ಅನರ್ಹರ ಸ್ಪರ್ಧೆಗೆ ಆಯೋಗ ಸಮ್ಮತಿ

By Kannadaprabha NewsFirst Published Sep 24, 2019, 7:26 AM IST
Highlights

17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಮಾಡಿಕೊಂಡ ಮಧ್ಯಂತರ ಮನವಿ ಪುರಸ್ಕರಿಸಿದೆ.

ನವದೆಹಲಿ [ಸೆ.24]: 17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಮಾಡಿಕೊಂಡ ಮಧ್ಯಂತರ ಮನವಿ ಪುರಸ್ಕರಿಸಿದೆ. ಸೆ.25, 26ಕ್ಕೆ ವಿಚಾರಣೆ ನಿಗದಿಪಡಿಸಿರುವ ಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ಕೇಳಿ ವಿಧಾನಸಭಾ ಸ್ಪೀಕರ್, ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ಶಾಸಕಾಂಗ ನಾಯಕ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ರಿಗೆ ನೋಟಿಸ್ ನೀಡಿದೆ. ಇದೇ ವೇಳೆ, ದಿಢೀರ್ ಮಧ್ಯಪ್ರವೇಶಿಸಿರುವ ಚುನಾವಣಾ ಆಯೋಗ, ಅನರ್ಹ ಶಾಸಕರು ಸ್ಪರ್ಧಿಸಲು ಅಭ್ಯಂತರ ಇಲ್ಲ ಎಂದಿದೆ.

ಆತಂಕಗೊಂಡಿದ್ದ ಅನರ್ಹ ಶಾಸಕರಿಗೆ ಇದು ಕೊಂಚ ನೆಮ್ಮದಿ ನೀಡಿದೆ. ಪ್ರಕರಣ ಮೊದಲು ವಿಚಾರಣೆಗೆ ಬಂದ ಸಂದರ್ಭದಲ್ಲಿ ನ್ಯಾಯಾಲಯವು ದಿನದ ಕಲಾಪದ ಕೊನೆಯಲ್ಲಿ ಎತ್ತಿಕೊಳ್ಳುವುದಾಗಿ ನ್ಯಾ|ಎನ್.ವಿ.ರಮಣ, ನ್ಯಾ|ಸಂಜೀವ್ ಖನ್ನಾ, ನ್ಯಾ|ಕೃಷ್ಣ ಮುರಾರಿ ಅವರನ್ನೊಳ ಗೊಂಡ ತ್ರಿಸದಸ್ಯ ಪೀಠ ಹೇಳಿತ್ತು. ಬಳಿಕ ದಿನದ ಕಲಾಪದ ಕೊನೆಗೆ 40 ನಿಮಿಷಗಳ ಕಾಲ ವಿಚಾರಣೆ ನಡೆಸಿತು.

ಪ್ರಕರಣದ ತುರ್ತು ವಿಚಾರಣೆ ನಡೆಸಬೇಕು ಎಂದು ಅನರ್ಹ ಶಾಸಕರು ಕಳೆದ ಒಂದೂವರೆ ತಿಂಗಳಲ್ಲಿ ನಾಲ್ಕು ಬಾರಿ ನ್ಯಾಯಾಲಯದ ಮುಂದೆ ನಿವೇದಿಸಿಕೊಂಡಿದ್ದರೂ ಸುಪ್ರೀಂ ಕೋರ್ಟ್ ಈ ಮನವಿಗೆ ಸೊಪ್ಪು ಹಾಕಿರಲಿಲ್ಲ. ಆದರೆ, ಸೋಮ ವಾರ ಅನರ್ಹರ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ಪ್ರಕರಣದಲ್ಲಿ ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಕಾರಣ ವಾಗುವ ಅಂಶಗಳನ್ನು ವಿಚಾರಣೆಯ ಕಲಾಪದ ಆರಂಭದಲ್ಲೇ ಚುಟುಕಾಗಿ ನ್ಯಾಯಾಲಯದ ಮುಂದಿಟ್ಟರು. 

ನ್ಯಾಯಾಲಯ ಕೂಡ ಪ್ರಕರಣದಲ್ಲಿ ತುರ್ತು ನಿರ್ದೇಶನ ನೀಡಬೇಕಾದ ಅಂಶಗಳಿರುವುದನ್ನು ಮನಗಂಡು ವಿಚಾರಣೆಯನ್ನು ಬುಧವಾರ ಮತ್ತು ಗುರುವಾರಕ್ಕೆ ನಿಗದಿ ಪಡಿಸಿರುವುದು ಅನರ್ಹ ಶಾಸಕರ ಪಾಲಿಗೆ ಅತ್ಯಂತ ಗಮನಾರ್ಹ ವಿಷಯವಾಗಿದೆ. 

ಚುನಾವಣೆಗೆ ತಡೆ ನೀಡಲು ಮನವಿ: ಅನರ್ಹರ ಪರ ವಾದಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಉಪ ಚುನಾವಣೆಗೆ ತಡೆ ನೀಡಬೇಕು ಎಂದು ತಮ್ಮ ವಾದ ಪ್ರಾರಂಭಿಸಿದರು. ಯಾವ ಕಾರಣಕ್ಕೂ ನಮ್ಮ ಅರ್ಜಿ ಇತ್ಯರ್ಥವಾಗುವ ವರೆಗೆ ಚುನಾವಣೆ ನಡೆಯಬಾರದು. ಒಂದು ವೇಳೆ ಚುನಾವಣೆ ನಡೆದರೂ ಅನರ್ಹರಿಗೆ ಸ್ಪರ್ಧಿಸಲು ಅವಕಾಶ ಸಿಗಬೇಕು ಎಂಬ ಅಡಿಪಾಯವನ್ನು ಹಾಕಿ ತಮ್ಮ ವಾದ ಬಿಚ್ಚಿಟ್ಟರು.

15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ನಾಮಪತ್ರ ಸಲ್ಲಿಸಲು ಸೆ.30 ಕೊನೇ ದಿನ. ನಾವು ನಿಯಮಬದ್ಧವಾಗಿ ನೀಡಿದ್ದ ರಾಜೀನಾಮೆ ತಿರಸ್ಕರಿಸಿದ ಸ್ಪೀಕರ್ ಸಂವಿಧಾನ ವಿರೋಧಿ ನಿಲುವು ತಾಳಿ 15ನೇ ವಿಧಾನಸಭೆ ಮುಕ್ತಾಯದ ಅವಧಿಯಾದ 2023ರವರೆಗೆ ನಮ್ಮನ್ನು ಶಾಸಕ ಸ್ಥಾನದಿಂದ ಮತ್ತು ಶಾಸಕ ಸ್ಥಾನಕ್ಕೆ ಸ್ಪರ್ಧಿಸುವುದರಿಂದ ಅನರ್ಹಗೊಳಿಸಿದ್ದಾರೆ ಎಂದು ಅನರ್ಹರ ಪರ ಮುಕುಲ್ ರೋಹಟ್ಗಿ ವಾದಿಸಿದರು. ನಮ್ಮ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ಮೀನಮೇಷ ಎಣಿಸಿದ ಬಳಿಕ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೆವು. ಈ ಸಂದರ್ಭದಲ್ಲಿ ಕೋರ್ಟ್ ನಾವು ಸಲ್ಲಿಸಿರುವ ರಾಜೀನಾಮೆ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಸ್ಪೀಕರ್‌ಗೆ ಸೂಚಿಸಿತ್ತು.

ಅಷ್ಟೇ ಅಲ್ಲದೆ, ನಮಗೆ ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸುವ ಅಥವಾ ಭಾಗವಹಿಸದಿರುವ ವಿವೇಚ ನಾಧಿಕಾರವನ್ನೂ ನ್ಯಾಯಾಲಯವೇ ದಯಪಾಲಿಸಿತ್ತು. ಈ ಮೂಲಕ ವಿಪ್ ಉಲ್ಲಂಘನೆಯ ಆತಂಕ ದಿಂದ ರಕ್ಷಣೆ ನೀಡಲಾಗಿತ್ತು ಎಂದು ವಾದಿಸಿದರು. ಶಾಸಕರನ್ನು ಅನರ್ಹಗೊಳಿಸುಲು ಇರುವ ಪ್ರಕ್ರಿಯೆಗಳನ್ನು ಸೂಕ್ತವಾಗಿ ಆಗಿನ ಸ್ಪೀಕರ್ ಪಾಲಿಸಿಲ್ಲ. ನಮ್ಮನ್ನು ಅನರ್ಹಗೊಳಿಸುವಂತೆ ಪಕ್ಷದ ಶಾಸಕಾಂಗ ನಾಯಕರು ನೀಡಿರುವ ದೂರಿಗೆ ಪ್ರತಿಕ್ರಿಯಿಸಲು ಸ್ಪೀಕರ್ ನಮಗೆ ಕನಿಷ್ಠ ಪಕ್ಷ 7 ಅಥವಾ ಅದಕ್ಕಿಂತ ಹೆಚ್ಚು ದಿನಗಳ ಅವಕಾಶ ನೀಡಬೇಕಿತ್ತು.

ಆದರೆ ನಮಗೆ ಕೇವಲ 3 ದಿನಗಳ ಸಮಯ ನೀಡಲಾಗಿತ್ತು. ಆ ಸಂದರ್ಭದಲ್ಲಿ ನಮ್ಮ ಪರ ವಕೀಲರು ಸ್ಪೀಕರ್ ಮುಂದೆ ಹಾಜರಾಗಿ ಹೆಚ್ಚುವರಿ ಸಮಯ ಕೇಳಿದರು. ಆದರೆ ಸ್ಪೀಕರ್ ಇದನ್ನು ಒಪ್ಪಿಕೊಳ್ಳದೆ ನಮ್ಮನ್ನು ಅನರ್ಹಗೊಳಿಸಿದರು. ಪ್ರತಿಕ್ರಿಯೆ ಸಲ್ಲಿಸಲು ಇರುವ 7 ದಿನಗಳ ಅವಧಿಯನ್ನು ಮೊಟಕುಗೊಳಿಸುವ ಯಾವುದೇ ಅಧಿಕಾರ ಸ್ಪೀಕರ್‌ಗೆ ಇಲ್ಲ ಎಂದು ರೋಹಟ್ಗಿ ವಾದಿಸಿದರು.

ನಮ್ಮ ರಾಜೀನಾಮೆ ನೈಜ ಮತ್ತು ಸ್ವಇಚ್ಛೆಯಿಂದ ಕೂಡಿದ್ದು ಎಂದು ಒಪ್ಪಿಕೊಳ್ಳುವ ಸ್ಪೀಕರ್, ನಮ್ಮ ಉದ್ದೇಶ ಪಕ್ಷಾಂತರವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮನ್ನು ಅನರ್ಹಗೊಳಿಸಲಾಗುತ್ತಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಸ್ಪೀಕರ್ ಅವರಿಗೆ ನಮ್ಮ ಉದ್ದೇಶ ಪರಿಗಣಿಸುವ ಅಧಿಕಾರವೇ ಇಲ್ಲ. ಸ್ಪೀಕರ್ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ತೀರ್ಮಾನ ಕೈಗೊಂಡಿದ್ದಾರೆ. 15 ನೇ ವಿಧಾನಸಭೆ ಮುಕ್ತಾಯದವರೆಗೆ ಅನರ್ಹಗೊಳಿಸುವ ಯಾವುದೇ ಅಧಿಕಾರ ಸ್ಪೀಕರ್‌ಗೆ ಇಲ್ಲ. ಶಾಸಕ, ಸಂಸದರ ರಾಜೀನಾಮೆ ಮತ್ತು ಅನರ್ಹತೆ ಪ್ರತಿನಿಧಿಸುವ ಸಂವಿಧಾನದ ವಿಧಿಗಳು ರಾಜೀನಾಮೆ ಅಥವಾ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಅನರ್ಹರಾಗುವ ಚುನಾಯಿತ ಪ್ರತಿನಿಧಿಗಳಿಗೆ ಮತ್ತೆ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸುವ ಅಧಿಕಾರ ನೀಡಿಲ್ಲ ಎಂದು ವಾದಿಸಿದರು. ಒಂದೋ ನಾಮಪತ್ರ ಸಲ್ಲಿಕೆಗೆ ಇರುವ ಕೊನೇ ದಿನ ಸೆ.೩೦ನ್ನು ಮುಂದೂಡಿ ಅಥವಾ ನಮಗೂ ಸ್ಪರ್ಧೆಗೆ ಅವಕಾಶಕೊಡಿ ಎಂದು ರೋಹಟ್ಗಿ ಹೇಳಿದರು.

click me!