ನೆರೆ ಸಂತ್ರಸ್ತರಿಗೆ ನೆರವಾಗದಿದ್ದರೆ ಉಗ್ರ ಹೋರಾಟ: ಕೈ ಎಚ್ಚರಿಕೆ

By Web DeskFirst Published Sep 25, 2019, 7:36 AM IST
Highlights

ಬೆಳಗಾವಿಯಲ್ಲಿ ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ | ಸರ್ಕಾರಗಳ ವಿರುದ್ಧ ಕೆಂಡ | ಬೆಳಗಾವಿಯಲ್ಲೇ ಕಲಾಪಕ್ಕೆ ಒತ್ತಾಯ 

ಬೆಂಗಳೂರು (ಸೆ. 25): ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಬಗ್ಗೆ ರಾಜ್ಯ ಸರ್ಕಾರ ಭಾರೀ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ಕುಂದಾನಗರಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡರು ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕೆಂದು ಹಕ್ಕೊತ್ತಾಯ ಮಂಡಿಸಿದ್ದಾರೆ.

ಇದೇ ವೇಳೆ, ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಭಯ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನೆರೆ ಸಂತ್ರಸ್ತರ ವಿಚಾರದಲ್ಲಿ ನಮ್ಮ ಒತ್ತಡಕ್ಕೆ ಮಣಿಯದೇ ಹೋದಲ್ಲಿ ರಾಜ್ಯಾದ್ಯಂತ ಕಾನೂನು ಉಲ್ಲಂಘನೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದ ಆರ್‌ಟಿಒ ವೃತ್ತದ ಬಳಿಯಿರುವ ಕಾಂಗ್ರೆಸ್ ಭವನದಿಂದ ಕಿತ್ತೂರು ಚನ್ನಮ್ಮ ವೃತ್ತದವರೆಗೆ ಕಾಂಗ್ರೆಸ್ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯಿತು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಡವರು, ರೈತರು, ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸದ ಬಿಜೆಪಿಗರು ಮಾನಗೆಟ್ಟವರು, ಲಜ್ಜೆಗೆಟ್ಟವರು, ಜನವಿರೋಧಿಗಳು ಎಂದು ಆರೋಪಿಸಿದರು.

ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸದಿದ್ದರೆ ಯಡಿಯೂರಪ್ಪನವರೇ ನೀವು ಅಧಿಕಾರ ಬಿಟ್ಟು ಕೆಳಗಿಳಿಯಬೇಕು. ನಾವು ಅಧಿಕಾರಕ್ಕೆ ಬಂದು ನೆರೆ ಸಂತ್ರಸ್ತರ ಸಂಕಷ್ಟ ಪರಿಹರಿಸುತ್ತೇವೆ. ಪರಿಹಾರ ಸಿಗದೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿಮ್ಮ (ಬಿಜೆಪಿ) ಚರ್ಮ ಮನುಷ್ಯರದ್ದೋ, ಎಮ್ಮೆ ಚರ್ಮವೋ ಗೊತ್ತಾಗುತ್ತಿಲ್ಲ ತರಾಟೆಗೆ ತೆಗೆದುಕೊಂಡ ಅವರು ಸಂತ್ರಸ್ತರಿಗೆ ಪರಿಹಾರ ನೀಡಲು ನಿಮಗೇನು ರೋಗ ಎಂದು ಪ್ರಶ್ನಿಸಿದರು. ಇದೇವೇಳೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ಅಧಿವೇಶನ ನಡೆಸಬೇಕು. ವಿರೋಧ ಪಕ್ಷದವರಾದ ನಾವು ಸಹಕಾರ ನೀಡುತ್ತೇವೆ. ಅಧಿವೇಶನದ ಮೊದಲ ದಿನವೇ ನೆರೆ ಸಂತ್ರಸ್ತರ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆಗೆ ನಿಲುವಳಿ ಸೂಚನೆ ಮಂಡಿಸುತ್ತೇವೆ. ಯಾವುದೇ ಕಾರಣಕ್ಕೂ ಬೇರೆ ಕಡೆಗೆ ಅಧಿವೇಶನ ಕರೆದರೆ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದರು. ಕುದುರೆ ವ್ಯಾಪಾರ ಮಾಡಿ ಅಧಿಕಾರ ಹಿಡಿದಿರುವ ಯಡಿಯೂರಪ್ಪನವರೇ ಕೆಲಸ ಮಾಡಿ. ನಿಮಗೆ ಮೋದಿ ಬಳಿ ಹಣ ಕೇಳುವ ಧೈರ್ಯ ಇಲ್ಲ. ಯಡಿಯೂರಪ್ಪ ಅವರನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಚಂದ್ರಯಾನ-2 ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಮೋದಿ ಅವರ ಸ್ವಾಗತಕ್ಕೆ ತೆರಳಿದ ಯಡಿಯೂರಪ್ಪ ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ ಎಂದು ಹೇಳಿದರು.

click me!