
ಬೆಂಗಳೂರು : ನಿಗಮ ಮಂಡಳಿ ಅಧ್ಯಕ್ಷರು ಹಾಗೂ ವಿವಿಧ ನೇಮಕಕ್ಕೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನಡೆದಿರುವ ಬಿಕ್ಕಟ್ಟಿಗೆ ಪರಿಹಾರೋಪಾಯ ಕಂಡು ಹಿಡಿಯಲು ಕಸರತ್ತು ಮುಂದುವರೆದಿದೆ.
ದೆಹಲಿಯಿಂದ ಆಗಮಿಸಿ ತಮ್ಮ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ನಂತರ ದೂರವಾಣಿ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದರೂ ಇತ್ಯರ್ಥಗೊಂಡಿಲ್ಲ. ಶೀಘ್ರದಲ್ಲೇ ಉಭಯ ಪಕ್ಷಗಳ ನಾಯಕರ ನಡುವೆ ಮಾತುಕತೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ತಡೆಹಿಡಿಯಲ್ಪಟ್ಟಿರುವ ಹಲವು ನೇಮಕಗಳಿಗೆ ಸಂಬಂಧಿಸಿದಂತೆ ಸಹಿ ಹಾಕಿ ಆದೇಶ ಹೊರಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈವರೆಗೆ ಸಂಪೂರ್ಣ ಒಪ್ಪಿಗೆ ನೀಡಿಲ್ಲ. ಬದಲಾಗಿ ಚರ್ಚೆ ನಡೆಸೋಣ ಎಂಬ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹೊರತುಪಡಿಸಿ ಉಳಿದ ಎಲ್ಲ ನಿಗಮ ಮಂಡಳಿ ಹಾಗೂ ವಿವಿಧ ಹುದ್ದೆಗಳಿಗೆ ಶೀಘ್ರವೇ ನೇಮಕ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕಗ್ಗಂಟು ಇರೋದು ಇಲ್ಲಿ: ಇದನ್ನು ನಿರಾಕರಿಸುತ್ತಿರುವ ಮುಖ್ಯಮಂತ್ರಿಗಳ ಆಪ್ತ ವಲಯ, ಬಿಡಿಎ ನೇಮಕಕ್ಕೆ ಆದೇಶ ಹೊರಡಿಸುವುದಕ್ಕೆ ಅಭ್ಯಂತರವೇನೂ ಇಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಗೆ ನೇಮಕ ಮಾಡಲು ತಾಂತ್ರಿಕ ಅಡಚಣೆ ಎದುರಾಗಿದೆ. ಆದರೆ, ದೆಹಲಿ ಪ್ರತಿನಿಧಿ, ಯೋಜನಾ ಮಂಡಳಿ ಉಪಾಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸೇರಿದಂತೆ ಜೆಡಿಎಸ್ ಖಾತೆ ಅಡಿಯಲ್ಲಿ ಬರುವ ಕೆಲವು ನಿಗಮ ಮಂಡಳಿಗಳನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡುವ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕಿದೆ ಎಂದು ತಿಳಿಸಿದೆ.
ಆಯಾ ಪಕ್ಷಗಳಿಗೆ ಹಂಚಿಕೆಯಾಗಿರುವ ಖಾತೆಗಳ ಅಡಿಯಲ್ಲಿ ಬರುವ ನಿಗಮ ಮಂಡಳಿಗಳ ಅಧ್ಯಕ್ಷಗಿರಿಯೂ ಆಯಾ ಪಕ್ಷಗಳಿಗೇ ಸೀಮಿತವಾಗಿರಬೇಕು. ಆದಾಗ್ಯೂ ಜೆಡಿಎಸ್ ಪಾಲಿಗೆ ಬಂದಿರುವ ಸಾರಿಗೆ ಇಲಾಖೆ ಅಡಿಯಲ್ಲಿನ ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಅವರಿಗೆ ನೀಡಲಾಗಿದೆ. ಸಾರಿಗೆ ಇಲಾಖೆ ಅಡಿ ಬರುವ ಇನ್ನುಳಿದ ಮೂರು ನಿಗಮ ಮಂಡಳಿಗಳು, ಲೋಕೋಪಯೋಗಿ ಮತ್ತು ರೇಷ್ಮೆ ಖಾತೆ ಅಡಿಯಲ್ಲಿನ ನಿಗಮ ಮಂಡಳಿಗಳು ಜೆಡಿಎಸ್‌ನವರಿಗೇ ಸೇರಬೇಕು ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ಹೊಂದಿದ್ದಾರೆ. ಹೀಗಾಗಿ, ಇದು ಉಭಯ ಪಕ್ಷಗಳ ನಾಯಕರ ಮಾತುಕತೆ ನಂತರವೇ ಸ್ಪಷ್ಟಚಿತ್ರಣ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ.
ನಿಗಮ ಮಂಡಳಿ ಗೊಂದಲ ಹಿನ್ನೆಲೆಯಲ್ಲಿ ವೇಣುಗೋಪಾಲ್ ನೇತೃತ್ವದಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ನಾಯಕರು ಈ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಮಾಲಿನ್ಯ ನಿಯಂತ್ರಣ ಮಂಡಳಿಯೂ ಸೇರಿದಂತೆ ಕಾಂಗ್ರೆಸ್ ನೀಡಿರುವ ಪಟ್ಟಿಗೆ ಶೀಘ್ರ ಒಪ್ಪಿಗೆ ನೀಡಬೇಕು ಎಂದು ಕೋರಿದ್ದು, ಈ ವೇಳೆ ತಾಂತ್ರಿಕ ಕಾರಣಗಳಿಗಾಗಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ ಎನ್ನಲಾಗಿದೆ.
ಉಳಿದಂತೆ ಕಾಂಗ್ರೆಸ್ ನೀಡಿರುವ ಪಟ್ಟಿಗೆ ಶೀಘ್ರವೇ ಒಪ್ಪಿಗೆ ನೀಡುವ ಭರವಸೆಯನ್ನು ಅವರು ನಾಯಕರಿಗೆ ನೀಡಿದರು ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತವೆ. ಇದಕ್ಕೆ ಕಾಂಗ್ರೆಸ್ ನಾಯಕರು ಒಪ್ಪಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿ ವಿಚಾರದ ಬಗ್ಗೆ ಮತ್ತೊಮ್ಮೆ ಮಾತುಕತೆ ನಡೆಸುವ ನಿರ್ಧಾರ ಕೈಗೊಂಡರು ಎನ್ನಲಾಗಿದೆ.
ಈ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ವೇಣುಗೋಪಾಲ್ ಭೇಟಿಯಾಗದ ಸಿಎಂ
ಕುತೂಹಲಕಾರಿ ಸಂಗತಿಯೆಂದರೆ, ರಾಜ್ಯ ಕಾಂಗ್ರೆಸ್ ನಾಯಕರು ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಾಲ್ಗೊಳ್ಳಬೇಕಿತ್ತು. ಆದರೆ, ಅನಾರೋಗ್ಯದ ಕಾರಣ ನೀಡಿ ಕುಮಾರಸ್ವಾಮಿ ಅವರು ಈ ಭೇಟಿಯಿಂದ ದೂರ ಉಳಿದರು ಎಂದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ವಾಸ್ತವವಾಗಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನೇರವಾಗಿ ಭೇಟಿ ಮಾಡಿ ಮಾತುಕತೆ ನಡೆಸುವ ಬಯಕೆ ಹೊಂದಿದ್ದರು. ಆದರೆ, ಈ ಭೇಟಿಗೆ ಕುಮಾರಸ್ವಾಮಿ ಹಿಂಜರಿದ ಕಾರಣ ಪ್ರತ್ಯೇಕವಾಗಿ ಸಭೆ ನಡೆಸಿದ ಕಾಂಗ್ರೆಸ್ ನಾಯಕರು ಈ ವೇಳೆ ದೂರವಾಣಿಯಲ್ಲಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದರು ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.