ಉಪಸಮರದಲ್ಲಿ ಮೈತ್ರಿ ಇಲ್ಲ, ಕಾಂಗ್ರೆಸ್‌ ಏಕಾಂಗಿ ಸ್ಪರ್ಧೆ: ದಿನೇಶ್‌

Published : Sep 15, 2019, 08:43 AM IST
ಉಪಸಮರದಲ್ಲಿ ಮೈತ್ರಿ ಇಲ್ಲ, ಕಾಂಗ್ರೆಸ್‌ ಏಕಾಂಗಿ ಸ್ಪರ್ಧೆ: ದಿನೇಶ್‌

ಸಾರಾಂಶ

ಉಪಸಮರದಲ್ಲಿ ಕಾಂಗ್ರೆಸ್‌ ಏಕಾಂಗಿ ಸ್ಪರ್ಧೆ: ದಿನೇಶ್‌| ಬಿಜೆಪಿಯ ಬಣ್ಣ ಬಯಲು ಮಾಡುತ್ತೇವೆ| ರಾಜ್ಯ, ಕೇಂದ್ರ ಸರ್ಕಾರದ ವೈಫಲ್ಯ ಮುಂದಿಟ್ಟು ಪ್ರಚಾರ ಮಾಡಲು ನಿರ್ಧಾರ

ಬೆಂಗಳೂರು[ಸೆ.15]: ಅನರ್ಹ ಶಾಸಕರ ಕ್ಷೇತ್ರಗಳಿಗೆ ಶೀಘ್ರವೇ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅಧಿಕೃತವಾಗಿ ಘೋಷಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ನಡೆಯಲಿರುವ ಎಲ್ಲಾ ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇವೆ. ಚುನಾವಣೆಗೆ ಎಲ್ಲಾ ರೀತಿಯಲ್ಲೂ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಮೂಲಕ ಬಿಜೆಪಿಯ ಬಣ್ಣ ಬಯಲು ಮಾಡುತ್ತೇವೆ ಎಂದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶಗಳು ಹೆಚ್ಚಿವೆ. ಬಿಜೆಪಿ ಸರ್ಕಾರ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಕ್ರಮಗಳಲ್ಲಿ ವಿಫಲವಾಗಿದೆ. ಕೇಂದ್ರ ಸರ್ಕಾರವೂ ರಾಜ್ಯವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ವಿವಿಧ ಕಾಮಗಾರಿಗಳ ಹಣವನ್ನು ಕಡಿತಗೊಳಿಸಿದ್ದಾರೆ. ಈ ಸರ್ಕಾರ ಇದೆಯೋ ಅಥವಾ ಇಲ್ಲವೋ ಎಂಬ ಭಾವನೆ ಜನರಲ್ಲಿ ಮೂಡಿದೆ. ಈ ಬಗ್ಗೆ ಜನಾಭಿಪ್ರಾಯ ರೂಪಿಸುವ ಕೆಲಸ ಮಾಡುತ್ತೇವೆ ಎಂದರು.

ಶನಿವಾರ ಚಿಕ್ಕಬಳ್ಳಾಪುರ, ಹುಣಸೂರು, ಕೆ.ಆರ್‌. ಪೇಟೆ, ರಾಣೆಬೆನ್ನೂರು, ಮಸ್ಕಿ, ಹಿರೇಕೆರೂರು ಕ್ಷೇತ್ರಗಳ ಸಭೆ ನಡೆಸಲಾಗಿದೆ. ಸೆ.18ರಂದು ಗೋಕಾಕ್‌, ಅಥಣಿ, ಕಾಗವಾಡ, ಯಲ್ಲಾಪುರ, ವಿಜಯನಗರ ಕ್ಷೇತ್ರಗಳ ಮುಖಂಡರೊಂದಿಗೆ ಸಭೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಉಪ ಚುನಾವಣೆಯನ್ನು ನಿರ್ಲಕ್ಷ್ಯ ಮಾಡಲು ಅವಕಾಶ ನೀಡುವುದಿಲ್ಲ. ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು ಎಂದು ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರವನ್ನು ಪಾಲಿಸಲಾಗುವುದು ಎಂದು ಹೇಳಿದರು.

21ಕ್ಕೆ ಹೊಸಕೋಟೆಯಲ್ಲಿ ಬೃಹತ್‌ ಸಮಾವೇಶ

ಉಪ ಚುನಾವಣೆ ರಣಕಹಳೆ ಮೊಳಗಿಸಲು ಸೆ.21ರಂದು ಹೊಸಕೋಟೆ ಕ್ಷೇತ್ರದಲ್ಲಿ ಕಾರ್ಯಕರ್ತರ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದ ಮೂಲಕ ಉಪ ಚುನಾವಣೆ ಪ್ರಚಾರಕ್ಕೆ ಅದ್ಧೂರಿ ಚಾಲನೆ ನೀಡಲು ಕಾಂಗ್ರೆಸ್‌ ನಿರ್ಧರಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ದಿನೇಶ್‌ ಗುಂಡೂರಾವ್‌, ಸೆ.21ರಂದು ಹೊಸಕೋಟೆಯಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಂಡಿದ್ದೇವೆ. ಬಳಿಕ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯಕರ್ತರ ಸಮಾವೇಶಗಳನ್ನು ನಡೆಸಲಾಗುವುದು. ಈ ವೇಳೆ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯದ ಆಧಾರದ ಮೇಲೆ ಸೂಕ್ತ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿ ಪಕ್ಷ ಗೆಲುವು ಸಾಧಿಸುವಂತೆ ಮಾಡಲಾಗುವುದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ