ಏರುತ್ತಿರುವ ಸಾವಿನ ಸಂಖ್ಯೆಗೆ ಕಾರಣವೇನು..?

By Web Desk  |  First Published Dec 16, 2018, 2:15 PM IST

ಚಾಮರಾಜನಗರ ಪ್ರಸಾದ ಸೇವಿಸಿ ಆಸ್ಪತ್ರೆ ಸೇರಿದವರಲ್ಲಿ ಮೃತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದಕ್ಕೆ ಕಾರಣ ಆಸ್ಪತ್ರೆಯಲ್ಲಿರುವ ಸೇವೆಗಳ ಕೊರತೆಯಾಗಿದೆ. 


ಚಾಮರಾಜನಗರ :  ಹನೂರು ತಾಲೂಕು ಸುಳ್ವಾಡಿಯ ಮಾರಮ್ಮ ದೇವಸ್ಥಾನದಲ್ಲಿ ವಿಷಪೂರಿತ ಪ್ರಸಾದ ಸೇವಿಸಿ ಅಸ್ವಸ್ಥರಾದ ಭಕ್ತರಿಗೆ ತಕ್ಷಣಕ್ಕೆ ಸ್ಥಳೀಯ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದ್ದರೆ ಸಾವಿನ ಸಂಖ್ಯೆ 11ಕ್ಕೆ ಏರುತ್ತಿರಲಿಲ್ಲವೇನೋ?

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಸುಳ್ವಾಡಿ ಗುಡ್ಡಗಾಡಿನಿಂದ ಆವೃತವಾದ ಪ್ರದೇಶ. ಇಲ್ಲಿನ ಮಾರಮ್ಮ ದೇವಸ್ಥಾನದಲ್ಲಿ ಶುಕ್ರವಾರ ವಿಷಪೂರಿತ ಆಹಾರ ಸೇವಿಸಿ ನೂರಕ್ಕೂ ಅಧಿಕ ಮಂದಿ ಅಸ್ವಸ್ಥರಾದಾಗ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಆದರೆ, ವೆಂಟಿಲೇಟರ್‌ ಕೊರತೆಯಿಂದ ಯಾವೊಬ್ಬ ರೋಗಿಗೂ ಸರಿಯಾದ ಚಿಕಿತ್ಸೆ ನೀಡುವುದು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ರೋಗಿಗಳನ್ನು ಮೈಸೂರಿಗೆ ರವಾನಿಸಬೇಕಾಯಿತು.

Latest Videos

undefined

ಘಟನಾ ಸ್ಥಳದಿಂದ ಕೊಳ್ಳೇಗಾಲ ಆಸ್ಪತ್ರೆ 70 ಕಿ.ಮೀ. ದೂರದಲ್ಲಿದ್ದರೆ, ಮೈಸೂರಿಗೆ 130 ಕಿ.ಮೀ. ದೂರ ಕ್ರಮಿಸಬೇಕು. ಅಸ್ವಸ್ಥರಾದವರನ್ನು ತಕ್ಷಣ ಕೊಳ್ಳೇಗಾಲ ಆಸ್ಪತ್ರೆ ಹಾಗೂ ಕಾಮಗೆರೆಯ ಹೋಲಿಕ್ರಾಸ್‌ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ತಲಾ ಒಂದೊಂದು ವೆಂಟಿಲೇಟರ್‌ ಮಾತ್ರ ಇತ್ತು. 

ಜಿಲ್ಲಾ ಆಸ್ಪತ್ರೆ ಘಟನಾ ಸ್ಥಳದಿಂದ 100 ಕಿ.ಮೀ. ಅಂತರದಲ್ಲಿದ್ದರೂ ಅಲ್ಲಿನ ಅವ್ಯವಸ್ಥೆ, ವೆಂಟಿಲೇಟರ್‌ ಕೊರತೆಯನ್ನು ಮನಗಂಡೇ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರನ್ನು 130 ಕಿ.ಮೀ. ದೂರದ ಮೈಸೂರಿಗೆ ಕಳುಹಿಸಿಕೊಡಬೇಕಾಯಿತು. ಒಂದು ವೇಳೆ ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲೇ ಉತ್ತಮ ಸೌಲಭ್ಯಗಳಿದ್ದರೆ ಇಂಥ ಪ್ರಮೇಯವೇ ಬರುತ್ತಿರಲಿಲ್ಲ. 

ಸಾವಿನ ಸಂಖ್ಯೆಯೂ ಏರುತ್ತಿರಲಿಲ್ಲ ಎನ್ನುವ ಅಸಮಾಧಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿಮತ್ತು ಸಂಸದ ಆರ್‌.ಧ್ರುವನಾರಾಯಣ, ಶಾಸಕ ಆರ್‌.ನರೇಂದ್ರ ಕೂಡ ವೆಂಟಿಲೇಟರ್‌ ವ್ಯವಸ್ಥೆ ಇಲ್ಲದಿರುವುದೇ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ವರದಿ : ದೇವರಾಜು ಕಪ್ಪಸೋಗೆ

click me!