
ತಿರುವನಂತಪುರ/ಹೋಶಂಗಾಬಾದ್: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇತ್ತೀಚಿನ ಉತ್ತರ ಪ್ರದೇಶ ಚುನಾವಣೆಯಲ್ಲಿ ಪಕ್ಷ ಅನುಭವಿಸಿದ ವೈಫಲ್ಯ ದುಬಾರಿ ಯಾಗುವ ಸಾಧ್ಯತೆ ಇದೆ. ರಾಹುಲ್ ವಿರುದ್ಧ ಕಾಂಗ್ರೆಸ್‌ನಲ್ಲಿ ಈಗ ಒಬ್ಬೊಬ್ಬರೇ ದನಿಯೆತ್ತ ತೊಡಗಿದ್ದಾರೆ. ‘ಪಕ್ಷವನ್ನು ಸೂಕ್ತವಾಗಿ ಮುನ್ನಡೆಸಿಕೊಂಡು ಹೋಗಿ. ಇದರಲ್ಲಿ ಆಸಕ್ತಿ ಇಲ್ಲ ಎಂದಾದರೆ ಹುದ್ದೆಯಿಂದ ಕೆಳಗಿಳಿಯಿರಿ' ಎಂದು ಕೇರಳ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಆರ್. ಮಹೇಶ್ ಮಂಗಳವಾರ ಫೇಸ್'ಬುಕ್'ನಲ್ಲಿ ಆಗ್ರಹಿಸಿದ್ದಾರೆ.
‘ನಿಮ್ಮ ಕಣ್ಣು ತೆರೆಯಿರಿ. ಪಕ್ಷದ ಮೂಲ ಬೇರನ್ನು ಒಮ್ಮೆ ಗಮನಿಸಿ. ಒಮ್ಮೆ ದೇಶವ್ಯಾಪಿಯಾಗಿದ್ದ ಬೇರುಗಳು ಸಡಿಲವಾಗತೊಡಗಿವೆ' ಎಂದು ಮಹೇಶ್ ಅವರು ರಾಹುಲ್'ಗೆ ಬುದ್ಧಿಮಾತು ಹೇಳಿದ್ದಾರೆ.
ಇನ್ನು ಕಾಂಗ್ರೆಸ್'ನಲ್ಲಿ ಇಷ್ಟೆಲ್ಲ ಆಗುತ್ತಿದ್ದರೂ ಮೌನ ತಾಳಿರುವ ಕೇರಳ ಮೂಲದ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ. ಆ್ಯಂಟನಿ ಅವರನ್ನು ಮಹೇಶ್ ಅವರು ‘ಮೌನಿ ಬಾಬಾ' ಎಂದು ಮೂದಲಿಸಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ದುರ್ಬಲವಾಗಿದೆ. ಆದರೂ ನಾಯಕರು ಇದನ್ನು ನೋಡಿಕೊಂಡು ಸುಮ್ಮನಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಗಿನ್ನೆಸ್ ದಾಖಲೆಗೆ ರಾಹುಲ್ ಗಾಂಧಿ ಹೆಸರು ಶಿಫಾರಸು
ಹೋಶಂಗಾಬಾದ್: ಅತಿ ಹೆಚ್ಚು ಚುನಾವಣೆಗಳಲ್ಲಿ ಸೋಲು ಅನುಭವಿಸಿದ ಕಾರಣಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೆಸರನ್ನು ಗಿನ್ನೆಸ್ ದಾಖಲೆ ಪುಟದಲ್ಲಿ ಸೇರ್ಪಡೆ ಮಾಡಬೇಕು ಎಂದು ಮಧ್ಯಪ್ರದೇಶದ ಹೋಶಂಗಾಬಾದ್ ವಿದ್ಯಾರ್ಥಿಯೊಬ್ಬ ಗಿನ್ನೆಸ್ ವರ್ಲ್ಡ್'ರೆಕಾರ್ಡ್ ಅಧಿಕಾರಿಗಳಿಗೆ ಕೋರಿದ್ದಾನೆ. ಒಟ್ಟು 27 ಚುನಾವಣೆಗಳಲ್ಲಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ರಾಹುಲ್ ಹೆಸರನ್ನು ದಾಖಲೆಗೆ ಪರಿಗಣಿಸಬೇಕು ಎಂದು ಎಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಅರ್ಜಿಯಲ್ಲಿ ನಮೂದಿಸಿದ್ದಾನೆ. ಜತೆಗೆ ನೋಂದಣಿ ಶುಲ್ಕವನ್ನೂ ಪಾವತಿಸಿದ್ದಾನೆ. ಅರ್ಜಿ ಸ್ವೀಕಾರಗೊಂಡಿರುವುದನ್ನು ಗಿನ್ನೆಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ರಾಹುಲ್ ಹೆಸರು ಪರಿಗಣನೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.