ಕುದುರೆ ಮೇಲೆ ಮೆರವಣಿಗೆ: ದಲಿತ ವರನಿಗೆ ಮೇಲ್ಜಾತಿಯವರಿಂದ ಹಲ್ಲೆ!

By Web DeskFirst Published Dec 17, 2018, 11:41 AM IST
Highlights

ಕುದುರೆ ಮೇಲೆ ಮೆರವಣಿಗೆ ಹೊರಟ ದಲಿತ ವರನನ್ನು ಮೇಲ್ಜಾತಿಯವರು ಹುಗ್ಗಾಮುಗ್ಗ ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ,

ಆಗ್ರಾ[ಡಿ,17]: ವಿವಾಹದ ದಿನದಂದು ಸಂಪ್ರದಾಯದ ಪ್ರಕಾರ ಕುದುರೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ದಲಿತ ವರನ ಮೇಲೆ ದಾಳಿ ನಡೆಸಿ, ಆತನನ್ನು ಕುದುರೆ ಮೇಲಿಂದ ಕೆಳಗಿಳಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಲ್ಲದೆ, ಠಾಕೂರ್‌ ಸಮುದಾಯದವರು ತಮ್ಮ ಮೇಲೆ ಕಲ್ಲು ತೂರಾಟ ಮತ್ತು ಜಾತಿನಿಂದನೆ ಮಾಡಿದ್ದಾರೆ ಎಂದು ವರನ ಕಡೆಯವರು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. 

ಇಲ್ಲಿನ ಕಾಸರ್‌ಗಂಜ್‌ ಜಿಲ್ಲೆಯ ಅಸ್ರೌಲಿ ಗ್ರಾಮದಲ್ಲಿ ದಾಂಪತ್ಯಕ್ಕೆ ಕಾಲಿಡಬೇಕಾದ ನವ ವರ ಕಲ್ಯಾಣ ಮಂಟಪಕ್ಕೆ ಕುದುರೆ ಮೆರವಣಿಗೆಯಲ್ಲಿ ಸಾಗುತ್ತಿದ್ದ. ಈ ವೇಳೆ ಬಂದ ಇಟಾ ಜಿಲ್ಲೆಯ ಠಾಕೂರ್‌ ಸಮುದಾಯದವರು, ವರನ ಮೇಲೆ ಮನಸ್ಸೋ ಇಚ್ಚೆ ದಾಳಿ ಮಾಡಿ, ಕುದುರೆ ಮೇಲಿಂದ ಕೆಳಗಿಳಿಸಿ, ಕಲ್ಯಾಣ ಮಂಟಪಕ್ಕೆ ನಡೆಸಿಕೊಂಡೇ ಕರೆದೋಗಿದ್ದಾರೆ. ಅಲ್ಲದೆ, ಮೆರವಣಿಗೆಯಲ್ಲಿ ಭಾಗಿಯಾಗಿದ್ದ ದಲಿತರ ಮೇಲೆ ಕಲ್ಲು ತೂರಾಟ ಹಾಗೂ ಜಾತಿನಿಂದನೆ ಸಹ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ, ಅಂದು ಅಸ್ರೌಲಿ ಗ್ರಾಮದಲ್ಲಿ ದಲಿತ ಮತ್ತು ಠಾಕೂರ್‌ ಸಮುದಾಯದ ಎರಡು ವಿವಾಹಗಳು ನಿಶ್ಚಯವಾಗಿದ್ದವು. ಹಾಗಾಗಿ, ಮೊದಲಿಗೆ ಠಾಕೂರ್‌ ಸಮುದಾಯದವರು ವರನನ್ನು ಕುದುರೆ ಮೇಲೆ ಮೆರವಣಿಗೆ ಮಾಡಿದ್ದರು. ಅದೇ ರೀತಿ, ದಲಿತರೂ ಸಹ ವರನನ್ನು ಕುದುರೆ ಮೇಲೆ ಮೆರವಣಿಗೆ ಮಾಡಿದ್ದಕ್ಕೆ, ಈ ಗಲಾಟೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ತಮ್ಮನ್ನು ಸುಳ್ಳು ಕೇಸ್‌ನಲ್ಲಿ ಸಿಲುಕಿಸುವುದಾಗಿ ದಲಿತರು ತಮ್ಮ ಮೇಲೆ ಬೆದರಿಕೆ ಹಾಕಿದ್ದರು ಎಂದು ಠಾಕೂರ್‌ ಸಮುದಾಯದವರು ಪ್ರತಿ ದೂರು ಸಲ್ಲಿಸಿದ್ದಾರೆ.

click me!