ಉಪಚುನಾವಣೆಯಲ್ಲಿ 13 ಸ್ಥಾನದಲ್ಲಿ ಗೆಲುವು : ಕಾಂಗ್ರೆಸ್‌ ಗುರಿ

By Kannadaprabha NewsFirst Published Sep 15, 2019, 8:28 AM IST
Highlights

ಉಪ ಚುನಾವಣೆಯಲ್ಲಿ ಕಾಂಗ್ರೆಸ್ 13ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿದೆ. ಅನರ್ಹರಾದ 17 ಕ್ಷೇತ್ರಗಳಿಗೆ ಶೀಘ್ರ ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸಿಗರು ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ. 

ಬೆಂಗಳೂರು (ಸೆ.15):  ಕಾಂಗ್ರೆಸ್‌-ಜೆಡಿಎಸ್‌ ಶಾಸಕರ ಅನರ್ಹತೆಯಿಂದ ತೆರುವಾಗಿರುವ 17 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್‌ ಪಕ್ಷವು ಭರ್ಜರಿಯಾಗಿ ಸಿದ್ಧತೆ ಆರಂಭಿಸಿದೆ. ಪಕ್ಷ ಗೆಲುವು ಸಾಧಿಸಿದ್ದ 13 ಕ್ಷೇತ್ರಗಳನ್ನು ಭದ್ರಪಡಿಸಿಕೊಂಡು ಹೆಚ್ಚುವರಿ ಸ್ಥಾನಗಳನ್ನೂ ಗೆಲ್ಲುವ ನಿಟ್ಟಿನಲ್ಲಿ ಚುನಾವಣಾ ರಣತಂತ್ರ ರೂಪಿಸುವ ಬಗ್ಗೆ ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸರಣಿ ಸಭೆ ನಡೆಸಿತು.

ಶನಿವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 8 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳು ಹಾಗೂ ಗೆಲ್ಲುವ ಅವಕಾಶಗಳನ್ನು ಕೂಲಂಕುಷವಾಗಿ ಚರ್ಚಿಸಲಾಯಿತು.

ಸತತ ಎರಡನೇ ಬಾರಿಗೂ ಅನರ್ಹ ಶಾಸಕರ ಅರ್ಜಿ ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಹೀಗಾಗಿ ಕಾಂಗ್ರೆಸ್‌ ವತಿಯಿಂದ 17 ಕ್ಷೇತ್ರಗಳಲ್ಲೂ ಚುನಾವಣೆಗೆ ತ್ವರಿತ ಸಿದ್ಧತೆ ಮಾಡಿಕೊಳ್ಳಬೇಕು. ಅಭ್ಯರ್ಥಿಗಳ ಹೆಸರು ಸೂಚಿಸಲು ನೇಮಿಸಿದ್ದ ವೀಕ್ಷಕರು ಈಗಾಗಲೇ ವರದಿ ಮಂಡಿಸಿ ಪ್ರತಿ ಕ್ಷೇತ್ರಕ್ಕೂ 3-4 ಮಂದಿ ಸಂಭಾವ್ಯರ ಪಟ್ಟಿಸಿದ್ಧಪಡಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಒಂದು ಹಂತದ ಕಾರ್ಯಕರ್ತರ ಸಮಾವೇಶ ನಡೆಸಿ ಬಳಿಕ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲಾಗುವುದು ಎಂದು ಸಭೆಯಲ್ಲಿ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದರು ಎಂದು ತಿಳಿದುಬಂದಿದೆ.

ಪ್ರಸ್ತುತ 13 ಕಾಂಗ್ರೆಸ್‌ ಶಾಸಕರ ಕ್ಷೇತ್ರ ಸೇರಿ ರಾಣೆಬೆನ್ನೂರಿನ ಆರ್‌. ಶಂಕರ್‌ ಕ್ಷೇತ್ರವೂ ಕಾಂಗ್ರೆಸ್‌ ಕ್ಷೇತ್ರವಾಗಿಯೇ ಪರಿಗಣಿತವಾಗಿದೆ. ಉಳಿದಂತೆ ಜೆಡಿಎಸ್‌ ಅಭ್ಯರ್ಥಿಗಳು ಗೆದ್ದಿದ್ದ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಸಾಕಷ್ಟುಅವಕಾಶಗಳಿವೆ. ಉಪ ಚುನಾವಣೆಯಲ್ಲಿ ವಿಫಲವಾದರೆ ನಮ್ಮ ಭದ್ರ ನೆಲೆ ಬಿಟ್ಟುಕೊಟ್ಟಂತಾಗಲಿದೆ. ಜತೆಗೆ ಪಕ್ಷದ ಸಂಘಟನೆಗೂ ಇದರಿಂದ ತೀವ್ರ ಪೆಟ್ಟು ಬೀಳಲಿದೆ. ಹೀಗಾಗಿ ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಉಪಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸೆ.21ರಂದು ಹೊಸಕೋಟೆ ಕ್ಷೇತ್ರದಿಂದ ಕಾರ್ಯಕರ್ತರ ಸಮಾವೇಶ ಶುರವಾಗಲಿದೆ. ಹೀಗಾಗಿ ಎಲ್ಲಾ ಕ್ಷೇತ್ರಗಳ ಮುಖಂಡರೂ ಚುನಾವಣೆಗೆ ಸಿದ್ಧವಾಗಬೇಕು ಎಂದು ಸೂಚನೆ ನೀಡಿದರು ಎಂದು ತಿಳಿದುಬಂದಿದೆ.

ಸಂಭಾವ್ಯರ ಬಗ್ಗೆ ಚರ್ಚೆ:

ಶನಿವಾರ ನಡೆದ ಸಭೆಯಲ್ಲಿ ಚಿಕ್ಕಬಳ್ಳಾಪುರ, ಹೊಸಕೋಟೆ, ಕೆ.ಆರ್‌.ಪೇಟೆ, ರಾಣೆಬೆನ್ನೂರು, ಹಿರೇಕೆರೂರು ಸೇರಿದಂತೆ ಆರು ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಬಗ್ಗೆ ಮಾಜಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ ಸೇರಿದಂತೆ ಹಲವು ನಾಯಕರೊಂದಿಗೆ ದಿನೇಶ್‌ ಗುಂಡೂರಾವ್‌ ಹಾಗೂ ಎಚ್‌.ಕೆ. ಪಾಟೀಲ್‌ ಚರ್ಚಿಸಿದರು. ಈ ವೇಳೆ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್‌, ಅಂಜಿನಪ್ಪ, ನವೀನ್‌ ಕಿರಣ್‌ ಹಾಗೂ ಜಗದೀಶ್‌ ರೆಡ್ಡಿ ಅವರ ಹೆಸರು ಪ್ರಸ್ತಾಪವಾಗಿದೆ. ಮುಂದಿನ ಸಭೆಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆಗೆ ತೀರ್ಮಾನ ಮಾಡಲಾಗುವುದು ಎಂದು ತಿಳಿದುಬಂದಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎನ್‌.ಎಚ್‌. ಶಿವಶಂಕರರೆಡ್ಡಿ, ಚಿಕ್ಕಬಳ್ಳಾಪುರ ಅಭ್ಯರ್ಥಿ ಆಯ್ಕೆ ಬಗ್ಗೆ ಸಲಹೆ ನೀಡಿದ್ದಾರೆ. ಪಕ್ಷ ಸಂಘಟನೆಯ ಬಗ್ಗೆಯೂ ಸಲಹೆ ನೀಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ನಮ್ಮ ಹಿರಿಯ ನಾಯಕರು ಸೂಚಿಸಿದ್ದಾರೆ. ನಮ್ಮ ಅಭಿಪ್ರಾಯವನ್ನೂ ನಾವು ಗಮನಕ್ಕೆ ತಂದಿದ್ದೇವೆ. ಗೆಲ್ಲುವಂತಹ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

ಹಿರೇಕೆರೂರು ಕ್ಷೇತ್ರದಲ್ಲೂ ಕಾಂಗ್ರೆಸ್‌ನಿಂದ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ಹಿರೇಕೆರೂರು ಕ್ಷೇತ್ರದಲ್ಲಿ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ಖುದ್ದು ನಾವೇ ಕ್ಷೇತ್ರಕ್ಕೆ ಹೋಗಿ ಮುಖಂಡರ ಅಭಿಪ್ರಾಯ ಪಡೆದು ವರದಿ ಮಂಡಿಸಿದ್ದೇವೆ. ಪಕ್ಷದ್ರೋಹದ ಕೆಲಸ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಬೇಕಿದೆ. ಹೀಗಾಗಿ ಪಕ್ಷಕ್ಕೆ ದ್ರೋಹ ಮಾಡಿದ ಬಿ.ಸಿ.ಪಾಟೀಲ್‌ ವಿರುದ್ಧ ಪ್ರಬಲ ಅಭ್ಯರ್ಥಿ ಹಾಕಬೇಕು. ಲಭ್ಯವಿರುವ ಮೂರ್ನಾಲ್ಕು ಆಕಾಂಕ್ಷಿಗಳಲ್ಲಿ ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಲಾಗುವುದು ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ಮಾಹಿತಿ ನೀಡಿದರು.

ಇದೇ ವೇಳೆ ಕೆ.ಆರ್‌. ಪೇಟೆ ಉಪ ಚುನಾವಣೆ ಬಗ್ಗೆಯೂ ಚರ್ಚೆ ನಡೆದಿದೆ. ಚರ್ಚೆಯಲ್ಲಿ ಚಂದ್ರಶೇಖರ್‌, ಪ್ರಕಾಶ್‌, ಕಿಕ್ಕೇರಿ ಸುರೇಶ್‌ ಹಾಗೂ ಅಂಬರೀಷ್‌ ಎಂಬುವವರ ಹೆಸರುಗಳು ಬಂದಿವೆ. ನಮ್ಮ ಅಭಿಪ್ರಾಯಗಳನ್ನು ನಾವು ಮುಂದಿಟ್ಟಿದ್ದೇವೆ. ಶೀಘ್ರದಲ್ಲಿಯೇ ಕಾರ್ಯಕರ್ತರ ಸಮಾವೇಶ ಮಾಡುತ್ತೇವೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಒಮ್ಮತದ ಅಭ್ಯರ್ಥಿ ಹಾಕುತ್ತೇವೆ ಎಂದು ಸಭೆ ಬಳಿಕ ಮಾಜಿ ಸಚಿವ ಎನ್‌. ಚೆಲುವರಾಯಸ್ವಾಮಿ ಹೇಳಿದರು.

ರಾಣೆಬೆನ್ನೂರು ಕ್ಷೇತ್ರದ ಚರ್ಚೆ ವೇಳೆ, ಕಳೆದ ಬಾರಿ ಸ್ಪೀಕರ್‌ ಆಗಿದ್ದ ಕೆ.ಬಿ.ಕೋಳಿವಾಡ ಅವರು ಪಕ್ಷೇತರ ಅಭ್ಯರ್ಥಿ ಆರ್‌.ಶಂಕರ್‌ ವಿರುದ್ಧ ಸೋತಿದ್ದರು. ಶಂಕರ್‌ ಕಾಂಗ್ರೆಸ್‌ ಸೇರ್ಪಡೆಗೊಂಡು ಮೋಸ ಮಾಡಿದ್ದಾರೆ ಎಂಬ ಅಭಿಪ್ರಾಯ ಕೇಳಿಬಂತು. ಹೀಗಾಗಿ, ಹಿಂದೆ ಕೋಳಿವಾಡ ಸೋಲಲು ಕಾರಣಗಳನ್ನು ಪತ್ತೆಹಚ್ಚಿ ಕೋಳಿವಾಡ ಅವರಿಗೇ ಮತ್ತೆ ಅವಕಾಶ ನೀಡಬೇಕೆ ಅಥವಾ ಹೊಸಬರಿಗೆ ಅವಕಾಶ ನೀಡಬೇಕೆ ಎಂಬ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಯಾವುದೇ ಹೆಸರು ಅತಿಮಗೊಳಿಸಿಲ್ಲವಾದರೂ ಕೋಳಿವಾಡ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಭೆ ಬಳಿಕ ಮಾತನಾಡಿದ ಹರಿಹರ ಶಾಸಕ ರಾಮಪ್ಪ, ಅಭ್ಯರ್ಥಿ ಆಯ್ಕೆ ಬಗ್ಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕ್ಷೇತ್ರ ಗೆಲ್ಲುವ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ. ನಾನು ಪಕ್ಷ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಬಿಜೆಪಿಯವರು ಹಿಂದೆ ನನ್ನನ್ನು ಸಂಪರ್ಕಿಸಿದ್ದು ನಿಜ. ಆದರೆ ಈಗ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಏನೇ ಮಾಡಿದರೂ ನಾನು ಪಕ್ಷ ಬಿಡುವುದಿಲ್ಲ ಎಂದರು.

click me!