ನೋಟು ನಿಷೇಧ: ಹು-ಧಾ ಪಾಲಿಕೆಗೆ ತೆರಿಗೆ ಮಹೋತ್ಸವ

By Suvarna Web DeskFirst Published Nov 15, 2016, 10:37 AM IST
Highlights

ಹುಬ್ಬಳ್ಳಿ-ಧಾರವಾಡ ಒನ್ ಕೇಂದ್ರದಲ್ಲಿ ರೂ.2,32,20,682 ಹಾಗೂ ವಿಶೇಷವಾಗಿ ತೆರೆಯಲಾಗಿದ್ದ ಕೌಂಟರ್’ಗಳಲ್ಲಿ ರೂ.94,33,593 ಕರ ಸಂಗ್ರಹವಾಗಿದೆ.

ಹುಬ್ಬಳ್ಳಿ (ನ.15): ಪಾಲಿಕೆ ಅಧಿಕಾರಿಗಳು ಆಸ್ತಿ ತೆರಿಗೆ ಸೇರಿದಂತೆ ಇತರೆ ತೆರಿಗೆ ಕಟ್ಟಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಬೆಲೆಕೊಡದ ತೆರಿಗೆದಾರರು ಇದೀಗ ಮೋದಿ ಕೊಟ್ಟ ಶಾಕ್’ಗೆ ಓಡೋಡಿ ಬಂದು ತೆರಿಗೆ ಪಾವತಿಗೆ ಮುಂದಾಗಿದ್ದಾರೆ.

ಹಳೆಯ ನೋಟುಗಳನ್ನು ರದ್ದು ಮಾಡಿದ ಬೆನ್ನಲ್ಲೆ ಎರಡೇ ದಿನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ಕರ ವಸೂಲಿಯಾಗಿದೆ.

ಸಾರ್ವಜನಿಕರು ಕೋಟ್ಯಾಂತರ ರೂಪಾಯಿಗಳ ಕರವನ್ನು ಪಾವತಿ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಮಹಾನಗರ ಪಾಲಿಕೆ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹಳೇಯ ಐನೂರು ಮತ್ತು ಸಾವಿರ ರೂಪಾಯಿ ನೋಟುಗಳಲ್ಲಿ ತೆರಿಗೆ ಕಟ್ಟಬಹುದು ಎಂದು ಹೇಳಿದ್ದರು.

ಹೀಗಾಗಿ ತೆರಿಗೆ ಬಾಕಿಯಿರುವವರು ಎರಡೇ ದಿನಗಳಲ್ಲಿ ನಾಲ್ಕು ಕೋಟಿ ರೂಪಾಯಿಗಳ ತೆರಿಗೆ ಕಟ್ಟಿದ್ದಾರೆ. ಹುಬ್ಬಳ್ಳಿ-ಧಾರವಾಡ ಒನ್ ಕೇಂದ್ರದಲ್ಲಿ ರೂ.2,32,20,682 ಹಾಗೂ ವಿಶೇಷವಾಗಿ ತೆರೆಯಲಾಗಿದ್ದ ಕೌಂಟರ್’ಗಳಲ್ಲಿ ರೂ.94,33,593 ಕರ ಸಂಗ್ರಹವಾಗಿದೆ.

ಇದರಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬಾಕಿ ಉಳಿಸಿಕೊಂಡಿದ್ದ ಕರವನ್ನು ಸಾರ್ವಜನಿಕರು ಮಹಾನಗರ ಪಾಲಿಕೆಗೆ ಪಾವತಿಸಿದ್ದಾರೆ‌. ಕರ ತುಂಬುವ ಕುರಿತಂತೆ ವಷ೯ವಿಡಿ ಜಾಗೃತಿ ಮೂಡಿಸಿದರೂ ತಲೆ ಕೆಡಿಸಿಕೊಳ್ಳದ ಸಾರ್ವಜನಿಕರು ಕೊನೆಗೂ ಹಳೆಯ ನೋಟುಗಳಲ್ಲಿ ಬಾಕಿ ಉಳಿಸಿಕೊಂಡಿದ್ದ ಕರವನ್ನು ತುಂಬಿದ್ದಾರೆ‌‌.

ಹಳೆಯ ನೋಟುಗಳಲ್ಲಿ ಕರವನ್ನು ತುಂಬಲು ನಿನ್ನೆಯವರೆಗೆ ಅವಕಾಶ ನೀಡಲಾಗಿತ್ತು ಆದರೆ ನವೆಂಬರ್ 24ರವರೆಗೆ ಅವಧಿಯನ್ನು ಪಾಲಿಕೆ ಆಯುಕ್ತರು ವಿಸ್ತರಣೆ ಮಾಡಿದ್ದಾರೆ‌.

(ಸಾಂದರ್ಭಿಕ ಚಿತ್ರ)

click me!