ಡೆಂಘೀ ಚಿಕಿತ್ಸೆಗೆ 18 ಲಕ್ಷ ಸುಲಿಗೆ..!

By Suvarna Web DeskFirst Published Nov 20, 2017, 2:33 PM IST
Highlights

ಡೆಂಘೀಯಿಂದ ನರಳುತ್ತಿದ್ದ ಬಾಲಕಿಯೊಬ್ಬಳಿಗೆ 15 ದಿನ ಚಿಕಿತ್ಸೆ ನೀಡಿದ ದೆಹಲಿಯ ಖಾಸಗಿ ಆಸ್ಪತ್ರೆಯೊಂದು 18 ಲಕ್ಷ ರು. ಬಿಲ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇಷ್ಟಾದರೂ ಬಾಲಕಿ ಬದುಕಿ ಉಳಿದಿಲ್ಲ.

ನವದೆಹಲಿ(ನ.20): ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್ ಹಾಕಲು ಕರ್ನಾಟಕ ಸರ್ಕಾರ ಮಸೂದೆ ಜಾರಿಗೆ ಹೊರಟಿರುವಾಗಲೇ ಡೆಂಘೀಯಿಂದ ನರಳುತ್ತಿದ್ದ ಬಾಲಕಿಯೊಬ್ಬಳಿಗೆ 15 ದಿನ ಚಿಕಿತ್ಸೆ ನೀಡಿದ ದೆಹಲಿಯ ಖಾಸಗಿ ಆಸ್ಪತ್ರೆಯೊಂದು 18 ಲಕ್ಷ ರು. ಬಿಲ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇಷ್ಟಾದರೂ ಬಾಲಕಿ ಬದುಕಿ ಉಳಿದಿಲ್ಲ.

ಜೊತೆಗೆ 15 ದಿನಗಳಲ್ಲಿ ಚಿಕಿತ್ಸೆ ನೀಡಿದ್ದಾಗಿ ಆಸ್ಪತ್ರೆ ನೀಡಿದ ವಿವರ ಎಲ್ಲರನ್ನೂ ದಂಗುಬಡಿಸಿದೆ.7 ವರ್ಷದ ಬಾಲಕಿಯೊಬ್ಬಳು ಡೆಂಘೀ ಜ್ವರಕ್ಕೆ ಚಿಕಿತ್ಸೆಗೆಂದು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಳು. 5ನೇ ದಿನಕ್ಕಾಗಲೇ ಆಕೆಯನ್ನು ಕೃತಕ ಉಸಿರಾಟ ವ್ಯವಸ್ಥೆಗೆ ಒಳಪಡಿಸಲಾಗಿತ್ತು. ಜೊತೆಗೆ ಆಕೆಗೆ ನಿತ್ಯ ನಾನಾ ರೀತಿಯ ಚಿಕಿತ್ಸೆ ಕೊಡಲಾಯಿತು. ಆದರೆ ಪೋಷಕರಿಗೆ ಇದು ಅನುಮಾನ ತರಿಸಿತ್ತು.

ಸಿಟಿ ಸ್ಕ್ಯಾನ್ ಮಾಡಿ ಪುತ್ರಿ ಬದುಕಿರುವುದನ್ನು ಖಚಿತಪಡಿಸಿ ಎಂದರೂ, ವೆಂಟಿಲೇಟರ್‌ನಲ್ಲಿ ಇದ್ದಾಗ ಸಿಟಿ ಸ್ಕ್ಯಾನ್ ಸಾಧ್ಯವಿಲ್ಲ ಎಂದಿತ್ತು ಆಸ್ಪತ್ರೆ. ಬಳಿಕ ಸ್ಕ್ಯಾನಿಂಗ್ ವೇಳೆ ಬಾಲಕಿಯ ಮೆದುಳಿನ ಶೇ.70 ಭಾಗಕ್ಕೆ ಹಾನಿಯಾಗಿದ್ದು ಖಚಿತಪಟ್ಟಿತ್ತು. ಆದರೂ 20 ಲಕ್ಷ ರು. ವೆಚ್ಚ ತಗಲುವ ಫುಲ್ ಬಾಡಿ ಪ್ಲಾಸ್ಮಾ ಟ್ರಾನ್ಸ್‌ಪ್ಲಾಂಟ್‌ಗೆ ವೈದ್ಯರು ಶಿಫಾರಸು ಮಾಡಿದರು. ಇದಕ್ಕೆ ಪೋಷಕರು ನಿರಾಕರಿಸಿ, ಬಾಲಕಿ ಬಿಡುಗಡೆಗೆ ಕೋರಿದರು.ಇದಕ್ಕೆ ಆಸ್ಪತ್ರೆ ನಿರಾಕರಿಸಿತು.

ಕೊನೆಗೆ ಪೋಷಕರು, ವೈದ್ಯರ ಸಲಹೆಗೆ ವಿರುದ್ಧವಾಗಿ ನಡೆದುಕೊಂಡ ಪ್ರಮಾಣ ಪತ್ರಕ್ಕೆ ಸಹಿ ಹಾಕಿದರು. ಬಳಿಕ ಬಾಲಕಿಯನ್ನು ಬಿಡುಗಡೆ ಮಾಡಲು ಆಸ್ಪತ್ರೆ ಒಪ್ಪಿ, 18 ಲಕ್ಷ ರು. ಬಿಲ್ ನೀಡಿತು. ಆದರೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಅ್ಯಂಬುಲೆನ್ಸ್ ನೀಡಲು ನಿರಾಕರಿಸಿತು. ಕೊನೆಗೆ ಪೋಷಕರು ಬೇರೊಂದು ಆಸ್ಪತ್ರೆಯ ಆ್ಯಂಬುಲೆನ್ಸ್‌ನಲ್ಲಿ ಬಾಲಕಿಯನ್ನು ಕರೆದೊಯ್ಯುವ ವೇಳೆ ಆಕೆ ಸಾವನ್ನಪ್ಪಿದ್ದಾಳೆ. ಈ ನಡುವೆ ಬಾಲಕಿ ಚಿಕಿತ್ಸೆ ಪಡೆದ ಆಸ್ಪತ್ರೆಯ ಬಿಲ್ ಚೆಕ್ ಮಾಡಿದಾಗ 13 ರು.ಬೆಲೆಯ ಶುಗರ್ ಸ್ಟ್ರಿಪ್‌ಗೆ 200 ರು. ದರ ಹಾಕಿದ್ದು, 2700 ಹ್ಯಾಂಡ್‌ಗ್ಲೌಸ್ ಬಳಸಿದ್ದಾಗಿ ನಮೂದಿಸಿರುವುದು ಬೆಳಕಿಗೆ ಬಂದಿದೆ.

click me!