ಕಾಂಗ್ರೆಸ್‌ ಹಾಲಿ ಶಾಸಕರಿಗೆ ಟಿಕೆಟ್‌ : ಇನ್ನೂ ಒಮ್ಮತವಿಲ್ಲ

By Suvarna Web DeskFirst Published Mar 27, 2018, 7:15 AM IST
Highlights

ಕಾಂಗ್ರೆಸ್‌ನ ಎಲ್ಲ ಹಾಲಿ ಶಾಸಕರಿಗೆ ವಿಧಾನಸಭಾ ಚುನಾವಣೆ ಟಿಕೆಟ್‌ ನೀಡುವ ಬಗ್ಗೆ ರಾಜ್ಯ ಕಾಂಗ್ರೆಸ್‌ ಜಾಗರೂಕತೆಯ ಹೆಜ್ಜೆ ಇಟ್ಟಿದ್ದು, ಸೋಮವಾರ ನಡೆದ ಚುನಾವಣಾ ಸಮಿತಿ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ನೀಡುವ ನಿರ್ಧಾರವನ್ನು ಹೈಕಮಾಂಡ್‌ಗೆ ವಹಿಸಿ ಕೈ ತೊಳೆದುಕೊಂಡಿದೆ.

ಬೆಂಗಳೂರು : ಕಾಂಗ್ರೆಸ್‌ನ ಎಲ್ಲ ಹಾಲಿ ಶಾಸಕರಿಗೆ ವಿಧಾನಸಭಾ ಚುನಾವಣೆ ಟಿಕೆಟ್‌ ನೀಡುವ ಬಗ್ಗೆ ರಾಜ್ಯ ಕಾಂಗ್ರೆಸ್‌ ಜಾಗರೂಕತೆಯ ಹೆಜ್ಜೆ ಇಟ್ಟಿದ್ದು, ಸೋಮವಾರ ನಡೆದ ಚುನಾವಣಾ ಸಮಿತಿ ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ನೀಡುವ ನಿರ್ಧಾರವನ್ನು ಹೈಕಮಾಂಡ್‌ಗೆ ವಹಿಸಿ ಕೈ ತೊಳೆದುಕೊಂಡಿದೆ.

ಹಾಲಿ ಶಾಸಕರ ಕ್ಷೇತ್ರಗಳಿಗೆ ಟಿಕೆಟ್‌ ಅಂತಿಮಗೊಳಿಸುವ ಸಲುವಾಗಿಯೇ ಕರೆದಿದ್ದ ಸಭೆಯಲ್ಲಿ ಒಮ್ಮತ ನಿರ್ಧಾರ ಕೈಗೊಳ್ಳುವಲ್ಲಿ ರಾಜ್ಯ ಕಾಂಗ್ರೆಸ್‌ ವಿಫಲವಾಗಿದೆ. ಹೀಗಾಗಿ ಹಾಲಿ ಶಾಸಕರಿರುವ ಕ್ಷೇತ್ರಗಳ ಶಾಸಕರು ಹಾಗೂ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ವಹಿಸಿ ಕೈತೊಳೆದುಕೊಂಡಿದ್ದು, ವಲಸಿಗ ಶಾಸಕರ ಕ್ಷೇತ್ರವೂ ಸೇರಿದಂತೆ 130 ಕ್ಷೇತ್ರಗಳ ಟಿಕೆಟ್‌ ಅಂತಿಮಗೊಳಿಸಲು ಎಐಸಿಸಿಗೆ ಶಿಫಾರಸು ಮಾಡಲು ನಿರ್ಧರಿಸಲಾಯಿತು.

ಅಲ್ಲದೇ, ಏ.10ರ ವೇಳೆಗೆ ಕನಿಷ್ಠ 130-150 ಮಂದಿಯ ಪಟ್ಟಿಅಂತಿಮಗೊಳ್ಳಬೇಕು. ಈ ಕುರಿತ ಪ್ರಕ್ರಿಯೆಗೆ ಮಾಚ್‌ರ್‍ 26ರಿಂದಲೇ ಚಾಲನೆ ದೊರೆಯಬೇಕೆಂದು ಸಭೆಯಲ್ಲಿ ಚರ್ಚಿಸಿದ್ದು, ಶತಾಯಗತಾಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಒಗ್ಗಟ್ಟಿನ ಮಂತ್ರ ಜಪಿಸಬೇಕು. ರಾಜ್ಯದ ಬಗ್ಗೆ ರಾಹುಲ್‌ ಗಾಂಧಿಗೆ ಇರುವ ವಿಶ್ವಾಸವನ್ನು ಉಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ.ಸಿ. ವೇಣುಗೋಪಾಲ್‌ ಕರೆ ನೀಡಿದರು. ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಸೋಮವಾರ ನಗರದ ದೇವನಹಳ್ಳಿ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ರಣತಂತ್ರ ಹಾಗೂ ಹಾಲಿ ಶಾಸಕರಿಗೆ ಟಿಕೆಟ್‌ ನೀಡುವ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.

ಕೆಲ ಹಾಲಿ ಶಾಸಕರ ಕ್ಷೇತ್ರಗಳಲ್ಲಿ ಅವರ ವಿರೋಧಿ ಅಲೆ ಇದೆ. ಅನಾರೋಗ್ಯ, ವಯಸ್ಸು ಮತ್ತಿತರ ಕಾರಣಗಳಿಗೆ ಹತ್ತಕ್ಕೂ ಹೆಚ್ಚು ಶಾಸಕರಿಗೆ ಟಿಕೆಟ್‌ ತಪ್ಪಿಸಬೇಕಾದ ಅನಿವಾರ್ಯತೆ ಇದೆ ಎಂದು ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ತಿಳಿದು ಬಂದಿತ್ತು. ಆದರೆ, ರಾಜ್ಯ ಮಟ್ಟದ ಚುನಾವಣಾ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡರೆ ಪಕ್ಷದಲ್ಲಿ ಒಡಕು ಮೂಡುವ ಸಾಧ್ಯತೆ ಇದೆ. ಟಿಕೆಟ್‌ ಕೈತಪ್ಪುವ ಶಾಸಕರು ಹಾಗೂ ಆಕಾಂಕ್ಷಿಗಳು ಪಕ್ಷ ಹಾಗೂ ಮುಖಂಡರ ವಿರುದ್ಧ ಬಂಡಾಯ ಏಳುವ ಸಾಧ್ಯತೆ ಇದೆ. ಹೀಗಾಗಿ ಹಾಲಿ ಇರುವ ಎಲ್ಲ ಶಾಸಕರ ಕ್ಷೇತ್ರಗಳ ಆಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಿ, ಟಿಕೆಟ್‌ ವಿಚಾರವನ್ನು ಹೈಕಮಾಂಡ್‌ಗೆ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ವಲಸಿಗ ಶಾಸಕರ ಹೆಸರೂ ಶಿಫಾರಸು: ಜೆಡಿಎಸ್‌ ಹಾಗೂ ಬಿಜೆಪಿ, ಕರ್ನಾಟಕ ಮಕ್ಕಳ ಪಕ್ಷದಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿರುವ ಶಾಸಕರಿಗೂ ಟಿಕೆಟ್‌ ನೀಡುವ ಬಗ್ಗೆ ಹೈಕಮಾಂಡ್‌ಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಕಾಂಗ್ರೆಸ್‌ ಶಾಸಕರ ಪಟ್ಟಿಯಲ್ಲಿ ಜೆಡಿಎಸ್‌ನ ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಖಾನ್‌, ನಾಗಮಂಗಲ ಕ್ಷೇತ್ರದ ಎನ್‌. ಚಲುವರಾಯಸ್ವಾಮಿ, ಶ್ರೀರಂಗಪಟ್ಟಣದ ಎ.ಬಿ. ರಮೇಶ ಬಂಡಿಸಿದ್ದೇಗೌಡ, ಮಾಗಡಿ ಕ್ಷೇತ್ರದ ಎಚ್‌.ಸಿ. ಬಾಲಕೃಷ್ಣ, ಪುಲಿಕೇಶಿನಗರದ ಆರ್‌. ಅಖಂಡ ಶ್ರೀನಿವಾಸಮೂರ್ತಿ, ಗಂಗಾವತಿ ಕ್ಷೇತ್ರದ ಇಕ್ಬಾಲ್‌ ಅನ್ಸಾರಿ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಎಸ್‌. ಭೀಮಾನಾಯಕ್‌, ಕರ್ನಾಟಕ ಮಕ್ಕಳ ಪಕ್ಷದ ಅಶೋಕ್‌ ಖೇಣಿ, ಬಿಜೆಪಿಯಿಂದ ಆಗಮಿಸಿರುವ ಆನಂದ್‌ಸಿಂಗ್‌, ಪಕ್ಷೇತರ ಸದಸ್ಯ ಬಿ. ನಾಗೇಂದ್ರ ಅವರ ಹೆಸರನ್ನೂ ಶಿಫಾರಸು ಮಾಡಲಿದ್ದು, ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲಾಗಿದೆ.

ಶಿಫಾರಸು ಮಾಡಲಿರುವ ಪಟ್ಟಿಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರು ಏ.28ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ರಾಜ್ಯ ಕಾಂಗ್ರೆಸ್‌ ವತಿಯಿಂದಲೇ ಹಾಲಿ ಶಾಸಕರ ಗೆಲುವು-ಸೋಲಿನ ಸಾಧ್ಯತೆಗಳನ್ನೂ ಹೈಕಮಾಂಡ್‌ಗೆ ಟಿಪ್ಪಣಿ ಮಾಡಿಕೊಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಏ.10ರ ವೇಳೆಗೆ ಮೊದಲ ಪಟ್ಟಿ: ಅಭ್ಯರ್ಥಿಗಳ ಆಯ್ಕೆಗೆ ಮಂಗಳವಾರದಿಂದ ಪ್ರಕ್ರಿಯೆ ಶುರುವಾಗಲಿದ್ದು, ರಾಜ್ಯ ಕಾಂಗ್ರೆಸ್‌ ಸ್ಕ್ರೀನಿಂಗ್‌ ಸಮಿತಿ ಅಧ್ಯಕ್ಷ ಮಧುಸೂದನ್‌ ಮಿಸ್ತ್ರಿ ತಂಡವು 43 ಸದಸ್ಯರು ಇರುವ ಚುನಾವಣಾ ಸಮಿತಿಯೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದು ಇದನ್ನು ಹೈಕಮಾಂಡ್‌ಗೆ ಕಳುಹಿಸಲಿದೆ.

ಮಾ.28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ವಿಭಾಗವಾರು ಸಭೆ ನಡೆಯಲಿದೆ. ಸಭೆಯಲ್ಲಿ ಸ್ಥಳೀಯ ನಾಯಕರು, ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ.

ಏ.2ರಂದು ಹೈಕಮಾಂಡ್‌ ಹಂತದಲ್ಲಿ ಸಭೆ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಏ.9 ಹಾಗೂ 10ರಂದು ನಡೆಯಲಿರುವ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ.

ಶಾಮನೂರು ಶಿವಶಂಕಪರಪ್ಪ ಅವರಿಂದ ಹಿಡಿದು ಅಶೋಕ್‌ ಖೇಣಿವರೆಗೆ ಹಾಲಿ ಶಾಸಕರಿಗೆಲ್ಲರಿಗೂ ಟಿಕೆಟ್‌ ನೀಡುವ ಬಗ್ಗೆ ಶಿಫಾರಸು ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಲು ನಿರ್ಧರಿಸಲಾಗಿದೆ. ಹಾಲಿ ಶಾಸಕರಿಗೆ ಟಿಕೆಟ್‌ ನೀಡುವ ಬಗ್ಗೆ ಅಂತಿಮ ನಿರ್ಧಾರವನ್ನು ಎಐಸಿಸಿ ಮಟ್ಟದಲ್ಲಿ ತೆಗೆದುಕೊಳ್ಳಲಾಗುತ್ತದೆ. ಏ.15ರೊಳಗಾಗಿ 224 ಅಭ್ಯರ್ಥಿಗಳ ಪಟ್ಟಿಬಿಡುಗಡೆ ಮಾಡಲಾಗುವುದು.

- ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

click me!