
ಮೈಸೂರು : ಪಕ್ಷ ಬಯಸಿದರೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಸ್ಪರ್ಧಿಸಲು ನಾನು ಸಿದ್ಧ. ಆದರೆ ಸಿದ್ದರಾಮಯ್ಯ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಮಾಜಿ ಸಚಿವ ಸಿ.ಟಿ. ರವಿ ಸವಾಲು ಹಾಕಿದ್ದಾರೆ.
ಸೋಮವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಲೂಟಿ ರವಿ ಎಂದು ಆರೋಪಿಸಿದ್ದಾರೆ. ಮಾ.26ರೊಳಗೆ ಚಾಮುಂಡೇಶ್ವರಿ ಮೇಲೆ ನಾನು ಆಣೆ ಮಾಡುತ್ತೇನೆ ಎಂದು ಹೇಳಿದ್ದೆ. ಅದರಂತೆ ಈಗ ಬಂದು ಆಣೆ ಮಾಡಿದ್ದೇನೆ ಎಂದರು.
ಸಿದ್ದರಾಮಯ್ಯಅವರ ಆರೋಪವನ್ನು ನಾನು ಇಷ್ಟಕ್ಕೆ ಬಿಡುವುದಿಲ್ಲ. ಅವರದೇ ಸರ್ಕಾರ ರಾಜ್ಯದಲ್ಲಿದೆ. ಎಸಿಬಿ ಇದೆ. ಅದರ ಮೂಲಕ ತನಿಖೆ ಮಾಡಿಸಬಹುದಿತ್ತು. ಚುನಾವಣಾ ಆಯೋಗಕ್ಕೆ ನಾನು ಸಲ್ಲಿಸಿದ ಪ್ರಮಾಣ ಪತ್ರಕ್ಕಿಂತ ಹೆಚ್ಚು ಆಸ್ತಿ ಇದ್ದರೆ ತನಿಖೆ ಮಾಡಿಸಲಿ.
ನಾನು ಚಾಮುಂಡೇಶ್ವರಿಯಲ್ಲಿ ರಾಜ್ಯದ ಈ ಭ್ರಷ್ಟಾಚಾರ ಸರ್ಕಾರ ತೊಲಗಲಿ ಎಂದು ಕೇಳಿಕೊಂಡಿದ್ದೇನೆ. ನಾನು ಇನ್ನೂ ಮೂರು ದಿನ ಮೈಸೂರಿನಲ್ಲಿಯೇ ಇರುತ್ತೇನೆ. ಸಿದ್ದರಾಮಯ್ಯ ಅವರು ನನ್ನ ಸವಾಲನ್ನು ಸ್ವೀಕರಿಸಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಪ್ರತಾಪ್‌ಸಿಂಹ, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಜಿಲ್ಲಾಧ್ಯಕ್ಷ ಎಂ. ಶಿವಣ್ಣ, ಮುಖಂಡ ನಾಗೇಂದ್ರ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.