ಕಂಬಿ ಬೇಲಿಗೆ ಸಿಲುಕಿ ಸಲಗ ದಾರುಣ ಸಾವು

By Web DeskFirst Published Dec 16, 2018, 1:35 PM IST
Highlights

ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅಳವಡಿಸಲಾಗಿರುವ ರೈಲ್ವೆ ಕಂಬಿ ಬೇಲಿಗೆ ಸಿಲುಕಿ ಆನೆಯೊಂದು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ನಡೆದಿದೆ. 

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅಳವಡಿಸಲಾಗಿರುವ ರೈಲ್ವೆ ಕಂಬಿ ಬೇಲಿಗೆ ಸಿಲುಕಿ ಆನೆಯೊಂದು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ನಡೆದಿದೆ. 

ಸುಮಾರು 42 ವರ್ಷದ ಸಲಗ ಇತರೆ ಎರಡು ಆನೆಗಳೊಂದಿಗೆ ಉದ್ಯಾನದಿಂದ ಹೊರಕ್ಕೆ ಹೊರಟಿದ್ದವು. ಎರಡು ಆನೆಗಳನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಅಟ್ಟಿದ್ದರು. ಒಂದು ಆನೆ ನೀಲಗಿರಿ ತೋಪು ಸೇರಿತ್ತು. ಶನಿವಾರ ಮುಂಜಾನೆ ಉದ್ಯಾನ ಪ್ರವೇಶಿಸಲು ಈ ಸಲಗ ರೈಲ್ವೆ ಕಂಬಿ ಬೇಲಿಯನ್ನು ಏರಿದೆ. ಕೂಡಲೇ ಸಿಲುಕಿಕೊಂಡಿದೆ. ಘೀಳಿಡಲೂ ಆಗದೆ, ಉಸಿರಾಟದ ತೊಂದರೆಗಾಗಿ ಪ್ರಾಣ ಬಿಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೀರನಹೊಸಹಳ್ಳಿ ವಲಯಕ್ಕೆ ಸೇರಿದ ಆರ್‌ಎಫ್‌ಒ ವಸತಿ ಗೃಹದ ಹಿಂಭಾಗದ ತಡೆಗೋಡೆ ದಾಟಿ ಒಳ ಪ್ರವೇಶಿಸಲು ಆನೆ ಸಾಕಷ್ಟುಕಸರತ್ತು ನಡೆಸಿದೆ. ಆದರೆ, ರೈಲ್ವೆ ಕಂಬಿ ದಾಟಲಾಗದೆ ಸಿಲುಕಿಕೊಂಡು, ಉಸಿರಾಟದ ತೊಂದರೆಗೊಳಗಾಗಿ ಪ್ರಾಣ ಬಿಟ್ಟಿದೆ.

ಸುಮಾರು 42 ವರ್ಷದ ಈ ಸಲಗ ಇತರೆ ಎರಡು ಆನೆಗಳೊಂದಿಗೆ ಗುರುವಾರ ರಾತ್ರಿ ಉದ್ಯಾನದಿಂದ ಹೊರಟು ಕೋಣನಹೊಸಹಳ್ಳಿ, ಕೊಳುವಿಗೆ, ಮುದಗನೂರು ಬಳಿ ಅಡ್ಡಾಡುತ್ತಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಗಣೇಶ, ಬಲರಾಮ ಆನೆಗಳ ನೆರವಿನಿಂದ ಶುಕ್ರವಾರ ಬೆಳಗ್ಗೆ ಎರಡು ಕಾಡಾನೆಗಳನ್ನು ಕಾಡಿನ ಒಳಗೆ ಸೇರಿಸಿದ್ದರು.

ಆದರೆ, ಈ ಸಲಗ ಗಾಬರಿಗೊಂಡು ಗುಂಪಿನಿಂದ ಬೇರ್ಪಟ್ಟು ಕೋಣನಹೊಸಹಳ್ಳಿ ಬಳಿಯ ಕೂಟದ ಕಡದ ನೀಲಗಿರಿ ತೋಪಿನಲ್ಲಿ ಸೇರಿಕೊಂಡಿತ್ತು. ಎಷ್ಟೇ ಪ್ರಯತ್ನಪಟ್ಟರೂ ಸಾಕಾನೆಗಳಿಗೂ ಹೆದರದೆ ಸೆಡ್ಡು ಹೊಡೆದಿತ್ತು. ಕೊನೆಗೆ ರಾತ್ರಿ ವೇಳೆ ಕಾಡಿಗಟ್ಟಲು ಸಿಬ್ಬಂದಿ ಯತ್ನನಡೆಸಿದರೂ ಸಾಧ್ಯವಾಗಿರಲಿಲ್ಲ. ಸಾಮಾನ್ಯವಾಗಿ ಆನೆಗಳು ರಾತ್ರಿ ವೇಳೆ ಕಾಡಿಗೆ ಸೇರಿಕೊಳ್ಳುವುದು ವಾಡಿಕೆ. ಅದರಂತೆ ಈ ಸಲಗ ವೀರನಹೊಸಹಳ್ಳಿವರೆಗೆ ಬೇಲಿ ಅಂಚಿನಲ್ಲೇ ನಡೆದು ಬಂದು ಕೊನೆಗೆ ಮುಂಜಾನೆ ಉದ್ಯಾನ ಪ್ರವೇಶಿಸಲು ರೈಲ್ವೆ ಕಂಬಿ ಏರಿದೆ. ಆದರೆ ಕಂಬಿ ದಾಟಲು ಸಾಧ್ಯವಾಗದೇ ಸಿಕ್ಕಿಹಾಕಿಕೊಂಡು ಪ್ರಾಣ ಕಳೆದುಕೊಂಡಿದೆ. ಬೇಲಿಗೆ ಸಿಲುಕಿಕೊಂಡ ಆನೆ ಘೀಳಿಡಲೂ ಆಗದೆ ಮೃತಪಟ್ಟಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ನಾರಾಯಣಸ್ವಾಮಿ, ಎಸಿಎಫ್‌ ಪ್ರಸನ್ನಕುಮಾರ್‌, ಆರ್‌ಎಫ್‌ಒ ರವೀದ್ರ ಸೇರಿದಂತೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದಿಂದ ಆನೆಗೆ ಹಗ್ಗ ಕಟ್ಟಿಕೆಳಕ್ಕಿಳಿಸಿದರು. ನಾಗರಹೊಳೆ ಪಶುವೈದ್ಯ ಡಾ.ಮುಜೀಬ್‌ ರೆಹಮಾನ್‌ ಶವಪರೀಕ್ಷೆ ನಡೆಸಿದರು.

click me!