ಬದುಕಿದವನನ್ನೂ ಸಾಯಿಸಿದ ಅಧಿಕಾರಿಗಳು: ಸತ್ತವನ ಹೆಂಡತಿಗೆ ಆಸ್ತಿ ನೀಡಿದರು

By Internet DeskFirst Published Sep 28, 2016, 5:15 PM IST
Highlights

ಚಿತ್ರದುರ್ಗ (ಸೆ.28): ಆತ ಪಾಠ ಹೇಳುವ ಶಿಕ್ಷಕ.  ಇಡೀ ಹೋಬಳಿಯಲ್ಲಿ ಪ್ರತಿಯೊಬ್ಬರಿಗೂ ಪರಿಚಿತ ವ್ಯಕ್ತಿ. ಆದರೆ ಸರ್ಕಾರಿ ದಾಖಲೆಗಳಲ್ಲಿ ಇವರು ಸತ್ತು 3 ವರ್ಷಗಳಾಗಿವೆ. ಅಲ್ಲದೆ ಇವರ ಹೆಸರಿನಲ್ಲಿರೋ ಜಮೀನು ಕೂಡ ಬೇರೆಯೊಬ್ಬರ ಪಾಲಾಗಿದೆ. ಇವರು ತನ್ನ ಹೆಸರಿನ ಜಮೀನು ಉಳಿಸಿಕೊಳ್ಳಲು ಇದೀಗ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಅಂಜನಪ್ಪ ಅವರೇ ತನ್ನದಲ್ಲದ ತಪ್ಪಿಗೆ 1 ಎಕರೆ 20 ಗುಂಟೆ ಜಮೀನು ಕಳೆದುಕೊಂಡು ಕಂಗಲಾಗಿರುವವರು.

ಯಡವಟ್ಟು ಆಗಿರುವುದಾದರೂ ಏನು

ಅಷ್ಟಕ್ಕೂ ಇದು ಕಂದಾಯ ಇಲಾಖೆ ಸಿಬ್ಬಂದಿ ಮಾಡಿರುವ ಎಡವಟ್ಟು.  ಚಿತ್ರದುರ್ಗದ  ತುರುವನೂರಿನಲ್ಲಿ  ಶಿಕ್ಷಕನಾಗಿರುವ ಅಂಜನಪ್ಪ ಜಮೀನಿನ ಪಕ್ಕದಲ್ಲಿರೋ ಜಮೀನಿನ ಮಾಲೀಕನ ಹೆಸರು ಕೂಡ ಅಂಜನಪ್ಪ. ಆತ ಮೃತಪಟ್ಟು ಮೂರು ವರ್ಷಗಳಾಗಿವೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು, ದಾಖಲೆಗಳಲ್ಲಿ  ಶಿಕ್ಷಕ ಅಂಜನಪ್ಪ ಅವರು ಮೃತಪಟ್ಟಿದ್ದಾರೆಂದು ದಾಖಲಿಸಿ ಇವರ ಹೆಸರಿನಲ್ಲಿದ್ದ 1 ಎಕರೆ 20 ಗುಂಟೆ ಜಮೀನನ್ನು ಮೃತಪಟ್ಟಿರೋ ಅಂಜನಪ್ಪ ಪತ್ನಿ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಬೆಳೆ ನಷ್ಟದ ಪರಿಹಾರಕ್ಕೆ ತಾಲೂಕು ಕಚೇರಿಗೆ ತೆರಳಿದಾಗ ಈ ಎಡವಟ್ಟು ಬೆಳಕಿಗೆ ಬಂದಿದೆ.

ಒಮ್ಮೆ ಖಾತೆ ಬೇರೆಯರ ಹೆಸರಿಗೆ ಬದಲಾದರೆ ಅದನ್ನು ಪುನಃ ತಮ್ಮ ಹೆಸರಿಗೆ ಪಡೆಯಲು ನ್ಯಾಯಾಲಯದ ಮೂಲಕವೇ ಆದೇಶವಾಗಬೇಕು. ಆದರೆ ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗ ಮಾಡಿದ ಮಾಡಿದ ತಪ್ಪಿಗೆ ಶಿಕ್ಷಕ ಅಂಜನಪ್ಪ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವಂತಾಗಿದೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲವಂತೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿ ಆಂಜನಪ್ಪ ಹೆಸರಿಗೆ ಖಾತೆ ಮಾಡಿಸಿಕೊಡಬೇಕಾಗಿದೆ.

ವರದಿ: ಡಿ.ಕುಮಾರಸ್ವಾಮಿ, ಸುವರ್ಣ ನ್ಯೂಸ್

click me!