ಹೈಕಮಾಂಡ್‌ಗೆ ಸಿದ್ದರಾಮಯ್ಯ ಮೇಲೆ ಅಸಮಾಧಾನ?

By Web DeskFirst Published Jul 16, 2019, 9:49 AM IST
Highlights

6 ವರ್ಷಗಳ ಕಾಲ ದೆಹಲಿಯಲ್ಲಿ ಸಿದ್ದರಾಮಯ್ಯ ಹವಾ | ಶಾಸಕರ ರಾಜಿನಾಮೆ ನಂತರ ಸಿದ್ದರಾಮಯ್ಯ ಮೇಲೆ ಮುನಿಸಿಕೊಂಡ್ರಾ ‘ಕೈ’ ಹೈಕಮಾಂಡ್? 

ಆತೃಪ್ತ ಶಾಸಕರ ಪರವಾಗಿ ಒಂದು ವಾರದಿಂದ ದಿಲ್ಲಿಯಲ್ಲಿ ಕುಳಿತು ಕಾನೂನು ಹೋರಾಟಕ್ಕೆ ಅರ್ಜಿ ಹಾಕಿಸೋದು, ವಕೀಲರ ಜೊತೆ ಕಾನ್ಫರೆನ್ಸ್‌ ಕಾಲ್ ನಡೆಸೋದು, ಮುಂಬೈ-ಬೆಂಗಳೂರು ಮಧ್ಯೆ ಸಂಪರ್ಕ ಹೀಗೆ ಎಲ್ಲವನ್ನೂ ನಿಭಾಯಿಸುತ್ತಿರುವವರು ರಮೇಶ್‌ ಜಾರಕಿಹೊಳಿ ಸಹೋದರ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ.

'ನೋಡ್ತಾ ಇರಿ...! ಅತೃಪ್ತರಿಗೆ ಬಿಜೆಪಿ ಕಚೇರಿ ಎದುರು ಟಿಕೆಟ್‌ಗೆ ಬೇಡುವ ಸ್ಥಿತಿ ಬರುತ್ತೆ'

ಹಿಂದೆ ಅನರ್ಹಗೊಂಡು, ದಿಲ್ಲಿಯಲ್ಲಿ 5 ತಿಂಗಳು ಒದ್ದಾಡಿ ಅನುಭವ ಇರುವ ಬಾಲಚಂದ್ರ ಒಂದು ವಾರದಿಂದ ದಿನ ಬೆಳಗಾದರೆ ವಕೀಲ ರೋಹಟಗಿ ಮನೆಯಲ್ಲಿ ಇರುತ್ತಾರೆ. ಸಂವಿಧಾನ ತಜ್ಞರ ಸಲಹೆಯನ್ನು ಡ್ರಾಫ್ಟ್‌ ಮಾಡಿ, ಮುಂಬೈಯಲ್ಲಿರುವ ಶಾಸಕರ ಅಫಿಡವಿಟ್‌ ಪಡೆಯುವುದೂ ಸೇರಿದಂತೆ ಎಲ್ಲವನ್ನೂ ನಿಭಾಯಿಸುತ್ತಾರೆ. ಆದರೆ ಒಬ್ಬರ ಕಣ್ಣಿಗೂ ಕಾಣೋದಿಲ್ಲ. ಮೀಡಿಯಾದಿಂದ ದೂರ.

ನೆಲಮಂಗಲದ ಮಾಜಿ ಶಾಸಕ ನಾಗರಾಜ್‌ ಮಾತ್ರ ಸಾಹುಕಾರರ ಹಿಂದೆ ಇರುತ್ತಾರೆ ಅಷ್ಟೇ. ಅಣ್ಣ ರಮೇಶ್‌ಗೆ ಮೂಗಿನ ಮೇಲೆ ಕೋಪ. ಆದರೆ ಬಾಲಚಂದ್ರ ಮಂಜುಗಡ್ಡೆ. ಕರ್ನಾಟಕದ ಪಾಲಿಟಿಕ್ಸ್‌ನಲ್ಲಿ ತೆರೆಯ ಹಿಂದಿನ ಕೂಲ್ ಆಪರೇಟರ್‌ಗಳಲ್ಲಿ ಬಾಲಚಂದ್ರ ಕೂಡ ಒಬ್ಬರು.

ಮಾಜಿ ಪ್ರಧಾನಿ ಪುತ್ರ ರಾಜ್ಯಸಭೆಗೆ ರಾಜೀನಾಮೆ, ಶೀಘ್ರ ಬಿಜೆಪಿಗೆ ಸೇರ್ಪಡೆ?

ಹೈಕಮಾಂಡ್‌ ಮನಸ್ಸಿನಿಂದ ಇಳಿದ ಸಿದ್ದು

6 ವರ್ಷಗಳ ಕಾಲ ಸಿದ್ದರಾಮಯ್ಯ ಹೇಳಿದ್ದನ್ನೇ ದೆಹಲಿ ಕಾಂಗ್ರೆಸ್‌ ನಾಯಕರು ಬಹುತೇಕ ಒಪ್ಪಿಕೊಂಡು ಕಳುಹಿಸುತ್ತಿದ್ದರು. ಆದರೆ ಈಗ ಶಾಸಕರ ಅತೃಪ್ತಿ ವಿಚಾರದಲ್ಲಿ ಮಾತ್ರ ಸಿದ್ದು ಬಗ್ಗೆ ರಾಹುಲ…ರಿಂದ ಹಿಡಿದು ಕಾಂಗ್ರೆಸ್‌ ಮ್ಯಾನೇಜರ್‌ಗಳಾದ ಗುಲಾಂ ನಬಿ, ಅಹ್ಮದ್‌ ಪಟೇಲ್, ವೇಣುಗೋಪಾಲ್ ವರೆಗೆ ಎಲ್ಲರೂ ಬೇಸರಗೊಂಡಿದ್ದಾರೆ.

ವರಿಷ್ಠರ ಜೊತೆ ಮಾತನಾಡೋದು, ಸಭೆ ನಡೆಸೋದು ಬಿಟ್ಟರೆ ಅತೃಪ್ತರನ್ನು ಕರೆತರಲು ಸಿದ್ದು ತನ್ನ ತನುಮನ ಬಳಸಿ ಹೆಚ್ಚೇನೂ ಮಾಡಲಿಲ್ಲ ಎಂಬ ಬೇಸರ ಎಲ್ಲರಿಗೂ ಆಗಿದೆ. 13 ಶಾಸಕರು ಮೊದಲ ದಿನ ಬಂಡೆದ್ದು ರಾಜೀನಾಮೆ ಕೊಡಲು ಬಂದಾಗ ದಿಲ್ಲಿಯಲ್ಲಿದ್ದ ಅಹ್ಮದ್‌ ಭಾಯಿ ಡಿಕೆಶಿಗೆ, ‘ಕೂಡಲೇ ವಿಧಾನಸೌಧಕ್ಕೆ ಹೋಗು’ ಎಂದರು. ಡಿಕೆಶಿ ಝೀರೋ ಟ್ರಾಫಿಕ್‌ ಮಾಡಿಕೊಂಡು ಬರುವಾಗ ದಾರಿಮಧ್ಯೆ, ಮನೆಯಲ್ಲಿದ್ದ ಸಿದ್ದುಗೆ ಫೋನ್‌ ಮಾಡಿದರಂತೆ.

‘ಸ್ಪೀಕರ್‌ ಪಕ್ಕದಲ್ಲೇ ನಿಮ್ಮ ಕಚೇರಿ ಇದೆ. ನಾನು ಹೇಗಾದರೂ ಮಾಡಿ ಕಾಂಗ್ರೆಸ್‌ ಶಾಸಕರನ್ನು ಕರೆದುಕೊಂಡು ಬರುತ್ತೇನೆ. ಒಂದು ಸಲ ಹೊರಗೆ ಹೋಗಿಬಿಟ್ಟರೆ ಹಿಡಿಯೋದು ಕಷ್ಟ. ನೀವೂ ಬನ್ನಿ’ ಎಂದರಂತೆ. ಆಗ ಸಿದ್ದು, ‘ಅಯ್ಯೋ ಈಗ ಎಲ್ಲ ಕೈಮೀರಿ ಹೋಗಿದೆ. ನನಗೆ ಅವೆಲ್ಲ ಆಗೋದಿಲ್ಲ’ ಎಂದುಬಿಟ್ಟರಂತೆ.

ಮರುದಿನ ಇದಕ್ಕೆಂದೇ ದಿಲ್ಲಿಗೆ ಬಂದ ಡಿಕೆಶಿ ಯಥಾವತ್ತಾಗಿ ಮೇಡಂನಿಂದ ಹಿಡಿದು ಎಲ್ಲರಿಗೂ ರಿಪೋರ್ಟ್‌ ಮಾಡಿ ಹೋಗಿದ್ದಾರೆ. ಡಿಕೆಶಿ ಆಪ್ತರ ಬಳಿ ಹೇಳಿಕೊಂಡಿರುವ ಪ್ರಕಾರ, ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಧಾವಂತ ಆ ಕಡೆ ಕುಮಾರಸ್ವಾಮಿ ಮತ್ತು ರೇವಣ್ಣ, ಈ ಕಡೆ ಪರಮೇಶ್ವರ್‌ ಮತ್ತು ತಮಗೆ ಬಿಟ್ಟರೆ ಉಳಿದವರೆಲ್ಲರೂ ‘ಹೋದರೆ ಹೋಗಲಿ’ ಎಂದು ಲೆಕ್ಕ ಹಾಕಿದ್ದಾರಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ’ಇಂಡಿಯಾ ಗೇಟ್’ ಕ್ಲಿಕ್ ಮಾಡಿ 

click me!