
ಆದಿಚುಂಚನಗಿರಿ (ಮಂಡ್ಯ ಜಿಲ್ಲೆ): ರೈತರ ಸಾಲಮನ್ನಾದ ವಿಚಾರಕ್ಕೆ ಸಂಬಂಧಪಟ್ಟು ರಾಜ್ಯದ ಜನತೆಯಲ್ಲಿ ಹದಿನೈದು ದಿನದ ಸಮಯ ಕೇಳಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದೀಗ ಸಾಲಮನ್ನಾದ ಪ್ರಮಾಣವನ್ನು ಮುಂದಿನ ಬಜೆಟ್‌ನಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಆದಿಚುಂಚನಗಿರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಲಮನ್ನಾ ವಿಚಾರವಾಗಿ ಈಗಾಗಲೇ ಬ್ಯಾಂಕ್ ಅಧಿಕಾರಿಗಳ ಜತೆ ಚರ್ಚಿಸಲಾಗಿದ್ದು ಎಷ್ಟುಸಾಲವಿದೆ, ಯಾವ ರೀತಿ ಮಾಡಬೇಕು ಎಂದು ವರದಿ ಪಡೆದುಕೊಳ್ಳಲಾಗುತ್ತಿದೆ ಎಂದರು. ರೈತರ ಸಾಲಮನ್ನಾ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಪುನರುಚ್ಚರಿಸಿರುವ ಅವರು, ಈ ವಿಚಾರದಲ್ಲಿ ನಾನು ಬೇರೆ ಪಕ್ಷದವರ ರೀತಿಯಲ್ಲಿ ಪಲಾಯನ ಮಾಡುವುದಿಲ್ಲ. ನನ್ನ ಘೋಷಣೆ ಅನುಷ್ಠಾನ ಮಾಡೇ ತೀರುತ್ತೇನೆ. ಬಜೆಟ್‌ನಲ್ಲಿ ಯಾವ ಪ್ರಮಾಣದ ಸಾಲಮನ್ನಾ ಮಾಡಲಾಗುವುದು ಎಂದು ತಿಳಿಸಲಾಗುವುದು ಎಂದರು. ಜೂನ್ ತಿಂಗಳಲ್ಲಿ ನೂತನ ಸರ್ಕಾರದ ಬಜೆಟ್ ಮಂಡಿಸಲಾಗುವುದು ಎಂದು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ತಿಳಿಸಿದ್ದರು.
ಇದೇ ವೇಳೆ ಇಸ್ರೇಲ್ ಮಾದರಿ ಕೃಷಿ ಪದ್ಧತಿಯ ಬಗ್ಗೆಯೂ ಮಾತನಾಡಿದ ಅವರು, ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಈ ಪದ್ಧತಿ ಜಾರಿ ಮಾಡಲು ಚಿಂತನೆ ನಡೆದಿದೆ ಎಂದು ತಿಳಿಸಿದರು.
ಭತ್ತದ ನಾಟಿ ಮಾಡುವೆ:
ಎರಡು, ಮೂರು ವರ್ಷಗಳಿಂದ ಮಂಡ್ಯ ಜಿಲ್ಲೆಯಲ್ಲಿ ಭತ್ತದ ನಾಟಿ ಮಾಡಿಲ್ಲ. ಹಿಂದಿನ ಸರ್ಕಾರಗಳು ರೈತರಿಗೆ ಹುರುಳಿ ಚೆಲ್ಲುವ ಸಲಹೆ ನೀಡಿದ್ದವು. ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿಯೇ ಸಾಕಷ್ಟುಮಳೆಯನ್ನು ಕಂಡಿದ್ದೇನೆ. ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಭತ್ತ ನಾಟಿ ಮಾಡುವ ಕಾರ್ಯಕ್ರಮದಲ್ಲಿ ಖುದ್ದು ಪಾಲ್ಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.