ಭಾಗಶಃ ಚಂದ್ರ ಗ್ರಹಣ : ದೇವಸ್ಥಾನಗಳಲ್ಲಿ ಸಮಯ ಬದಲು

By Web DeskFirst Published Jul 16, 2019, 9:41 AM IST
Highlights

149 ವರ್ಷಗಳ ಬಳಿಕ ವಿಶೇಷ ಚಂದ್ರಗ್ರಹಣ ಸಂಭವಿಸುತ್ತಿದ್ದು, ದೇವಾಲಯಗಳಲ್ಲಿ ದರ್ಶನ ಸಮಯ ಬದಲಾಯಿಸಲಾಗಿದೆ. 

ನವದೆಹಲಿ/ಬೆಂಗಳೂರು [ಜು.16]: ಖಗೋಳದ ಕೌತುಕಗಳ ಪೈಕಿ ಒಂದಾದ ಚಂದ್ರಗ್ರಹಣವು ಮಂಗಳವಾರ ಮತ್ತು ಬುಧವಾರ ಘಟಿಸಲಿದೆ. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಹಾದುಹೋಗುವ ಮೂಲಕ ಉಂಟಾಗುವ ಈ ಬೆಳವಣಿಗೆ ಒಟ್ಟಾರೆ 5.34 ಗಂಟೆ ಕಾಲ ಸಂಭವಿಸಲಿದೆ. ಈ ಪೈಕಿ ಭಾಗಶಃ ಚಂದ್ರಗ್ರಹಣ 2.58 ಗಂಟೆಗಳದ್ದಾಗಿರಲಿದೆ. ಭಾರತ ಸೇರಿ ವಿಶ್ವದ ಹಲವು ದೇಶಗಳಲ್ಲಿ ಗ್ರಹಣವು ವೀಕ್ಷಣೆಗೆ ಸಿಗಲಿದೆ. ಗುರುಪೂರ್ಣಿಮೆಯಂದೇ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತಿರುವುದು 149 ವರ್ಷಗಳ ಬಳಿಕ ಎಂಬುದು ವಿಶೇಷ.

ಭಾರತದಲ್ಲಿ ಚಂದ್ರಗ್ರಹಣವು ಜು.17ರ ಮಧ್ಯರಾತ್ರಿ 12.13ಕ್ಕೆ ಆರಂಭವಾಗಲಿದೆ. 1.31ರ ವೇಳೆಗೆ ಭಾಗಶಃ ಚಂದ್ರಗ್ರಹಣ ಆರಂಭವಾಗಲಿದ್ದು, ಮುಂಜಾನೆ 5.47ಕ್ಕೆ ಗ್ರಹಣ ಪೂರ್ಣಗೊಳ್ಳಲಿದೆ. ಇದು 2019ರ ಕೊನೇ ಚಂದ್ರಗ್ರಹಣ. ಮುಂದಿನ ಚಂದ್ರಗ್ರಹಣ 2020ರ ಜ.10ರಂದು ಸಂಭವಿಸಲಿದೆ.

ಪೂಜೆ, ದರ್ಶನ ಸಮಯ ಬದಲು: ಚಂದ್ರಗ್ರಹಣ ಪ್ರಯುಕ್ತ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಜಪ, ತಪ ನಡೆಯಲಿದೆ. ಜತೆಗೆ, ದೇಗುಲದ ದರ್ಶನ, ಪೂಜೆಗಳ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಎಲ್ಲ ದೇವಸ್ಥಾನಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನದ ಪೂಜೆ, ದರ್ಶನಗಳು ಯಥಾಪ್ರಕಾರ ನಡೆಯಲಿದೆ. ಸಂಜೆ ಪೂಜೆ, ದರ್ಶನಗಳ ವೇಳೆ ಬದಲಾವಣೆ ಮಾಡಿಕೊಳ್ಳಲಾಗಿದೆ.

click me!