
ಚಿಕ್ಕಬಳ್ಳಾಪುರ: ಇಡೀ ದೇಶದಲ್ಲಿ ಕಾಂಗ್ರೆಸ್ ತೀವ್ರ ಸಂಕಷ್ಟದಲ್ಲಿದ್ದು, ಸಂಪೂರ್ಣ ಕೇಸರಿಮಯವಾಗುತ್ತಿದೆ. ಯುವ ಮತದಾರರೂ ಬಿಜೆಪಿ ಕಡೆಗೆ ವಾಲುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಇದಕ್ಕೆ ಸ್ಪಷ್ಟಕಾರಣ ಹುಡುಕುವ ಕೆಲಸ ಕಾಂಗ್ರೆಸ್‌ನಿಂದ ಆಗುತ್ತಿಲ್ಲ. ಇನ್ನೂ ಕಾಂಗ್ರೆಸ್ ತನ್ನ ಸೋಲಿಗೆ ಕಾರಣ ಹುಡುಕದಿದ್ದರೆ ಭವಿಷ್ಯದಲ್ಲಿ ತೀವ್ರ ಸಂಕಷ್ಟಎದುರಿಸಬೇಕಾಗುತ್ತದೆ ಎಂದು ಶಾಸಕ ಡಾ. ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತಾ ಸಮಾವೇಶದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು. ತಾತ, ಅಪ್ಪ ಮಂತ್ರಿಯಾಗಿದ್ದ ಎಂಬುದನ್ನು ಪರಿಗಣಿಸಿ ಸಚಿವ ಸ್ಥಾನ ನೀಡುವ ಪದ್ಧತಿ ಕಾಂಗ್ರೆಸ್‌ನಿಂದ ತೊಲಗಬೇಕು. ಅರ್ಹರು, ಪಕ್ಷ ಸಂಘಟನೆ ಚತುರರನ್ನು ಗುರುತಿಸುವ ಕೆಲಸವಾಗದಿದ್ದರೆ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಲಿದೆ ಎಂದು ವಾಗ್ದಾಳಿ ನಡೆಸಿದರು.
ಯುವಜನರ ಮತ ಬಿಜೆಪಿಗೆ!:
ದೇಶದಲ್ಲಿ 18 ವರ್ಷದ ಯುವ ಸಮೂಹಕ್ಕೆ ಮತದಾನದ ಹಕ್ಕು ನೀಡಿದ್ದು ರಾಜೀವ್ ಗಾಂಧಿ. ಆದರೆ ಯುವ ಮತದಾರರು ಬಿಜೆಪಿಗೆ ಮತ ಹಾಕುತ್ತಿದ್ದಾರೆ. ಹೀಗಿದ್ದರೂ ಇದಕ್ಕೆ ಸ್ಪಷ್ಟಕಾರಣ ಹುಡುಕುವ ಕೆಲಸ ಕಾಂಗ್ರೆಸ್‌ನಿಂದ ಆಗುತ್ತಿಲ್ಲ. ಕಾರಣ ಹುಡುಕಿ ಯುವ ಸಮೂಹವನ್ನು ಪಕ್ಷಕ್ಕೆ ಸೆಳೆಯದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎನ್ನುವುದನ್ನು ವರಿಷ್ಠರು ಅರಿಯಬೇಕಿದೆ ಎಂದು ಪ್ರತಿಪಾದಿಸಿದರು.
ಮೈತ್ರಿ ಇಷ್ಟವಿರಲಿಲ್ಲ:
78 ಸ್ಥಾನ ಗೆದ್ದ ಕಾಂಗ್ರೆಸ್ 37 ಸ್ಥಾನ ಗೆದ್ದ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದು ತಾವು ಸೇರಿದಂತೆ ಬಹುತೇಕ ಶಾಸಕರಿಗೆ ಇಷ್ಟವಿರಲಿಲ್ಲ. ಆದರೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಆದೇಶದಂತೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಕುಮಾರಸ್ವಾಮಿ ಸಿಎಂ ಆದ ಮಾತ್ರಕ್ಕೆ ಕ್ಷೇತ್ರದ ಕಾಂಗ್ರೆಸ್ ಕಾರ‍್ಯಕರ್ತರು ಬಲ ಕಳೆದುಕೊಳ್ಳುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಹಿತ ಕಾಯಲು ತಾವು ಸದಾ ಸಿದ್ಧರಿರುವುದಾಗಿ ಘೋಷಿಸಿದರು.
ಸಚಿವರ ಜೊತೆ ಕೂರೊಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಶಿವಶಂಕರ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಡಾ.ಸುಧಾಕರ್, ರಾಜಕೀಯವಾಗಿ ಅವರ ಪಕ್ಕ ಕೂರಲು ತಯಾರಿಲ್ಲ ಎಂದು ಹೇಳಿದರು. ಜಿಲ್ಲೆಯ ಉಸ್ತುವಾರಿ ಸಚಿವರಾದವರು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಅವರನ್ನು ಸ್ವಾಗತಿಸಲು ಒಬ್ಬ ಕಾಂಗ್ರೆಸಿನವರೂ ಇರಲಿಲ್ಲ. ಜೆಡಿಎಸ್ ಮುಖಂಡರು ಮಾತ್ರ ಸ್ವಾಗತಿಸಿದರು ಎಂದು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮನಸ್ಥಿತಿಯ ಬಗ್ಗೆ ಹೇಳಿದರು. ಜಿಲ್ಲೆಯ ದೃಷ್ಟಿಯಿಂದ ಅವರು ಸಚಿವರಾಗಿರುವುದಕ್ಕೆ ತಮ್ಮ ವಿರೋಧವಿಲ್ಲ. ಅಭಿವೃದ್ಧಿ ಕಾರ್ಯದಲ್ಲೂ ಅವರ ಜೊತೆ ಕೈಜೋಡಿಸುವೆ, ಆದರೆ ರಾಜಕೀಯವಾಗಿ ಸಚಿವರ ಜತೆ ಕೂರಲು ಸಾಧ್ಯವೇ ಇಲ್ಲ. ಆತ್ಮವಂಚನೆ ಮಾಡಿಕೊಂಡು ಅಂತಹ ವ್ಯಕ್ತಿಯ ಪಕ್ಕ ಕೂರಲು ಸಾಧ್ಯವೇ ಇಲ್ಲ. ಅಂತಹ ಸ್ಥಿತಿ ಎದುರಾದರೆ, ರಾಜಕೀಯ ಬಿಟ್ಟು ಹೊರಬರಲೂ ಸಿದ್ಧ ಎಂದು ಅಸಮಾಧಾನ ಹೊರಹಾಕಿದರು. ಇದೇವೇಳೆ ಸಂಸದ ವೀರಪ್ಪ ಮೋಯ್ಲಿ ಅವರ ವಿರುದ್ಧವೂ ಪರೋಕ್ಷವಾಗಿ ಹರಿಹಾಯ್ದ ಅವರು, 2019ರ ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಜೆಡಿಎಸ್ ಕಾಂಗ್ರೆಸ್ ಮೈತ್ರಿಯಿಂದ ಮಾತ್ರ ಮೊಯ್ಲಿ ಸಂಸರಾಗಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.
ಪಕ್ಷ ವಿರೋಧಿಯಲ್ಲ, ಪಕ್ಷ ಸಂಘಟನೆ
ತಾವು ಎಂ.ಬಿ.ಪಾಟೀಲರ ಮನೆಯಲ್ಲಿ ನಡೆದ ಸಭೆಗೆ ಹೋಗಿದ್ದು ಪಕ್ಷ ವಿರೋಧಿ ಚಟುವಟಿಕೆಯಲ್ಲ, ಪಕ್ಷ ಉಳಿವಿಗಾಗಿ ಚರ್ಚಿಸಲು 10 ಮಂದಿ ಶಾಸಕರು ಸೇರಿದ್ದೆವು. ಅದೇ ರೀತಿಯಲ್ಲಿ ಜೂ.15 ರಂದು 20 ಮಂದಿ ಶಾಸಕರು ಸಭೆ ಸೇರಲಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಉಳಿಸಲು ಸಭೆಯಲ್ಲಿ ಚರ್ಚಿಸಲಾಗುವುದು. 2019ರ ಚುನಾವಣೆ ಕಾಂಗ್ರೆಸ್‌ಗೆ ಅಳಿವು ಉಳಿವಿನ ಪ್ರಶ್ನೆಯಾಗಿದ್ದು ಕೋಮುಶಕ್ತಿಗಳನ್ನು ಸೋಲಿಸಲು ಚರ್ಚಿಸಲಾಗುವುದು ಎಂದರು.
ಸಿದ್ದು ಸೋಲು ನೋವು ತಂದಿದೆ
ದೇಶದಲ್ಲೇ ಮಾಡದ ಜನಪ್ರಿಯ ಕಾರ‍್ಯಕ್ರಮಗಳನ್ನು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮಾಡಿದ್ದರು. ಆದರೂ 17 ಸಚಿವರು ಮತ್ತು ಮುಖ್ಯಮಂತ್ರಿಗಳೇ ಸೋಲನುಭವಿಸಿರುವುದು ನೋವಿನ ಸಂಗತಿ. ತಮಗೆ ಸಚಿವ ಸ್ಥಾನ ಸಿಗದಿರುವುದಕ್ಕಿಂತ ಸಿದ್ದರಾಮಯ್ಯ ಸೋತಿರುವುದು ನೋವು ತಂದಿದೆ ಎಂದು ಸುಧಾಕರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.