ಕಾಂಗ್ರೆಸ್ ಶಾಸಕ ಚುನಾವಣಾ ನಿವೃತ್ತಿ

By Web DeskFirst Published Sep 6, 2018, 11:45 AM IST
Highlights

ಕಾಂಗ್ರೆಸ್ ಮುಖಂಡರೋರ್ವರು ಇದೀಗ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ರಾಜಕೀಯದಿಂದ ತಾವೂ ದೂರ ಉಳಿಯುವುದಾಗಿ ಅವರು ಹೇಳಿದ್ದಾರೆ. 

ಹೊಸಪೇಟೆ :  ವಿಜಯನಗರ (ಹೊಸಪೇಟೆ) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಆನಂದ ಸಿಂಗ್‌ ಅವರು ಚುನಾವಣಾ ರಾಜಕೀಯದಿಂದ ದೂರವುಳಿಯುವ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ. ‘ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ರಾಜಕಾರಣದಲ್ಲಿ ಸಕ್ರಿಯನಾಗಿರುತ್ತೇನೆ’ ಎಂದು ಹೇಳಿದ್ದಾರೆ.

ಬುಧವಾರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಮತದಾರರು ನನಗೆ ಆಶೀರ್ವದಿಸಿದ್ದಾರೆ. ನನಗೂ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಬೇಕು ಎನ್ನುವ ಅಭಿಲಾಷೆ ಮತ್ತು ಛಲ ಇತ್ತು. ಅದರಂತೆ ಮೂರು ಬಾರಿ ಗೆದ್ದಿದ್ದೇನೆ. ಮತ್ತೊಮ್ಮೆ ಶಾಸಕನಾಗಬೇಕೆಂಬ ಆಸೆಯುಳ್ಳ ವ್ಯಕ್ತಿ ನಾನಲ್ಲ. ಮುಂದಿನ ದಿನಗಳಲ್ಲಿ ರಾಜಕಾರಣದಲ್ಲಿ ಸಕ್ರಿಯವಾಗಿರುತ್ತೇನೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಿಂದ ಯಾರಿಗಾದರೂ ಬೆಂಬಲ ನೀಡಿ ಅವರ ಪರ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಶಾಸಕನಾಗಿ ಅಭಿವೃದ್ಧಿ ಕಾರ್ಯ ಮಾಡಬೇಕೆಂಬ ಕನಸು ಕಾಣುತ್ತಿರುವ ಹಲವು ಉತ್ಸಾಹಿ ಯುವಕರು ಇದ್ದಾರೆ. ಅಂಥವರಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.

ನಾನು ರಾಜಕೀಯವಾಗಿ ಬೆಳೆದಿದ್ದು ವಾಲ್ಮೀಕಿ ಸಮಾಜದಿಂದಲೇ. ಹೊಸಪೇಟೆಯಲ್ಲಿ ವಾಲ್ಮೀಕಿ ಸಮಾಜದ ಸಮಾವೇಶ ನಡೆದಾಗ ಪುಣ್ಯಾನಂದಪುರಿ ಸ್ವಾಮೀಜಿಗಳು ನನ್ನನ್ನು ಗುರುತಿಸಿ ಬೆಳೆಸಿದ್ದಾರೆ. ವಾಲ್ಮೀಕಿ ಸಮಾಜದವರು ನನ್ನನ್ನು ಕೈ ಬಿಟ್ಟರೂ ನಾನು ವಾಲ್ಮೀಕಿ ಸಮಾಜವನ್ನು ಕೈ ಬಿಡುವುದಿಲ್ಲ ಎಂದು ತಿಳಿಸಿದರು.

click me!