ಸತೀಶ್ ಜಾರಕಿಹೊಳಿಗೆ ಸಚಿವ ಸ್ಥಾನ ತಪ್ಪಲು ಇವರೇ ಕಾರಣ..!

First Published Jun 14, 2018, 8:07 AM IST
Highlights

ಕಾಂಗ್ರೆಸ್‌ನಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಬೆಂಬಲಿಗರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ನಾವು ಕಾದು ನೋಡಲು ತೀರ್ಮಾನಿಸಿದ್ದೇವೆ. ಈ ಕುರಿತು ಪಕ್ಷಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಸಚಿವ ಸ್ಥಾನದ ಕುರಿತು ಅತೃಪ್ತ ಹೋರಾಟವನ್ನು ಪ್ರಬಲಗೊಳಿಸುತ್ತೇವೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಬೆಳಗಾವಿ :  ಕಾಂಗ್ರೆಸ್‌ನಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಬೆಂಬಲಿಗರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ನಾವು ಕಾದು ನೋಡಲು ತೀರ್ಮಾನಿಸಿದ್ದೇವೆ. ಈ ಕುರಿತು ಪಕ್ಷಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಸಚಿವ ಸ್ಥಾನದ ಕುರಿತು ಅತೃಪ್ತ ಹೋರಾಟವನ್ನು ಪ್ರಬಲಗೊಳಿಸುತ್ತೇವೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನನಗೆ ಸಚಿವ ಸ್ಥಾನ ತಪ್ಪಲು ಪ್ರಭಾವಿ ನಾಯಕರೇ ಪ್ರಮುಖ ಕಾರಣ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌ ಅವರೂ ಇದೇ ಮಾತನ್ನು ಹೇಳುತ್ತಿದ್ದಾರೆ. ನಮ್ಮಿಬ್ಬರ ಸಮಸ್ಯೆಯೂ ಒಂದೇ. ಆದರೆ, ಲಕ್ಷ್ಮೇ ಹೆಬ್ಬಾಳಕರ್‌ ಅವರು ಕಣ್ಣೀರು ಹಾಕುತ್ತಾರೆ. ನಾನು ಕಣ್ಣೀರು ಹಾಕುವುದಿಲ್ಲ. ನಮ್ಮಿಬ್ಬರಿಗೂ ಸಚಿವ ಸ್ಥಾನ ತಪ್ಪಿಸಿದವರು ಯಾರು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ಇದೇ ವೇಳೆ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ರಾಜ್ಯ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರಕ್ಕೆ ನಮ್ಮಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಸಚಿವ ಸ್ಥಾನ ಹಂಚಿಕೆ ವಿಚಾರ ಪಕ್ಷದೊಳಗಿನ ವಿಷಯವಾಗಿದೆ. ಇದನ್ನು ಪಕ್ಷದೊಳಗೆ ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದರು.

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ನನಗೆ ಸಂಪುಟದಲ್ಲಿ ಅವಕಾಶ ಸಿಗದಿರುವುದು ನೋವು ತಂದಿದೆ. ಇದೇ ಹಿನ್ನೆಲೆಯಲ್ಲಿ ಬೆಂಬಲಿಗರ ಒತ್ತಾಸೆ ಮೇರೆಗೆ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ಸೋಮವಾರವೇ ರಾಜೀನಾಮೆ ಸಲ್ಲಿಸಿದ್ದೇನೆ. ಸಂಪುಟ ರಚನೆ ವೇಳೆ ಇಂತಹ ಗೊಂದಲ ಸಾಮಾನ್ಯ. ಇದು ಕಾಂಗ್ರೆಸ್‌ನಲ್ಲಿ ಮಾತ್ರವಲ್ಲ. ಎಲ್ಲ ಪಕ್ಷಗಳಲ್ಲೂ ಇರುತ್ತದೆ. ಇನ್ನು ನಾವು ಸಚಿವ ಸ್ಥಾನ ಕೇಳಿದಾಕ್ಷಣ ಕೊಡಲು ಅವರಿಗೂ ಆಗಲ್ಲ. ಪ್ರಸ್ತುತ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳ ಹಂಚಿಕೆಯಾಗಿಲ್ಲ. ಜತೆಗೆ ನನಗೆ ಇಂತಹದ್ದೇ ಖಾತೆ ನೀಡಬೇಕೆಂಬ ಕುರಿತು ಬೇಡಿಕೆಯನ್ನೂ ಇಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಎರಡನೇ ಹಂತದ ಸಂಪುಟ ವಿಸ್ತರಣೆಯನ್ನು ಕಾದು ನೋಡಲು ಮುಂದಾಗಿದ್ದೇವೆ ಎಂದರು.

ಸಿದ್ದು ಭೇಟಿ, ಚರ್ಚೆ:

ಸಚಿವ ಸಂಪುಟದ ರಚನೆ ನಂತರ ನಾನು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯಅವರು ಭೇಟಿ ಆಗಿಲ್ಲ. ಕೆಲವೇ ದಿನಗಳಲ್ಲಿ ಇಬ್ಬರೂ ಭೇಟಿಯಾಗಲಿದ್ದೇವೆ. ಸಚಿವ ಸಂಪುಟದಲ್ಲಿ ಪ್ರಮುಖರಿಗೆ ಅವಕಾಶ ಸಿಗದಿರುವ ಕುರಿತು ಚರ್ಚಿಸಲಿದ್ದೇವೆ. ಪ್ರಸ್ತುತ ಸಚಿವ ಸಂಪುಟ ರಚನೆ ಕುರಿತು ಎಲ್ಲರಲ್ಲಿಯೂ ಅಸಮಾಧಾನವಿದ್ದು, ಅನುಭವಿಗಳನ್ನು ಕೈಬಿಡಲಾಗಿದೆ ಎಂಬ ದೂರು ಕೇಳಿ ಬಂದಿದೆ. ಈ ಕುರಿತು ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು.

ಇಂದು ಅಥವಾ ನಾಳೆ ಸಭೆ:

ಬೆಂಗಳೂರಲ್ಲಿ ಗುರುವಾರ ಇಲ್ಲವೇ ಶುಕ್ರವಾರ ಅತೃಪ್ತ ಶಾಸಕರ ಸಭೆ ನಡೆಯಲಿದೆ. ದೆಹಲಿಯಲ್ಲಿ ಹೈಕಮಾಂಡ್‌ ಭೇಟಿಯಾಗಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಅವರು ಅಲ್ಲಿ ನಡೆದ ಚರ್ಚೆಗಳ ವಿವರಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ. ಆನಂತರವಷ್ಟೇ ಮುಂದಿನ ರಾಜಕೀಯ ನಡೆ ಏನು ಎಂಬುದರ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಪಾಲಿನ ಇನ್ನು 6 ಸಚಿವ ಸ್ಥಾನಗಳು ಖಾಲಿ ಉಳಿದಿವೆ. 2ನೇ ಹಂತದ ವಿಸ್ತರಣೆಯಲ್ಲಿ ಸಚಿವ ಸ್ಥಾನ ಬೇಡ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಆದರೆ, ನನ್ನ ಬೆಂಬಲಕ್ಕೆ ನಿಂತಿರುವ 15 ಶಾಸಕರ ಪೈಕಿ ಕೆಲವರಿಗೆ ಸಚಿವ ಸ್ಥಾನ ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.

click me!