
ನವದೆಹಲಿ (ಮೇ.29): ಗೋವುಗಳ ಮಾರಾಟ/ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿದ ಆದೇಶವನ್ನು ಖಂಡಿಸಿ ಕೇರಳದ ಅಲ್ಲಲ್ಲಿ ಪ್ರತಿಭಟನೆಯಾಗುತ್ತಿದೆ. ನಾವೇನು ತಿನ್ನಬೇಕು ಎನ್ನುವುದನ್ನು ದೆಹಲಿ ಅಥವಾ ನಾಗ್ಪುರದಲ್ಲಿ ಕುಳಿತು ನಿರ್ಧರಿಸಲು ಸಾಧ್ಯವಿಲ್ಲ.ಮುಂದೇನು ಮಾಡಬೇಕು ಎಂಬುದರ ಬಗ್ಗೆ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಲಿದ್ದೇವೆ ಎಂದು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೇಳಿದ್ದಾರೆ.
ಗೋಹತ್ಯೆ ನಿಷೇಧದ ಬಗ್ಗೆ ಕೇಂದ್ರ ಪರಿಸರ ಇಲಾಖೆ ಹೊರಡಿಸಿದ ಅಧಿಸೂಚನೆಯನ್ನು ಖಂಡಿಸಿ ಕೇರಳದ ಆಡಳಿತಾ ರೂಢ ಸಿಪಿಎಂ ಸರ್ಕಾರ ರಾಜ್ಯದ 200 ಕಡೆಗಳಲ್ಲಿ ಬೀಫ್ ಫೆಸ್ಟನ್ನು ಆಯೋಜಿಸಿದೆ. ಸಿಎಂ ಪಿನರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು ಪ್ರತಿಕ್ರಿಯೆ ಬಂದ ಬಳಿಕವಷ್ಟೇ ಇದು ಕೇರಳದಲ್ಲಿ ಜಾರಿಯಾಗಲಿದೆ ಎಂದಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ಕೂಡಾ ಇದನ್ನು ಖಂಡಿಸಿದೆ.
ತಮಿಳುನಾಡಿನಲ್ಲಿ ಗೋಮಾಂಸ ಮಾರಾಟ ಇನ್ನೂ ರದ್ದಾಗಿಲ್ಲ. ಮುಖ್ಯಮಂತ್ರಿ ಪಳನೀಸ್ವಾಮಿ ಮೌನವಾಗಿರುವುದಕ್ಕೆ ಪ್ರತಿಪಕ್ಷಗಳು ಕಿಡಿಕಾರಿವೆ. ಪಕ್ಕದ ಕೇರಳ ಹಾಗೂ ಕರ್ನಾಟಕದಲ್ಲಿ ಪ್ರತಿಭಟನೆ ನಡೆಯುತ್ತಿರುವಾಗ ನೀವೇಕೆ ಸುಮ್ಮನಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿವೆ. ಪೂರ್ತಿ ಆದೇಶ ಓದಿದ ನಂತರ ಪ್ರತಿಕ್ರಿಯಿಸುತ್ತೇನೆ. ಮಾಧ್ಯಮದ ವರದಿ ನೋಡಿ ಪ್ರತಿಕ್ರಿಯಿಸುವುದಿಲ್ಲವೆಂದು ಹೇಳಿದ್ದಾರೆ.
ಪಾಂಡಿಚೆರಿಯಲ್ಲಿ ಫ್ರೆಂಚ್ ಸಂಸ್ಕೃತಿಯ ಪ್ರಭಾವವಿದೆ. ನಮ್ಮಲ್ಲಿ ಗೋಮಾಂಸವನ್ನು ತಿನ್ನುವವರಿದ್ದಾರೆ. ಇದನ್ನು ನಿಲ್ಲಿಸುವ ಹಕ್ಕು ಕೇಂದ್ರ ಸರ್ಕಾರಕ್ಕಿಲ್ಲ ಎಂದು ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಹೇಳಿದ್ದಾರೆ.
ನಮಗಿನ್ನೂ ಸರ್ಕಾರದ ಸುತ್ತೋಲೆ ಬಂದಿಲ್ಲ. ಅದನ್ನ ನೋಡಿ ಆ ಮೇಲೆ ನಿರ್ಧರಿಸುತ್ತೇವೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.