ಈ ವರ್ಷ ರಾಜ್ಯದಲ್ಲಿ 750 ರೈತರ ಆತ್ಮಹತ್ಯೆ

By Suvarna Web DeskFirst Published Nov 20, 2017, 1:55 PM IST
Highlights

ಜನವರಿ 1 ರಿಂದ ಈವರೆಗೆ ರಾಜ್ಯದಲ್ಲಿ ಸುಮಾರು 750 ರೈತರು ಸಾವಿಗೆ ಶರಣಾಗಿದ್ದಾರೆ. ರಾಜ್ಯ ಸರ್ಕಾರದ ಸಾಲ ಮನ್ನಾ ಬಳಿಕವೂ ಈ ಸಾವಿನ ಸರಣಿ ಮುಂದುವರಿದಿದ್ದು, 200ಕ್ಕೂ ಹೆಚ್ಚು ರೈತರು ಸಾವಿನ ಕದ ತಟ್ಟಿದ್ದಾರೆ.

ಬೆಂಗಳೂರು(ನ.20): ಒಂದು ಕಡೆ ಅತಿವೃಷ್ಟಿ-ಅನಾವೃಷ್ಟಿಯಂಥ ಪ್ರಾಕೃತಿಕ ಅಸಮತೋಲನ, ಇನ್ನೊಂದು ಕಡೆ ಕೀಟ ಬಾಧೆಯಿಂದ ತತ್ತರಿಸಿರುವ ರಾಜ್ಯದ ಅನ್ನದಾತರ ಸಾವಿನ ಸರಣಿ ನಿಲ್ಲುವಂತೆ ಕಾಣುತ್ತಿಲ್ಲ. ಜನವರಿ 1 ರಿಂದ ಈವರೆಗೆ ರಾಜ್ಯದಲ್ಲಿ ಸುಮಾರು 750 ರೈತರು ಸಾವಿಗೆ ಶರಣಾಗಿದ್ದಾರೆ. ರಾಜ್ಯ ಸರ್ಕಾರದ ಸಾಲ ಮನ್ನಾ ಬಳಿಕವೂ ಈ ಸಾವಿನ ಸರಣಿ ಮುಂದುವರಿದಿದ್ದು, 200ಕ್ಕೂ ಹೆಚ್ಚು ರೈತರು ಸಾವಿನ ಕದ ತಟ್ಟಿದ್ದಾರೆ. ಅಚ್ಚರಿಯೆಂದರೆ ರೈತರ ಆತ್ಮಹತ್ಯೆಯಲ್ಲಿ ಮಲೆನಾಡು ಜಿಲ್ಲೆ ಚಿಕ್ಕಮಗಳೂರು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿರುವುದು.!

ವರ್ಷಾರಂಭದಲ್ಲಿ ಭೀಕರ ಬರ ಆವರಿಸಿದ್ದ ಹಿನ್ನೆಲೆಯಲ್ಲಿ ಸಾಲ-ಸೋಲ ಮಾಡಿ ಬೆಳೆ ಬೆಳೆದಿದ್ದ ರೈತರು ಬೆಳೆ ಸರಿಯಾಗಿ ಕೈಗೆ ಸಿಗದೆ ಆತ್ಮಹತ್ಯೆಯ ದಾರಿ ಹಿಡಿದಿದ್ದರು, ಆ ಬಳಿಕ ತಡವಾದರೂ ಮುಂಗಾರು ರಾಜ್ಯದ ಮೇಲೆ ಕೃಪೆ ತೋರಿದ ಪರಿಣಾಮ ಉತ್ತಮ ಮಳೆ ಬಿತ್ತಾದರೂ ಹಲವೆಡೆ ಅತಿವೃಷ್ಟಿಯಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಷ್ಟವಾಯಿತು. ಈ ಮೂಲಕ ಮತ್ತಷ್ಟು ರೈತರು ಆತ್ಮಹತ್ಯೆಯ ದಾರಿ ಹಿಡಿಯುವಂತಾಯಿತು.

ಚಿಕ್ಕಮಗಳೂರಲ್ಲೇ ಹೆಚ್ಚು: ಹಾಗೆ ನೋಡಿದರೆ ಮಂಡ್ಯ, ಮೈಸೂರು ಮತ್ತು ಉತ್ತರ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಪ್ರತಿ ಬಾರಿ ಸದ್ದು ಮಾಡುತ್ತಿತ್ತು. ಆದರೆ, ಈ ಬಾರಿ ಮಲೆನಾಡು ಪ್ರದೇಶದಲ್ಲೂ ಭೀಕರ ಬರ ಮತ್ತು ಅತಿವೃಷ್ಟಿ ಎರಡೂ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಿಲ್ಲೆಯಲ್ಲಿ ಜ.1 ರಿಂದೀಚೆಗೆ 72 ಮಂದಿ (ಠಾಣೆಯಲ್ಲಿ ದೂರು ದಾಖಲಾಗಿರುವಂತೆ) ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಕರಾವಳಿ ಜಿಲ್ಲೆಗಳಲ್ಲಿ ಬರದ ಛಾಯೆಯ ಹೊರತಾಗಿಯೂ ಮಾಮೂಲಿನಂತೆ ಅತಿ ಕಡಿಮೆ ಆತ್ಮಹತ್ಯೆ ಪ್ರಕರಣ ದಾಖಲಾಗಿವೆ. ಉತ್ತರ ಕನ್ನಡದಲ್ಲಿ 4 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರೈತ ಆತ್ಮಹತ್ಯೆಯ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.

ಕಡೂರಿನಲ್ಲೇ ಜಾಸ್ತಿ: ಇನ್ನು ಚಿಕ್ಕಮಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ 72 ಮಂದಿಯಲ್ಲಿ 29 ಮಂದಿ ಕಡೂರು ತಾಲೂಕಿನವರು. ಅರೆ ಮಲೆನಾಡು ಪ್ರದೇಶವಾಗಿರುವ ಕಡೂರಿನಲ್ಲಿ ವಾಡಿಕೆಯಷ್ಟು ಮಳೆ ಸಕಾಲದಲ್ಲಿ ಬಾರದೆ ಬೆಳೆ ನಷ್ಟವಾಗಿದೆ. ಜತೆಗೆ ಸಾಲ ಮಾಡಿ ತೋಡಿದ ಬೋರ್‌ವೆಲ್‌ಗಳು ವಿಫಲವಾಗಿ ರೈತರು ಸಾಲ ತೀರಿಸುವ ಮಾರ್ಗ ತಿಳಿಯದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ 374: ಹೈದರಾಬಾದ್ ಕರ್ನಾಟಕ ಸೇರಿ ಒಟ್ಟಾರೆ ಉತ್ತರ ಕರ್ನಾಟಕದಲ್ಲಿ ಈವರ್ಷ 374 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿಯಲ್ಲಿ ಅತಿ ಹೆಚ್ಚು ಅಂದರೆ 50 ಮಂದಿ ರೈತರು ಸಾಲಬಾಧೆಯಿಂದ ಕಂಗೆಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕಲಬುರಗಿಯಲ್ಲಿ 12 ಹಾಗೂ ಬಳ್ಳಾರಿಯಲ್ಲಿ ಈವರೆಗೆ 13 ಮಂದಿ ಅನ್ನದಾತರು ಸಾವಿನ ಕದ ತಟ್ಟಿದ್ದಾರೆ.

ಉತ್ತರ ಕರ್ನಾಟಕದಿಂದ ಹೈದರಾಬಾದ್ ಕರ್ನಾಟಕವನ್ನು ಪ್ರತ್ಯೇಕವಾಗಿಟ್ಟುಕೊಂಡು ನೋಡಿದರೆ ಈ ಭಾಗದ ವ್ಯಾಪ್ತಿಗೆ ಬರುವ 5 ಜಿಲ್ಲೆಗಳಲ್ಲಿ ಈ ವರ್ಷ ಜ.1ರಿಂದ ಒಟ್ಟಾರೆ 151 ಮಂದಿ ರೈತರು ಸಾವಿಗೆ ಶರಣಾಗಿದ್ದಾರೆ. ರಾಯಚೂರಲ್ಲಿ ಅತೀ ಹೆಚ್ಚು ಅಂದರೆ 46 ಮಂದಿ, ಕಲಬುರಗಿಯಲ್ಲಿ ಅತಿ ಕಡಿಮೆ ಅಂದರೆ 12 ಮಂದಿ ಸಾವಿನ ಕದ ತಟ್ಟಿದ್ದಾರೆ.

ಇನ್ನು ಮೈಸೂರು ಕರ್ನಾಟಕದ 11 ಜಿಲ್ಲೆಗಳಲ್ಲಿ 392 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ಇದು ಹೆಚ್ಚು. ವಿಶೇಷವೆಂದರೆ ಅತಿ ಹೆಚ್ಚು ಸಾವಿಗೆ ಸಾಕ್ಷಿಯಾಗುತ್ತಿದ್ದ ಮೈಸೂರು ಮತ್ತು ಮಂಡ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಮಂಡ್ಯದಲ್ಲಿ ಈ ಬಾರಿ ರೈತರ ಆತ್ಮಹತ್ಯೆ ಪ್ರಮಾಣ ಇಳಿಮುಖವಾಗಿದೆ. ಮೈಸೂರಿನಲ್ಲಿ ಏಪ್ರಿಲ್ ತಿಂಗಳಿಂದೀಚೆಗೆ 37 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಿದಂತೆ ಒಟ್ಟಾರೆಯಾಗಿ ನೋಡಿದರೆ ಈ 11 ಜಿಲ್ಲೆಗಳಲ್ಲಿ ಚಿಕ್ಕಮಗಳೂರಿನಲ್ಲಿ

72 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ರಾಮನಗರ ಜಿಲ್ಲೆಯಲ್ಲಿ ಅತಿಕಡಿಮೆ ಅಂದರೆ 5 ಮಂದಿ ಸಾವಿನ ಕದ ತಟ್ಟಿದ್ದಾರೆ. ತುಮಕೂರು ಮತ್ತು ದಾವಣಗೆರೆಯಲ್ಲಿ ಈ ಬಾರಿ ರೈತರ ಆತ್ಮಹತ್ಯೆಯ ಸಂಖ್ಯೆ ಹೆಚ್ಚಾಗಿರುವುದು ಈ ಭಾಗದ ರೈತರ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ದಾವಣಗೆರೆಯಲ್ಲಿ ಹೆಚ್ಚಾಗಿ ಆರಂಭದಲ್ಲಿ ಕೈಕೊಟ್ಟ ಮುಂಗಾರು ಮತ್ತು ಹಲವು ವರ್ಷಗಳಿಂದ ಕಾಡುತ್ತಿರುವ ಬರವೇ ಮುಖ್ಯ ಕಾರಣ ಎನ್ನಲಾಗಿದೆ.

ನೀರಿನ ಕೊರತೆಯಿಂದ ಸಾಲ ಮಾಡಿ ಬೋರ್ ಕೊರೆಸಿದರೂ ಅವು ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರು ಸಾವಿನ ಹಾದಿ ಹಿಡಿದಿದ್ದಾರೆ. ಈ ಬಾರಿಮೆಕ್ಕೆಜೋಳಕ್ಕೆ ಸೈನಿಕ ಹುಳುವಿನ ಕಾಟ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ವರ್ಷಾಂತ್ಯದ ವೇಳೆಗೆ ರೈತರ ಆತ್ಮಹತ್ಯೆಯ ಸಂಖ್ಯೆ ಮತ್ತಷ್ಟು ಏರಿಕೆಯಾದರೂ ಅಚ್ಚರಿ ಇಲ್ಲ.

click me!