಳಾಪುರ (ಡಿ.14): ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೂ ಕೃಷ್ಣನಿಗೂ ಎಲ್ಲಿಯ ಸಂಬಂಧವೋ ಗೊತ್ತಿಲ್ಲ. ಆದರೆ ಇಲ್ಲೊಬ್ಬ ವೈದ್ಯರು ಶಸ್ತ್ರಚಿಕಿತ್ಸೆ ವೇಳೆ ಕೃಷ್ಣ ಕೃಷ್ಣ ಎಂದು ಭಜನೆ ಮಾಡಿದರೆ ಮಾತ್ರ ಶಸ್ತ್ರಚಿಕಿತ್ಸೆ ಮಾಡುವುದಾಗಿ ಷರತ್ತು ವಿಧಿಸಿದ್ದರಿಂದ ಅನಿವಾರ್ಯವಾಗಿ ಅದನ್ನು ಹೇಳಬೇಕಾಯಿತು ಎಂದು ಆರೋಪಿಸಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ಮಂಗಳವಾರ ಚಿಂತಾಮಣಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸೊಣ್ಣಶೆಟ್ಟಹಳ್ಳಿಯ ನಾಸೀಮಾ ಬಾನು ದೂರು ಸಲ್ಲಿಸಿದ ಮಹಿಳೆಯಾಗಿದ್ದು, ವೈದ್ಯರು ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಾಗಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಿಂತಾಮಣಿ ಪೊಲೀಸರಿಗೆ ತನಿಖೆ ಎಲ್ಲಿಂದ? ಹೇಗೆ ಆರಂಭಿಸಬೇಕು ಎಂಬುದೇ ಪ್ರಶ್ನೆಯಾಗಿದೆ.
ಏನಿದು ಪ್ರಕರಣ?: ಬೆಂಗಳೂರಿನ ಯಶವಂತಪುರದ ನಿವಾಸಿ ನಾಸೀಮಾ ಬಾನು ಅವರು ಒಂದು ವಾರದ ಹಿಂದಷ್ಟೇ ಚಿಂತಾಮಣಿ ತಾಲೂಕಿನ ಸೊಣ್ಣಶೆಟ್ಟಹಳ್ಳಿಯ ಅಜ್ಜಿ ಮನೆಗೆ ಬಂದಿದ್ದರು.ಇವರಿಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದು ಪಟ್ಟಣದಲ್ಲಿ ಪ್ರತಿ ತಿಂಗಳು ನಡೆಯುವ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಮಂಗಳವಾರ ಮಧ್ಯಾಹ್ನ ಆಗಮಿಸಿದ್ದಾರೆ.
ಈ ವೇಳೆ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದ ವೈದ್ಯರೊಬ್ಬರು, ಚಿಕಿತ್ಸೆ ನಡೆಯುತ್ತಿದ್ದ ವೇಳೆ ಎಲ್ಲರೂ ಕೃಷ್ಣ ಕೃಷ್ಣ ಎಂದು ಭಜನೆ ಮಾಡಬೇಕು ಎಂದು ಸೂಚಿಸಿದ್ದಾರೆ. ಆದರೆ ಇದಕ್ಕೆ ತಾನು ಆಕ್ಷೇಪ ವ್ಯಕ್ತಪಡಿಸಿದ್ದಾಗಿ ಆಕೆ ತಿಳಿಸಿದ್ದಾರೆ. ಕೃಷ್ಣ ಕೃಷ್ಣ ಎನ್ನದಿದ್ದರೆ ಶಸ್ತ್ರ ಚಿಕಿತ್ಸೆ ಮಾಡುವುದಿಲ್ಲ ಎಂದು ವೈದ್ಯರು ಹೇಳಿದರು. ಆದ್ದರಿಂದ ತಾನೂ ಭಜನೆ ಮಾಡಿದೆ. ವೈದ್ಯರ ಒತ್ತಾಯಂದಾಗಿ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ದೂರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.