
ನವದೆಹಲಿ[ಆ.14]: ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜನಪ್ರಿಯ ಯೋಜನೆಗಳ ಮೂಲಕ ಅಧಿಕಾರ ಉಳಿಸಿಕೊಳ್ಳುವ ಕಸರತ್ತು ಮುಂದುವರೆಸಿದ್ದಾರೆ.
ಇತ್ತೀಚೆಗಷ್ಟೇ ಮಹಿಳೆಯರಿಗೆ ಬಸ್ ಹಾಗೂ ಮೆಟ್ರೋಗಳಲ್ಲಿ ಉಚಿತ ಪ್ರಯಾಣ, ಜನಸಾಮಾನ್ಯರಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್, ಉಚಿತ ವೈಫೈ ಸೇವೆ ಘೋಷಿಸಿದ್ದ ಕೇಜ್ರಿವಾಲ್, ಈಗ ಆಟೋ ಚಾಲಕರನ್ನೂ ಸೆಳೆಯಲು ಮುಂದಾಗಿದ್ದು, ಆಟೋ ಚಾಲಕರಿಗೆ ವಿಧಿಸಲಾಗುತ್ತಿದ್ದ ವಿವಿಧ ಕರ ಹಾಗೂ ದಂಡಗಳಲ್ಲಿ ವಿನಾಯಿತಿ ಘೋಷಿಸಿದ್ದಾರೆ. ಆಟೋಗಳಿಗೆ ವಿಧಿಸುತ್ತಿದ್ದ 600 ರು. ಫಿಟ್ನೆಸ್ ಟೆಸ್ಟ್ ಶುಲ್ಕ ಹಾಗೂ 100 ರು. ಜಿಪಿಎಸ್ ಶುಲ್ಕ ಸಂಪೂರ್ಣವಾಗಿ ರದ್ದು ಮಾಡಲಾಗಿದೆ.
ರಿಕ್ಷಾ ನೋಂದಣಿ ಹಾಗೂ ಮರು ನೋಂದಣಿ ಶುಲ್ಕವನ್ನು 1000 ರು.ನಿಂದ 300 ರು.ಗೆ ಇಳಿಸಲಾಗಿದೆ. ಫಿಟ್ನೆಸ್ ಟೆಸ್ಟ್ ವಿಳಂಬವಾದರೆ 1000 ರು. ಹಾಗೂ ದಿನಕ್ಕೆ 50 ರು.ನಂತೆ ವಿಳಂಬ ಶುಲ್ಕ ಪಾವತಿ ಮಾಡಬೇಕಿತ್ತು. ಅದರೆ ಅದನ್ನು 300 ಹಾಗೂ 20 ರು.ಗೆ ಕಡಿತಗೊಳಿಸಲಾಗಿದೆ. ನೊಂದಣಿ ಪತ್ರದ ನಕಲು ಪ್ರತಿ ಹಾಗೂ ಮಾಲಿಕತ್ವ ಬದಲಾವಣೆಗೆ ಚಾಲ್ತಿಯಲ್ಲಿದ್ದ 500 ರು.ರು ಬದಲಿಗೆ 150 ರು. ನಿಗದಿ ಪಡಿಸಲಾಗಿದೆ. ಪರ್ಮಿಟ್ ನವೀಕರಣ ಶುಲ್ಕವನ್ನು 1000 ರು.ನಿಂದ 500 ರು.ಗೆ ಕಡಿತಗೊಳಿಸಲಾಗಿದೆ.
ಕೇಜ್ರಿ ಸರ್ಕಾರದ ಈ ನೀತಿಯಿಂದ ರಾಜಧಾನಿಯ 90 ಸಾವಿರ ಆಟೋ ಚಾಲಕರಿಗೆ ಉಪಯೋಗವಾಗಲಿದ್ದು, ದೆಹಲಿ ಅಟೋ ರಿಕ್ಷಾ ಸಂಘ ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.