
ಶಿರಹಟ್ಟಿ(ನ.23): ತಾಲೂಕಿನ ಮಾಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಸಾಪುರ ಗ್ರಾಮದಲ್ಲಿ ಮೃತರಾದವರ ಶವಸಂಸ್ಕಾರಕ್ಕೆ ರುದ್ರಭೂಮಿಯಿಲ್ಲದೆ ರಸ್ತೆ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರ ಮಾಡುವ ಅನಿವಾರ್ಯತೆ ಎದುರಾಗಿದೆ. 1200 ಜನಸಂಖ್ಯೆ ಹೊಂದಿದ ಪರಸಾಪುರ ಗ್ರಾಮದಲ್ಲಿ ಸ್ವಂತ ಜಮೀನು ಇದ್ದವರು ತಮ್ಮ ಹೊಲದಲ್ಲಿ ಶವಸಂಸ್ಕಾರ ಮಾಡಿಕೊಳ್ಳುತ್ತಿದ್ದು, ಹೊಲ ಇಲ್ಲದವರಿಗೆ ಶವ ಹೂಳಲು ಜಾಗವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರೆಲ್ಲರೂ ಸೇರಿ ಲಿಖಿತ ಮನವಿ ಸಲ್ಲಿಸಿದರು ಕ್ರಮ ಕೈಗೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಅಸಮಾಧಾನ: ಮೇ 28.2011 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಸಾವಯವ ಕೃಷಿಕ ರೈತನ ಮನೆಗೆ ಭೇಟಿ ನೀಡಿದಾಗ ಪರಸಾಪುರ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಭೂಮಿ ಒದಗಿಸುವಂತೆ ಗ್ರಾಮದ ಹಿರಿಯರೆಲ್ಲರೂ ಸೇರಿ ಮನವಿ ಸಲ್ಲಿಸಿದ್ದರು. ನಾಲ್ಕಾರು ತಿಂಗಳ ಬಳಿಕ ಮನವಿಗೆ ಸ್ಪಂದಿಸಿ ಅಧಿಕಾರಿಗಳಿಗೆ ರುದ್ರಭೂಮಿ ಕಲ್ಪಿಸಿಕೊಡುವಂತೆ ಆದೇಶ ಕಳುಹಿಸಿದ್ದರು. ಆದರೆ, ಅಂದಿನ ಕಂದಾಯ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಆದೇಶಕ್ಕೂ ಬೆಲೆ ನೀಡದೇ ಆದೇಶ ಪ್ರತಿಯನ್ನು ಕಸದ ಬುಟ್ಟಿಗೆ ಹಾಕಿದ್ದು, ಗ್ರಾಮಸ್ಥರ ಗೋಳಿಗೆ ಸ್ಪಂದಿಸಿಲ್ಲ ಎಂದು ತಾಪಂ ಸದಸ್ಯ ಮಂಜುನಾಥ ಜೋಗಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ನ.8.2010 ರಂದು ಪರಸಾಪುರ ಗ್ರಾಮದಲ್ಲಿಯೇ ಜರುಗಿದ ಜನಸ್ಪಂದನ ಸಭೆಯಲ್ಲಿಯೂ ಸರ್ಕಾರ ರೈತರು ನೀಡುವ ಭೂಮಿಗೆ ಯೋಗ್ಯವಾದ ಬೆಲೆ ನೀಡಿದರೆ ರುದ್ರಭೂಮಿಗೆ ಜಮೀನು ನೀಡುವುದಾಗಿ ಮತ್ತೊಮ್ಮೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದರಿಂದ ಇಂದಿಗೂ ಗ್ರಾಮದ ರಸ್ತೆ ಪಕ್ಕದಲ್ಲಿಯೇ ಶವಸಂಸ್ಕಾರ ಕಾರ್ಯಗಳು ನಡೆಯುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಜಮೀನು ನೀಡಲಿ: ಮಳೆಗಾಲದಲ್ಲಿ ಶವಸಂಸ್ಕಾರ ಕಾರ್ಯ ಮಾಡುವುದು ತೀರಾ ತೊಂದರೆಯಾಗಿದೆ.ಕೆಲವೊಂದು ಗ್ರಾಮಗಳಲ್ಲಂತೂ ಊರಿಗೆ ಹೊಂದಿಕೊಂಡು ರಸ್ತೆ ಪಕ್ಕದಲ್ಲಿಯೇ ಈ ಕಾರ್ಯಗಳು ನಡೆಯುತ್ತಿದ್ದು, ಚಿಕ್ಕಮಕ್ಕಳಲ್ಲಿ ಭಯದ ವಾತಾವರಣ ಕೂಡ ನಿರ್ಮಾಣವಾಗಿದೆ. ಬಸ್‌ನಲ್ಲಿ ಹೋಗುವಾಗ ಇದನ್ನು ಕಣ್ಣಾರೆ ಕಂಡ ಮಕ್ಕಳು ಕೆಲವು ದಿನಗಳವರೆಗೆ ಮನೆಯಿಂದ ಹೊರಬರುತ್ತಿಲ್ಲ. ಮಕ್ಕಳಲ್ಲಿನ ಈ ಭಯದ ವಾತಾವರಣ ದೂರ ಮಾಡಲು ಗ್ರಾಮಸ್ಥರೆಲ್ಲರೂ ಸೇರಿ ಸರ್ಕಾರ ನೀಡುವ ಯೋಗ್ಯ ದರಕ್ಕೆ ಜಮೀನು ನೀಡಲು ಮುಂದಾಗಬೇಕಾಗಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ವರದಿ :ಮಹದೇವಪ್ಪ ಎಂ. ಸ್ವಾಮಿ - ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.